More

    ಅಕ್ರಮ ಗಣಿಗಾರಿಕೆಗಿಲ್ಲ ಕಡಿವಾಣ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಕಳೆದ ಮಳೆಗಾಲದಲ್ಲಿ ಪಶ್ಚಿಮಘಟ್ಟ ಬಾಳೆಬರೆ ಘಾಟಿ ಕುಸಿಯಲು ಕಲ್ಲು ಗಣಿಗಾರಿಕೆ ಕಾರಣ ಎಂದು ಹೇಳಲಾಗುತ್ತಿದೆ. ಗಂಗನಾಡು ಭೂ ಕಂಪನಕ್ಕೂ ಗಣಿಗಾರಿಕೆಯ ಭಾರಿ ವಾಹನಗಳ ಓಡಾಟ ಕಾರಣ ಎಂದು ಭೂಗರ್ಭ ಶಾಸ್ತ್ರಜ್ಞರು ಸ್ಪಷ್ಟಪಡಿಸಿದ್ದಾರೆ. ಆದರೆ ಅಕ್ರಮ ಗಣಿಗಾರಿಕೆಗೆ ಕಡಿವಾಣ ಬಿದ್ದಿಲ್ಲ. ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇನ್ನೂ ಎಚ್ಚೆತ್ತಿಲ್ಲ.

    ಪಶ್ಚಿಮ ಘಟ್ಟದ ಬುಡದಲ್ಲಿ ಸಂಚಾರ ಮಾಡುವಾಗ ಅಲ್ಲಲ್ಲಿ ರಾಶಿಬಿದ್ದ ತುಂಡು ಕಲ್ಲು, ಗಜ ಗಾತ್ರದ ಕಲ್ಲು ಕ್ವಾರಿ ಹೊಂಡ, ಹಾಳು ಬಿದ್ದ ಕೋಟೆ, ಕೆಂಪು ಕಲ್ಲು ಗಣಿಗಾರಿಕೆ, ಕಲ್ಲು ತೆಗೆಯುವುದರಿಂದ ಹಿಡಿದು ಸಾಗಾಟದ ತನಕ ಎಲ್ಲವೂ ಅಕ್ರಮ. ಗಣಿಗಾರಿಕೆಗೆ ಇಲಾಖೆ ಪರವಾನಗಿಗೆ ಅರ್ಜಿ ಹಾಕುವವರಿಲ್ಲ. ಆದರೂ, ಭಟ್ಕಳ ಗಡಿಯಿಂದ ಹಿಡಿದು ಉಡುಪಿ ಜಿಲ್ಲೆ ಗಡಿಯ ತನಕ ನಡೆಯುತ್ತಿದೆ. ಇವುಗಳ ಪೈಕಿ ಕೆಂಪು ಕಲ್ಲು ಗಣಿಯಲ್ಲಿ ಕಾನೂನುಬದ್ಧವಾಗಿರುವುದು ಬೆರಳೆಣಿಕೆಯಷ್ಟು ಮಾತ್ರ!

    ಕರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಆದ ಹೆಚ್ಚಿನ ಗ್ರಾಮದಲ್ಲಿ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಅರೆಶಿರೂರು, ತೂದಳ್ಳಿ, ಗಂಗನಾಡು, ಶಿರೂರು, ಕೆರಾಡಿ, ಜಡ್ಕಲ್, ಮುದೂರು, ಹೊಸೂರು, ವಂಡ್ಸೆ, ನೆಂಪು, ನೇರಳಕಟ್ಟೆ, ಕಟ್‌ಬೇಲ್ತೂರು, ಆಲೂರು, ಯಡೆಮೊಗೆ, ಹಳ್ಳಿಹೊಳೆ, ಆಜ್ರಿ, ಗೋಳಿಅಂಗಡಿ, ಬೆಳ್ವೆ, ಹೆಸ್ಕತ್ತೂರು, ಬೆಳ್ಳಾಲ, ರಾಮ್‌ಪೈಜೆಟ್ಟು, ಹೊಸಂಗಡಿ ಗಣಿಗಾರಿಕೆ ನಡೆಯುವ ಪ್ರದೇಶಗಳು. ಕೆಂಪು ಕಲ್ಲು ಗಣಿ ನಡೆಯುವ ಜಾಗ ಅಕ್ರಮ ಸಕ್ರಮ, ವೈಲ್ಡ್‌ಲೈಫ್, ರಕ್ಷಿತಾರಣ್ಯ, ಕಂದಾಯ ಭೂಮಿ!

    ದಿನಕ್ಕೆ 25 ಸಾವಿರ ಕಲ್ಲು ಸಾಗಾಟ: ಒಂದೊಂದು ಊರಲ್ಲಿ 25ಕ್ಕೂ ಮಿಕ್ಕಿ ಕೆಂಪು ಕಲ್ಲು ಕ್ವಾರಿಗಳಿವೆ. ಒಂದೆ ಕಡೆ ಮೂರ‌್ನಾಲ್ಕು ಕಲ್ಲು ಕೊರೆಯುವ ಯಂತ್ರ ಇರುತ್ತದೆ. ಗಣಿ ಲೆಕ್ಕವೇ ಸಿಗುವುದಿಲ್ಲ. ಪ್ರತೀ ದಿನ ನೂರಕ್ಕೂ ಹೆಚ್ಚು ವಾಹನಗಳು ಕಲ್ಲು ಸಾಗಿಸುತ್ತವೆ. 250 ಕಲ್ಲು ಲೋಡ್ ಮಾಡಿದರೂ ದಿನಕ್ಕೆ 25 ಸಾವಿರ ಕಲ್ಲು ಹೋಗುತ್ತದೆ. ಒಂದು ಕಲ್ಲಿಗೆ ಗರಿಷ್ಠ 32 ರೂ.ಇದ್ದು, 8 ಲಕ್ಷ ವಹಿವಾಟು ನಡೆಯುತ್ತದೆ. ಇಷ್ಟೊಂದು ಅಕ್ರಮ ಕುಮ್ಮಕ್ಕಿಲ್ಲದೆ ನಡೆಯಲು ಸಾಧ್ಯವಿಲ್ಲ ಎಂಬುದು ಸ್ಥಳೀಯರ ಆರೋಪ.

    ಗಣಿ ಮಾಲೀಕರು ಯೂನಿಯನ್ ಮಾಡಿಕೊಂಡು, ಲಂಚ ಕೊಡುವ ಮೂಲಕ ಅಧಿಕಾರಿಗಳ ಬಾಯಿಮುಚ್ಚಿಸಿದ್ದಾರೆ. ಡಿಸಿ ಅವರಿಂದ ಹಿಡಿದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದೂರು ಕೊಟ್ಟು ಸಾಕಾಗಿದೆ. ಕಲ್ಲು ಸಾಗಿಸುವ ವಾಹನಗಳ ಸಂಚಾರಕ್ಕೆ ಹೆದರಿ ಸಣ್ಣ ವಾಹನ ಸವಾರರು ರಸ್ತೆಯ ಬದಿಗೆ ಸರಿಯಬೇಕು. ಭಾರಿ ವಾಹನಗಳ ಸಂಚಾರದಿಂದ ಗ್ರಾಮೀಣ ಭಾಗದ ರಸ್ತೆ, ಸೇತುವೆಗಳು ಹಾನಿಗೊಂಡಿವೆ.

    ಆನಂದ ಕಾವೂರು ಹೊಸಂಗಡಿ
    ಸಂಚಾಲಕ, ದಲಿತ ಸಂಘರ್ಷ ಸಮಿತಿ

    ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಕೆಂಪು ಕಲ್ಲು ಗಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಸೂಚಿಸಲಾಗುವುದು. ಅಕ್ರಮವಾಗಿ ನಡೆಯುತ್ತಿದ್ದರೆ ದಾಳಿ ಮಾಡಿ, ಪರಿಕರ ಮುಟ್ಟುಗೋಲು ಹಾಕಲು ಸೂಚಿಸಲಾಗುವುದು. ಅಕ್ರಮ ಕೆಂಪು ಕಲ್ಲು ಗಣಿ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗುವುದು. ಪರವಾನಗಿ ಪಡೆದು ನಿಯಮದಂತೆ ಗಣಿ ನಡೆಸಬೇಕು. ಅಕ್ರಮ ಎಸಗಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.

    ಕೆ.ರಾಜು
    ಉಪವಿಭಾಗಾಧಿಕಾರಿ, ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts