| ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಬಗ್ವಾಡಿ ರಾಜು ಪೂಜಾರಿ- ಸುಜಾತಾ ಪೂಜಾರಿ ದಂಪತಿ ಪುತ್ರಿ ಶ್ರಾವ್ಯಾ ಆರ್.(15) ಕರುಳು ಸಂಬಂಧಿತ ಸಮಸ್ಯೆಯಿಂದ ಶಾಲೆ ಮೆಟ್ಟಿಲು ಹತ್ತಲಾರದೆ ಆರು ತಿಂಗಳು ಮಂಚದಲ್ಲಿ ಮಲಗಿದ ಸ್ಥಿತಿಯಲ್ಲಿದ್ದರೂ ನೋಟ್ಸ್, ಛಾಯಾಪ್ರತಿ ಓದಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 580 ಅಂಕ ಪಡೆದು ಅದ್ಭುತ ಸಾಧನೆ ಮಾಡಿದ್ದಾಳೆ!
ಎಲ್ಲರಂತೆ ಚೂಟಿಯಾಗಿದ್ದ ಶ್ರಾವ್ಯಾ ಐಬಿಡಿ ಎನ್ನುವ ಕರುಳು ಸಂಬಂಧಿ ಕಾಯಿಲೆಯಿಂದ ದೇಹದ ತೂಕ ಕಳೆದುಕೊಂಡು ಈಗ ಕೇವಲ 21 ಕೆ.ಜಿ.ಗೆ ಇಳಿದಿದ್ದಾಳೆ. ಈಕೆ ಆತ್ರಾಡಿ ಮಕ್ಕಳ ಕೂಟ ಶಾಲೆಗೆ ದಾಖಲಾಗಿ ಎಸ್ಸೆಸ್ಸೆಲ್ಸಿ ಪೂರೈಸಿದ್ದು, ಮಕ್ಕಳ ಕೂಟ ಶಾಲಾ ಸಂಚಾಲಕ ಸುಭಾಸ್ ಶೆಟ್ಟಿ ಹಾಗೂ ದೀಪಿಕಾ ಶೆಟ್ಟಿ ಅನಾರೋಗ್ಯದ ನಡುವೆಯೂ ಶ್ರಾವ್ಯಾಳ ಓದಿನ ತುಡಿತ ಕಂಡು ನೋಟ್ಸ್ ಹಾಗೂ ಆನ್‌ಲೈನ್ ಪಾಠದ ಛಾಯಾಪ್ರತಿ ನೀಡಿ ಸಹಕರಿಸಿದ್ದರು. ಶ್ರಾವ್ಯಾಳ ತಂದೆ ತಾಯಿ ಹೆಮ್ಮಾಡಿಯಲ್ಲಿ ಚಿಕ್ಕ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದಾರೆ.
ಮೂರು ವರ್ಷಗಳಿಂದ ಅನಾರೋಗ್ಯದ ನಡುವೆಯೂ ಓದಿಗೆ ಹೆಚ್ಚು ಗಮನ ಕೊಡುತ್ತಿದ್ದ ಶ್ರಾವ್ಯಾ, 10ನೇ ತರಗತಿಗೆ ಬಂದ ನಂತರ ಆಸ್ಪತ್ರೆ ಮಂಚದ ಮೇಲೆ ಮಲಗಿಯೇ ದಿನ ಕಳೆದಿದ್ದಾಳೆ. ಅವಳ ಓದಿನ ಹಠ ನೋಡಿ ನಮ್ಮ ಕಣ್ಣುತುಂಬಿ ಬರುತ್ತಿತ್ತು. ಪರೀಕ್ಷೆ ಸಮಯದಲ್ಲಿ ರಾತ್ರಿ 3 ಗಂಟೆಗೆಲ್ಲ ಓದುತ್ತಿದ್ದಳು. ಎಸ್ಸೆಸ್ಸೆಲ್ಸಿಯಲ್ಲಿ ಶೇ.98 ಅಂಕ ನಿರೀಕ್ಷಿಸಿದ್ದೆವು. ಅಷ್ಟು ಬರಲಿಲ್ಲ ಎಂದು ಮುಸುಕು ಹೊದ್ದು ಮಲಗಿದ ಆಕೆಯನ್ನು ಸಮಾಧಾನ ಮಾಡುವುದರಲ್ಲಿ ನಾವು ಸುಸ್ತಾಗಿದ್ದೆವು.
| ಸುಶೀಲಾ ಪೂಜಾರಿ ದೊಡ್ಡಮ್ಮ
ನಿಯಮಿತ ಚಿಕಿತ್ಸೆ ಪಡೆದರೆ ಕರಳು ಸಂಬಂಧಿ ಕಾಯಿಲೆಯಿಂದ ಶ್ರಾವ್ಯಾಳನ್ನು ಗುಣಪಡಿಸಬಹುದು. ಶಿಕ್ಷಕರ ಪಾಠ ಪ್ರವಚನದಲ್ಲಿ ಪಾಲ್ಗೊಳ್ಳದೆ, ಕೇವಲ ಜೆರಾಕ್ಸ್ ಪ್ರತಿ ನೋಡಿ ಪಾಸಾದ ಶ್ರಾವ್ಯ ಸಾಧನೆ ನಿಜಕ್ಕೂ ಅದ್ಭುತ. ಈಕೆಗೆ ಚಿಕಿತ್ಸೆ ನೀಡಲು ಸಿದ್ಧ.
| ಡಾ. ನಾಗೇಶ್ ನೋಡಲ್ ಅಧಿಕಾರಿ, ತಾಲೂಕು ಸರ್ಕಾರಿ ಆಸ್ಪತ್ರೆ ಕುಂದಾಪುರ
ಅಂದು ಸಹಾಯ ಮಾಡಿದ್ದವಳೇ ಇಂದು ಅಸಹಾಯಕಿ
ಕೊಡಗಿನಲ್ಲಿ ಪ್ರಕೃತಿ ವಿಕೋಪದ ಸಂದರ್ಭ ಶ್ರಾವ್ಯಾಳ ಮಾನವೀಯತೆ ಸುದ್ದಿಯಾಗಿತ್ತು. ಎಂಟನೇ ತರಗತಿ ಓದುತ್ತಿದ್ದ ಆಕೆ ಕೊಡಗು ಸಂತ್ರಸ್ತರ ಪರವಾಗಿ ಪಾಲಕರ, ಶಿಕ್ಷಣ ಪ್ರೇಮಿಗಳ ಮೂಲಕ 60 ಸಾವಿರ ರೂ. ಹಣ ಸಂಗ್ರಹಿಸಿ ಮಾನವೀಯತೆ ಮೆರೆದಿದ್ದಳು. ಆದರೆ ಇಂದು ಅಸಹಾಯಕಿ. ಶ್ರಾವ್ಯಾಳ ದೈಹಿಕ ಶಕ್ತಿ ಕುಂದಿದ್ದರೂ, ಓದುವ ಆಸಕ್ತಿ ಬತ್ತಿಲ್ಲ. ಪಿಯುಸಿಯಲ್ಲಿ ಪಿಸಿಎಂಬಿ ಆಯ್ಕೆ ಮಾಡಿ ಸ್ವಾವಲಂಬಿ ಜೀವನ ಸಾಗಿಸಬೇಕೆಂಬ ಕನಸು ಕಟ್ಟಿಕೊಂಡಿದ್ದಾಳೆ. ಶ್ರಾವ್ಯಾ ಶಿರಸಿ ಪ್ರಕೃತಿ ಚಿಕಿತ್ಸಾ ಕೇಂದ್ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ವಲ್ಪಮಟ್ಟಿಗೆ ಸುಧಾರಣೆ ಕಂಡುಕೊಂಡಿದ್ದಾಳೆ. ಈಕೆಯ ಭವಿಷ್ಯಕ್ಕೆ ಮಾನವೀಯತೆಯ ಬೆಂಬಲ ಬೇಕಾಗಿದೆ. ಶ್ರಾವ್ಯಾ ಸಂಪರ್ಕ ಸಂಖ್ಯೆ 7022088015.