More

    ಸಾರಿಗೆ ಸಂಸ್ಥೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ

    ಗದಗ: ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದು, ಎಲ್ಲ ಸಂಸ್ಥೆಗಳನ್ನು ಸರ್ಕಾರ ಮುಚ್ಚಲಿದೆ ಎಂಬ ಮಾತಿನಲ್ಲಿ ಅರ್ಥವಿಲ್ಲ. ಸಂಸ್ಥೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

    ನಗರದಲ್ಲಿ ಭಾನುವಾರ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ನೂತನ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನೌಕರರಾಗಲಿ, ಸಾರ್ವಜನಿಕರಾಗಲಿ ಆತಂಕಕ್ಕೆ ಒಳಗಾಗಬಾರದು ಎಂದರು.

    ಚಾಲಕ, ನಿರ್ವಾಹಕರೆ ಸಂಸ್ಥೆಯ ಜೀವಾಳವಾಗಿದ್ದು, ಅವರ 10 ಬೇಡಿಕೆಗಳ ಪೈಕಿ 9 ಬೇಡಿಕೆಗಳನ್ನು ಈಡೇರಿಸಲಾಗುವುದು. ಚಾಲಕ, ನಿರ್ವಾಹಕ ಸೇರಿ ಇತರೆ ಸಿಬ್ಬಂದಿಗೆ ವಿನಾಕಾರಣ ಕಿರುಕುಳ ನೀಡುವಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಕರ್ತವ್ಯ ಹಂಚಿಕೆ ಸೇರಿ ಸಣ್ಣ ಪುಟ್ಟ ವಿಷಯಗಳಿಗೂ ಚಾಲಕ, ನಿರ್ವಾಹಕರಿಗೆ ಕಿರುಕುಳ ನೀಡುವುದನ್ನು ಸಹಿಸುವುದಿಲ್ಲ. ಅಧಿಕಾರಿಗಳು ತಮ್ಮ ನಡವಳಿಕೆ ಬದಲಿಸಿಕೊಳ್ಳಬೇಕು ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಸಾರಿಗೆ ಸಂಸ್ಥೆ ಅಧಿಕಾರಿಗಳು ಸಿಬ್ಬಂದಿಗೆ ಕಿರುಕುಳ ನೀಡುತ್ತಾರೆ ಎಂಬ ಆರೋಪ ಸಾಮಾನ್ಯವಾಗಿದೆ. ಇದನ್ನು ಹೋಗಲಾಡಿಸಲು ಸಾರಿಗೆ ಸಚಿವರು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದರು.

    ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಗದಗ ಜಿಲ್ಲೆಗೆ ಚಾಲಕರ ತರಬೇತಿ ಕೇಂದ್ರ ಮಂಜೂರು ಮಾಡಬೇಕು ಹಾಗೂ 15 ಇಲೆಕ್ಟ್ರಿಕಲ್ ಬಸ್ ಓಡಿಸಬೇಕು ಎಂದು ಸಾರಿಗೆ ಸಚಿವರಿಗೆ ಮನವಿ ಮಾಡಿದರು.

    ಸಂಸದ ಶಿವಕುಮಾರ ಉದಾಸಿ, ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಮಾತನಾಡಿದರು. ಶಾಸಕ ಕಳಕಪ್ಪ ಬಂಡಿ, ವಿಪ ಸದಸ್ಯ ಎಸ್.ವಿ. ಸಂಕನೂರ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ, ತಾಪಂ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ ಇತರರಿದ್ದರು.

    ನೀವೇ ಕಲ್ಲು ಹೊಡೆದರೆ ಹೇಗೆ? : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇತ್ತೀಚೆಗೆ ಸಾರಿಗೆ ಸಿಬ್ಬಂದಿ ಪ್ರತಿಭಟನೆ ಮಾಡಿದ್ದರಿಂದ ನಾಲ್ಕು ದಿನ ಬಸ್ ಸಂಚಾರ ಸ್ಥಗಿತಗೊಂಡಿತು. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು. ನೀವು ಪ್ರತಿಭಟನೆ ಮಾಡಿದ್ದು ತಪ್ಪಲ್ಲ. ಆದರೆ, ಬೇರೆಯವರ ಮಾತು ಕೇಳಿ ಬಸ್​ಗಳಿಗೆ ಕಲ್ಲು ತೂರಿದ್ದು ತುಂಬಾ ನೋವಾಯಿತು. ನಿಮ್ಮ ಮನೆಗೆ ನೀವೇ ಕಲ್ಲು ಹೊಡೆದರೆ ಹೇಗೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಿಬ್ಬಂದಿಯನ್ನು ಪ್ರಶ್ನಿಸಿದರು.

    ರಾಜ್ಯದಲ್ಲಿ 350 ಇಲೆಕ್ಟ್ರಿಕಲ್ ಬಸ್: ಫೆಬ್ರವರಿ ಮೊದಲ ವಾರದಲ್ಲಿ ಪ್ರಾಯೋಗಿಕವಾಗಿ ಬಿಎಂಟಿಸಿಯಿಂದ 300 ಹಾಗೂ ವಾಕರಸಾ ಸಂಸ್ಥೆ (ಹುಬ್ಬಳ್ಳಿ) ಮೂಲಕ 50 ಇಲೆಕ್ಟ್ರಿಕಲ್ ಬಸ್​ಗಳನ್ನು ಓಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

    ನಗರದಲ್ಲಿ ಭಾನುವಾರ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ನೂತನ ಬಸ್ ನಿಲ್ದಾಣ ಉದ್ಘಾಟಿಸಿ ಅವರು ಮಾತನಾಡಿ, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರು.

    ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳು ಹಾನಿಗೆ ಒಳಗಾಗಿರುವುದು ನಿಜ. ಹಾಗಂತ ನಾವೂ ಕೈಕಟ್ಟಿ ಕುಳಿತಿಲ್ಲ. ಸಂಸ್ಥೆಗಳನ್ನು ಲಾಭದಲ್ಲಿ ತರಲು ಏನು ಮಾಡಬೇಕು ಎಂಬ ಚಿಂತನೆ ನಡೆಸಿದ್ದು, ಅದರ ಪರಿಣಾಮವಾಗಿ ಇಲೆಕ್ಟ್ರಿಕಲ್ ಬಸ್ ಸಂಚಾರ ಆರಂಭಿಸಲಾಗುತ್ತಿದೆ. ಇಲೆಕ್ಟ್ರಿಕಲ್ ಬಸ್ಸಿನ ಬ್ಯಾಟರಿ ಎಂಟು ಗಂಟೆ ಚಾರ್ಜ್ ಮಾಡಿದರೆ 450 ಕಿಮೀ ಓಡಿಸಬಹುದು. ಎಂಟು ತಾಸು ಬ್ಯಾಟರಿ ಚಾರ್ಜ್ ಮಾಡಿದರೆ ಕೇವಲ 360 ರೂ. ವಿದ್ಯುತ್ ಖರ್ಚಾಗುತ್ತದೆ ಎಂದರು.

    2013ರಿಂದ ಇಲ್ಲಿಯವರೆಗೆ ಸಾರಿಗೆ ಬಸ್ ಟಿಕೆಟ್ ದರ ಏರಿಕೆ ಮಾಡಿಲ್ಲ. ಈ ಏಳೆಂಟು ವರ್ಷಗಳ ಅವಧಿಯಲ್ಲಿ ಡಿಸೇಲ್, ಟಯರ್ ಹಾಗೂ ಬಸ್​ನ ಬಿಡಿಭಾಗಗಳ ದರ ದುಪ್ಪಟ್ಟಾಗಿದೆ. ಜತೆಗೆ ಕರೊನಾ ಸೋಂಕಿನಿಂದ ಮೂರ್ನಾಲ್ಕು ತಿಂಗಳು ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದರಿಂದ ನಾಲ್ಕೂ ಸಂಸ್ಥೆಗಳು ನಷ್ಟ ಅನುಭವಿಸಬೇಕಾಯಿತು ಎಂದು ವಿವರಿಸಿದರು.

    ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ಬಸ್ ಪಾಸ್ ನೀಡಲಾಗುತ್ತಿದೆ. ಇದರಲ್ಲಿ ಶೇ. 50ರಷ್ಟು ಹಣ ಸರ್ಕಾರ, ಶೇ. 25 ಸಂಸ್ಥೆ ಮತ್ತು ಶೇ. 25ರಷ್ಟು ವಿದ್ಯಾರ್ಥಿಗಳು ಭರಿಸಬೇಕು. ಈ ಕುರಿತು ಸರ್ಕಾರದಿಂದ ಸಂಸ್ಥೆಗೆ 2980 ಕೋಟಿ ರೂ. ನೀಡಬೇಕಿದೆ. ಈ ವಿಷಯವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ ಎಂದರು.

    ಕರೊನಾ ಸಮಯದಲ್ಲಿ ಬಸ್ ಸಂಚಾರ ಬಂದ್ ಆಗಿ ಸಿಬ್ಬಂದಿಗೆ ಸಂಬಳ ನೀಡಲು ಸಂಸ್ಥೆಯಲ್ಲಿ ಹಣ ಇರಲಿಲ್ಲ. ಈ ಕುರಿತು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿಕೊಂಡ ಮೇಲೆ ಒಟ್ಟು 1,762 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ಅವರು ವಿವರಿಸಿದರು.

    ಭಿನ್ನಮತವೂ ಇಲ್ಲ…ಅಸಮಾಧಾನವೂ ಇಲ್ಲ..

    ಸಚಿವ ರಮೇಶ ಜಾರಕಿಹೊಳಿ ಅವರು ಚಿಕ್ಕಮಗಳೂರಿಗೆ ಅಭಿವೃದ್ಧಿ ಪರಿಶೀಲನೆ ಸಭೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಶಾಸಕರು, ಮುಖಂಡರು ಸಚಿವರನ್ನು ಭೇಟಿ ಮಾಡಿ ರ್ಚಚಿಸುವುದು ಸಹಜ. ಇದನ್ನು ರೆಸಾರ್ಟ್ ರಾಜಕಾರಣ ಅಂದರೆ ಹೇಗೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಪ್ರಶ್ನಿಸಿದರು.

    ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನಾನು ಗದಗ ಜಿಲ್ಲೆಗೆ ಬಂದಿದ್ದೇನೆ. ಇಲ್ಲಿನ ಶಾಸಕರು, ಸಚಿವರು ನನ್ನನ್ನು ಭೇಟಿ ಮಾಡಿ ರ್ಚಚಿಸುತ್ತಾರೆ. ಅದನ್ನು ಪ್ರತ್ಯೇಕ ಸಭೆ ಎಂದು ಬಿಂಬಿಸುವುದು ಸರಿಯಲ್ಲ. ನಮ್ಮಲ್ಲಿ ಯಾವುದೆ, ಭಿನ್ನಮತವೂ, ಅಸಮಾಧಾನವೂ ಇಲ್ಲ ಎಂದು ಸಮಜಾಯಿಸಿ ನೀಡಿದರು.

    ಸಚಿವ ಸಂಪುಟ ವಿಸ್ತರಣೆ ವೇಳೆ ಸಣ್ಣ ಪುಟ್ಟ ವ್ಯತ್ಯಾಸಗಳು ಇರುವುದು ಸಹಜ. ಎಲ್ಲರೂ ಸಚಿವರಾಗಬೇಕು, ಜನರ ಸೇವೆ ಮಾಡಬೇಕು ಎಂಬ ಹಂಬಲ ಇರುತ್ತದೆ. ಶೇ. 95ರಷ್ಟು ಭಾಗ ಸರಿಹೋಗಿದೆ. ಉಳಿದ ಶೇ. 5ರಷ್ಟು ವ್ಯತ್ಯಾಸವನ್ನು ಸರಿಪಡಿಸುತ್ತೇವೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts