More

    ಶಿಕ್ಷಣ ಇಲಾಖೆಯ ಕರಡು ಅಧಿಸೂಚನೆಯಲ್ಲಿ ಕನ್ನಡಕ್ಕಿಲ್ಲ ಪ್ರಥಮ ಆದ್ಯತೆ!; ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಆಕ್ಷೇಪ

    ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ರೂಪಿಸಿರುವ ಕರ್ನಾಟಕ ಶಿಕ್ಷಣ ಸಂಸ್ಥೆಗಳ (ನಿರಾಕ್ಷೇಪಣ ಪತ್ರ ವಿತರಣೆ ಮತ್ತು ನಿಯಂತ್ರಣ) ನಿಯಮ ೨೦೨೨ರ ಕರಡು ಅಧಿಸೂಚನೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ ಆಕ್ಷೇಪಣೆ ಸಲ್ಲಿಸಿದ್ದಾರೆ.

    ಕರ್ನಾಟಕ ಶಿಕ್ಷಣ ಸಂಸ್ಥೆಗಳ (ನಿರಾಕ್ಷೇಪಣ ಪತ್ರ ವಿತರಣೆ ಮತ್ತು ನಿಯಂತ್ರಣ) ನಿಯಮ ೨೦೨೨ ಕರಡು ಅಧಿಸೂಚನೆಯಲ್ಲಿ ಕನ್ನಡ ಭಾಷಾ ಕಲಿಕಾ ಕಾಯ್ದೆ ೨೦೧೫ರ ಅನುಸಾರ ಕನ್ನಡ ಭಾಷೆಯನ್ನು ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಐಬಿ ಶಾಲೆಗಳಲ್ಲಿ ದ್ವಿತೀಯ ಅಥವಾ ತೃತೀಯವಾಗಿ ಕಲಿಸುವ ಅವಕಾಶ ನೀಡಲಾಗಿದೆ ಎಂದು ತಿಳಿಸಲಾಗಿದೆ.

    ರಾಜ್ಯದ ಎಲ್ಲ ಕೇಂದ್ರೀಯ ಪಠ್ಯಕ್ರಮದ ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಅಂತಾರಾಷ್ಟ್ರೀಯ ಮಂಡಳಿ (ಐಬಿ) ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕೆಂದು ಈವರೆಗೆ ಇದ್ದ ನಿಯಮಕ್ಕೆ ತಿದ್ದುಪಡಿ ತಂದು ಇನ್ನು ಮುಂದೆ ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಕನ್ನಡ ಕಲಿಯಬೇಕೆಂದು ಅಧಿಸೂಚನೆಯಲ್ಲಿ ತಿಳಿಸಿರುವುದು ಸರಿಯಾದ ಕ್ರಮವಲ್ಲ. ಕರಡು ಅಧಿಸೂಚನೆಯಲ್ಲಿ ತಿಳಿಸಿದಂತೆ ನಿಯಮಾವಳಿ ರೂಪಿಸಿದರೆ ಕನ್ನಡಕ್ಕೆ ತೀವ್ರ ಹಿನ್ನಡೆಯಾಗಲಿದೆ. ಜೊತೆಗೆ ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಐಬಿ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಯುತ್ತಿರುವ ಮಕ್ಕಳ ಭವಿಷ್ಯಕ್ಕೂ ಸಮಸ್ಯೆಯಾಗಲಿದೆ. ಅಲ್ಲದೆ, ಈ ಶಾಲೆಗಳ ಮೇಲಿನ ಸರ್ಕಾರದ ನಿಯಂತ್ರಣ ಇನ್ನಷ್ಟು ಕೈತಪ್ಪಲು ದಾರಿಯಾಗಲಿದೆ ಎಂಬುದನ್ನು ತಾವು ಮನಗಾಣಬೇಕು ಎಂದು ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.

    ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕನ್ನಡ ಕಲಿಕೆಗೆ ವಿನಾಯಿತಿ ನೀಡುವುದರಿಂದ ಶಿಕ್ಷಣದಲ್ಲಿ ಕನ್ನಡ ಕಲಿಕೆಗೆ ಹಿನ್ನಡೆಯುಂಟಾಗುತ್ತದೆ. ಕರ್ನಾಟಕದಲ್ಲಿ ಕನ್ನಡವನ್ನು ಕಲಿಸದಿದ್ದಲ್ಲಿ ಬೇರೆ ರಾಜ್ಯ-ದೇಶಗಳಲ್ಲಿ ಕಲಿಸಲಾದೀತೆ? ಹೀಗಾಗಿ ಪ್ರಾಧಿಕಾರ ಈ ಅಧಿಸೂಚನೆಯ “ನಿಯಮ ೬ (೨)ಕ್ಕೆ” ಆಕ್ಷೇಪಣೆ ಸಲ್ಲಿಸುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

    ಈ ಅಧಿಸೂಚನೆಯಲ್ಲಿರುವ ನಿಯಮ ೬ (೨)ರ ಅಡಿಯಲ್ಲಿ ಕನ್ನಡ ಭಾಷಾ ಕಲಿಕಾ ಅಧಿನಿಯಮ, ೨೦೧೫ (ಕರ್ನಾಟಕ ಅಧಿನಿಯಮ ೨೨, ೨೦೧೫)ರ ನಿಬಂಧನೆಗಳ ಪ್ರಕಾರ ಕನ್ನಡ ಭಾಷೆಯನ್ನು ೨ನೇ ಅಥವಾ ೩ನೇ ಭಾಷೆಯಾಗಿ ಕಲಿಸಲಾಗುತ್ತದೆ ಎಂದಿದೆ. ಇದಕ್ಕೆ ಪರ್ಯಾಯವಾಗಿ ಕನ್ನಡ ಭಾಷಾ ಕಲಿಕೆಯ ಅಧಿನಿಯಮ, ೨೦೧೫ (ಕರ್ನಾಟಕ ಅಧಿನಿಯಮ ೨೨, ೨೦೧೫)ರ ನಿಬಂಧನೆಗಳ ಪ್ರಕಾರ ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಎಲ್ಲ ತರಗತಿಗಳಲ್ಲಿ ಕಡ್ಡಾಯ ಭಾಷೆಯಾಗಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸತಕ್ಕದು ಎಂದು ಬದಲಾವಣೆ ಮಾಡುವಂತೆ ಪ್ರಾಧಿಕಾರ ತಿಳಿಸಿದೆ.

    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಕ್ಷೇಪಣೆಯನ್ನು ಪರಿಗಣಿಸಿ ಇಲಾಖೆ ನಿಯಮಾವಳಿಯನ್ನು ಬದಲಾವಣೆ ಮಾಡದಿದ್ದಲ್ಲಿ ಪ್ರಾಧಿಕಾರ ಕನ್ನಡ-ಕನ್ನಡಿಗರ ಹಿತರಕ್ಷಣೆಯ ಸಲುವಾಗಿ ಹೋರಾಟದ ದಾರಿ ತುಳಿಯುವುದು ಅನಿವಾರ್ಯವಾಗುತ್ತದೆ. ರಾಜ್ಯದ ಅಧಿಕೃತ ಭಾಷೆಯ ಸಾರ್ವಭೌಮತೆಯನ್ನು ಎತ್ತಿಹಿಡಿಯುವ ಸಲುವಾಗಿ ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಐಬಿ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಕಲಿಯಬೇಕೆಂಬ ಹೊಸ ಕರಡು ನಿಯಮಾವಳಿಯನ್ನು ಹಿಂಪಡೆದು, ಮೊದಲಿನ ಕನ್ನಡ ಕಲಿಕಾ ಅಧಿನಿಯಮ-೨೦೧೫ (ಸರ್ಕಾರ ಅಧಿಸೂಚನೆ ಸಂಖ್ಯೆ: ಇಡಿ ೨೭೪ ಪಿಜಿಸಿ ೨೦೧೭, ದಿನಾಂಕ:೨೧-೧೦-೨೦೧೭)ರಂತೆ, ೧ ರಿಂದ ೧೦ನೇ ತರಗತಿಯವರೆಗೆ ಹಂತ ಹಂತವಾಗಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಮಾತ್ರ ಕಡ್ಡಾಯವಾಗಿ ಕಲಿಯುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಪ್ರಾಧಿಕಾರದಿಂದ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

    ಯುವತಿಯನ್ನು ಬೆಂಗಳೂರಿಗೆ ಕರೆದೊಯ್ಯಲು 3 ಆ್ಯಂಬುಲೆನ್ಸ್, ಶಿವಮೊಗ್ಗದಿಂದಲೇ ಜೀರೋ ಟ್ರಾಫಿಕ್​!

    ಹೋಮ್​ವರ್ಕ್ ಮಾಡದ 5 ವರ್ಷದ ಮಗಳಿಗೆ ಅಮ್ಮನಿಂದಲೇ ಇದೆಂಥ ಶಿಕ್ಷೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts