More

    ಚಿತ್ರ ವಿಮರ್ಶೆ: ‘ತಿಮ್ಮಯ್ಯ ಅಂಡ್​ ತಿಮ್ಮಯ್ಯ’ ಚಿತ್ರದಲ್ಲಿ ತಾತ-ಮೊಮ್ಮಗನ ಜುಗಲ್​ಬಂದಿಯೇ ಜೀವಾಳ

    ನಿರ್ಮಾಣ: ರಾಜೇಶ್​ ಶರ್ಮ
    ನಿರ್ದೇಶನ: ಸಂಜಯ್​ ಶರ್ಮ
    ತಾರಾಗಣ: ಅನಂತ್​ ನಾಗ್​, ದಿಗಂತ್​, ಐಂದ್ರಿತಾ ರೇ, ಶುಭ್ರ ಅಯ್ಯಪ್ಪ, ಪ್ರಕಾಶ್​ ತುಮ್ಮಿನಾಡು ಮುಂತಾದವರು

    – ಚೇತನ್​ ನಾಡಿಗೇರ್​

    ತಂದೆ-ತಾಯಿ ಮತ್ತು ಮಕ್ಕಳ ನಡುವಿನ ಬಾಂಧವ್ಯದ ಕುರಿತಾದ ಹಲವು ಸಿನಿಮಾಗಳು ಇದುವರೆಗೂ ಬಂದಿವೆ. ಆದರೆ, ತಾತ-ಮೊಮ್ಮಗನ ಸಂಬಂಧ ಮತ್ತು ಬಾಂಧವ್ಯದ ಕುರಿತಾದ ಕಥೆಗಳು ಬಂದಿದ್ದು ಕಡಿಮೆಯೇ. ‘ತಿಮ್ಮಯ್ಯ ಅಂಡ್ ತಿಮ್ಮಯ್ಯ’ ಆ ಸಾಲಿಗೆ ಸೇರುವಂತಹ ಒಂದು ಎಮೋಷನಲ್​ ಚಿತ್ರ.

    ಇದನ್ನೂ ಓದಿ: ಸರಿ-ತಪ್ಪು ಏನೇ ನಡೆದರೂ ದೈವ ನೋಡಿಕೊಳ್ಳುತ್ತದೆ ಎಂಬ ನಂಬಿಕೆಯಲ್ಲಿ ನಾನಿದ್ದೇನೆ; ರಿಷಬ್ ಶೆಟ್ಟಿ

    ಜೀವನದಲ್ಲಿ ಸಾಕಷ್ಟು ವ್ಯವಹಾರ ಮಾಡುವುದಕ್ಕೆ ಹೋಗಿ ಎಲ್ಲದರಲ್ಲೂ ಸೋತು ಸುಣ್ಣವಾಗಿರುವ ವಿನ್ಸಿ ಅಲಿಯಾಸ್​ ಜ್ಯೂನಿಯರ್​ ತಿಮ್ಮಯ್ಯ (ದಿಗಂತ್​), ತನ್ನ ಗೆಳತಿ ಸೌಮ್ಯಳನ್ನು (ಶುಭ್ರ ಅಯ್ಯಪ್ಪ) ಮದುವೆಯಾಗಿ ಲಿಸ್ಬನ್​ನಲ್ಲಿ ನೆಲೆಗೊಳ್ಳುವುದಕ್ಕೆ ಯೋಚನೆ ಮಾಡಿರುತ್ತಾನೆ. ಅವರಿಬ್ಬರ ಎಂಗೇಜ್​ಮೆಂಟ್​ ಸಹ ಆಗಿರುತ್ತದೆ. ಅಷ್ಟರಲ್ಲಿ ಕೊಡಗಿನಲ್ಲಿರುವ ತನ್ನ ತಾತ ಸೀನಿಯರ್​ ತಿಮ್ಮಯ್ಯನನ್ನು (ಅನಂತ್​ ನಾಗ್​) ಮೂರು ತಿಂಗಳ ಕಾಲ ನೋಡಿಕೊಳ್ಳುವ ಜವಾಬ್ದಾರಿ ಅವನ ಹೆಗಲ ಮೇಲೇರುತ್ತದೆ. ಊರಿನಲ್ಲಿದ್ದ ತಾತನನ್ನು ತಂದು ಬೆಂಗಳೂರಿನಲ್ಲಿಟ್ಟುಕೊಂಡರೆ, ತಾತನ ತರಲೆ ಒಂದೆರಡಲ್ಲ. ತಾತ ಸೃಷ್ಟಿಸುವ ಸಮಸ್ಯೆಗಳು, ಅವರ ಹಠಮಾರಿ ಸ್ವಭಾವ ಇವೆಲ್ಲವನ್ನೂ ಮೊಮ್ಮಗನಿಂದ ಸಂಭಾಳಿಸುವುದು ಸಾಧ್ಯವಾ? ಅಂದುಕೊಂಡಂತೆ ಮೊಮ್ಮಗನಿಗೆ ವಿದೇಶಕ್ಕೆ ಹೋಗಿ ನೆಲೆಸುವುದಕ್ಕೆ ಸಾಧ್ಯವಾ? ಎಂಬುದು ಚಿತ್ರದ ಕಥೆ.

    ಮೊದಲೇ ಹೇಳಿದಂತೆ, ಇಂತಹ ಜಾನರ್​ನಲ್ಲಿ ಕನ್ನಡದಲ್ಲಿ ಚಿತ್ರಗಳು ಬಂದಿದ್ದು ಕಡಿಮೆಯೇ. ಆ ಕೊರಗನ್ನು ‘ತಿಮ್ಮಯ್ಯ ಅಂಡ್​ ತಿಮ್ಮಯ್ಯ’ ತುಂಬುತ್ತದೆ. ಇಲ್ಲಿ ಮನರಂಜನೆ, ಫೈಟು, ಟಪ್ಪಾಂಗುಚ್ಚಿ ಹಾಡುಗಳು ಯಾವುದೂ ಇಲ್ಲ. ಇದೊಂದು ಪಕ್ಕಾ ಕ್ಲಾಸ್​ ಸಿನಿಮಾ. ಇಲ್ಲಿ ಭಾವನೆಗಳೇ ಪ್ರಧಾನ. ಮೊದಲಾರ್ಧ ಚಿತ್ರದ ಕ್ಯಾನ್ವಾಸ್​ ಮತ್ತು ಪಾತ್ರಗಳನ್ನು ಪರಿಚಯಿಸುವುದಕ್ಕೆ ಸೀಮಿತವಾಗುತ್ತದೆ. ದ್ವಿತೀಯಾರ್ಧದಲ್ಲಿ ಚಿತ್ರ ಗಂಭೀರವಾಗುತ್ತಾ ಹೋಗುತ್ತದೆ. ಅದರಲ್ಲೂ ಹಲವು ವರ್ಷಗಳಿಂದ ಮುಚ್ಚಿಹೋಗಿರುವ ಕೆಫೆ ತರಲು ತಾತ-ಮೊಮ್ಮಗ ಮಾಡುವ ಪ್ರಯತ್ನ, ಈ ನಿಟ್ಟಿನಲ್ಲಿ ಅವರಿಬ್ಬರೂ ಕ್ರಮೇಣ ಹತ್ತಿರವಾಗುವುದು, ಅದರ ಜತೆಗೆ ಅವರು ತಮ್ಮನ್ನು ತಾವು ಕಂಡುಕೊಳ್ಳುವುದು … ಇವೆಲ್ಲವೂ ಪ್ರೇಕ್ಷಕರಿಗೆ ಖುಷಿ ಕೊಡುತ್ತದೆ.

    ‘ತಿಮ್ಮಯ್ಯ & ತಿಮ್ಮಯ್ಯ’ ಚಿತ್ರದ ಸಮಸ್ಯೆ ಎಂದರೆ ಅದರ ಅವಧಿ. ನಿರ್ದೇಶಕ ಸಂಜಯ್​ ಶರ್ಮ ಮೂಲತಃ ಜಾಹೀರಾತು ಕ್ಷೇತ್ರದವರು. ಅಲ್ಲಿ ಹಲವು ನಿಮಿಷಗಳ ಕಥೆಯನ್ನು ಅವರು ಕೆಲವು ಸೆಕೆಂಡುಗಳಲ್ಲಿ ಹೇಳಿದ್ದರು. ಆದರೆ, ಇಲ್ಲಿ ಕ್ಷಣಗಳಲ್ಲಿ ಹೇಳಬಹುದಾದ್ದನ್ನು ಅವರು ಹಲವು ನಿಮಿಷಗಳಲ್ಲಿ ಹೇಳಿದ್ದಾರೆ. ಹಾಗಾಗಿ, ಚಿತ್ರ ನಿಧಾನವಾಗುತ್ತದೆ. ಚಿತ್ರವನ್ನು ಒಂದಿಷ್ಟು ಟ್ರಿಮ್​ ಮಾಡಿದ್ದರೆ, ‘ತಿಮ್ಮಯ್ಯ & ತಿಮ್ಮಯ್ಯ’ನ ಕಥೆ ಇನ್ನಷ್ಟು ಆಪ್ತವೇನಿಸುತ್ತಿತ್ತು.

    ಇದನ್ನೂ ಓದಿ: ಫ್ರಾನ್ಸ್​ನ ಥ್ರೀ ಕಾಂಟಿನೆಂನ್ಟ್ಸ್​ ಫೆಸ್ಟಿವಲ್​ನಲ್ಲಿ ರಿಷಬ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ಗೆ ಪ್ರಶಸ್ತಿ

    ಇತ್ತೀಚಿನ ಚಿತ್ರಗಳಲ್ಲಿ ಹೆಚ್ಚಾಗಿ ಗಾಂಭೀರ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದ ಅನಂತ್​ ನಾಗ್​ ಅವರಿಗೆ ಇಲ್ಲೊಂದು ವಿಭಿನ್ನ ಪಾತ್ರ ಸಿಕ್ಕಿದೆ. ಗಂಭೀರವಾಗಿರುವಂತೆ ಕಾಣುತ್ತಾ, ಮೊಮ್ಮಗನನ್ನು ತಮ್ಮದೇ ಶೈಲಿಯಲ್ಲಿ ಕಿಚಾಯಿಸುತ್ತಾ, ಅವನ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಾ, ನಗಿಸುತ್ತಾ, ಅಳಿಸುತ್ತಾ ಅವರು ಇಷ್ಟವಾಗುತ್ತಾರೆ. ಈ ತರಹದ್ದೊಂದು ಪಾತ್ರಕ್ಕೆ ಅವರಲ್ಲದೆ, ಇನ್ನೊಬ್ಬರನ್ನು ಊಹಿಸಿಕೊಳ್ಳುವುದು ಸಹ ಕಷ್ಟ. ದಿಗಂತ್​ ಸಹ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ತಾತ-ಮೊಮ್ಮಗನ ಜುಗಲ್​ಬಂದಿಯೇ ಈ ಚಿತ್ರದ ಜೀವಾಳ ಎಂದರೆ ತಪ್ಪಿಲ್ಲ.

    ಅನಂತ್ ನಾಗ್​ ಮತ್ತು ದಿಗಂತ್​ ಅಲ್ಲದೆ, ಗಮನಸೆಳೆಯುವ ಇನ್ನಷ್ಟು ಪಾತ್ರಗಳು ಇವೆ. ಐಂದ್ರಿತಾ ರೇ, ವಿನೀತ್​, ವೆಂಕಟೇಶ್​, ಪ್ರಕಾಶ್​ ತುಮ್ಮಿನಾಡು ತಮ್ಮ ಪಾತ್ರ ನಿರ್ವಹಣೆಯಿಂದ ಇಷ್ಟವಾಗುತ್ತಾರೆ. ಶುಭ್ರ ಅಯ್ಯಪ್ಪ ಪಾತ್ರಕ್ಕೆ ಹೆಚ್ಚು ಸ್ಕೋಪ್​ ಇಲ್ಲ. ಇಡೀ ಪರಿಸರವನ್ನು ಛಾಯಾಗ್ರಾಹಕ ಬಾಲಚಂದ್ರ ತೋಟ ಬಹಳ ಸುಂದರವಾಗಿ ಹಿಡಿದಿಟ್ಟಿದ್ದಾರೆ. ಅನೂಪ್ ಸಿಳೀನ್ ಹಿನ್ನೆಲೆ ಸಂಗೀತ ಈ ಸಿನಿಮಾದ ಇನ್ನೊಂದು ಹೈಲೈಟ್​.

    ಸದ್ದಿಲ್ಲದೆ ನಡೆಯಿತಾ ವಸಿಷ್ಠ, ಹರಿಪ್ರಿಯಾ ನಿಶ್ಚಿತಾರ್ಥ? ಸ್ಯಾಂಡಲ್​ವುಡ್​ನಲ್ಲಿ ಹೀಗೊಂದು ಸುದ್ದಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts