More

    ಪಣಂಬೂರು ಬೀಚ್‌ಗಿಲ್ಲ ವ್ಯವಸ್ಥಿತ ಹಾದಿ

    ಪ್ರಕಾಶ್ ಮಂಜೇಶ್ವರ ಮಂಗಳೂರು

    ದೇಶದ ಪ್ರಮುಖ ಕಡಲ ತೀರಗಳಲ್ಲಿ ಒಂದಾಗಿರುವ ಮತ್ತು ವರ್ಷಂಪ್ರತಿ ದೇಶ, ವಿದೇಶಗಳ ದಾಖಲೆ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುವ ಪಣಂಬೂರು ಕಡಲ ತೀರಕ್ಕೆ ಆಕರ್ಷಕ ಪ್ರವೇಶ ದ್ವಾರವೇ ಇಲ್ಲ. ರಸ್ತೆಯೂ ತೀರಾ ಕೊಳಕಾಗಿದ್ದು, ಪ್ರವಾಸಿಗರಿಗೆ ರೇಜಿಗೆ ಹುಟ್ಟಿಸುವಂತಿದೆ.

    ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನವಮಂಗಳೂರು ಬಂದರು ಮತ್ತು ಪಣಂಬೂರು ಜಂಕ್ಷನ್ ನಡವೆ ಸಮುದ್ರದ ಕಡೆಗೆ ಗೂಡ್ಸ್‌ಶೆಡ್‌ಗೆ ಹೋಗುವಂತಹ ಒಂದು ರಸ್ತೆ ಕಾಣಸಿಗುತ್ತದೆ. ಈ ಮಾರ್ಗ ಸುಂದರವಾದ ಕಡಲ ತೀರದ ಕಡೆಗೆ ಸಾಗುತ್ತದೆ ಎಂದು ನಂಬುವುದು ಕಷ್ಟ. ಮಾರ್ಗದುದ್ದಕ್ಕೂ ನಿಂತಿರುವ ಸರಕು ಲಾರಿಗಳು, ಅದರ ಆಸುಪಾಸಿನಲ್ಲಿ ಹರಡಿರುವ ಕೊಳಕು ನೀರು, ಕಲ್ಲಿದ್ದಲು ಹುಡಿಯಿಂದ ಕಪ್ಪಾಗಿರುವ ರಸ್ತೆ, ರಾಸಾಯನಿಕ ವಸ್ತುಗಳ ಕಮಟು ವಾಸನೆ, ಹತ್ತಿರದಲ್ಲೇ ವಿಶ್ರಾಂತಿ ಪಡೆಯುತ್ತಿರುವ ಲಾರಿ ಚಾಲಕರು ಮತ್ತು ನಿರ್ವಾಹಕರು, ಇನ್ನೇನು ಕಡಲ ತೀರಕ್ಕೆ ಆಗಮಿಸುವ ಪ್ರವಾಸಿಗರ ವಾಹನ ಪಾರ್ಕ್ ಮಾಡಲೆಂದು ನಿಗದಿಪಡಿಸಿದ ಸ್ಥಳದ ಪಕ್ಕದಲ್ಲೇ ಹರಡಿರುವ ತ್ಯಾಜ್ಯದ ರಾಶಿ… ಪರಿಸರ ನಿವಾಸಿಗಳ ಆರೋಗ್ಯದ ದೃಷ್ಟಿಯಿಂದಲೂ ಇಂತರ ಪರಿಸ್ಥಿತಿ ಅಪಾಯಕಾರಿ.

    ಪ್ರತ್ಯೇಕ ನಿಲುಗಡೆ ಸ್ಥಳ ಅಗತ್ಯ: ಯಾವ ದೃಷ್ಟಿಯಿಂದ ನೋಡಿದರೂ ಒಂದು ಸುಂದರ ಪ್ರವಾಸಿ ಸ್ಥಳಕ್ಕೆ ಇಂತಹ ಸ್ವಾಗತ ಒಪ್ಪಿಕೊಳ್ಳಲು ಸಾಧ್ಯವಾಗದು. ನವಮಂಗಳೂರು ಬಂದರಿಗೆ ಬರುವ ಲಾರಿ(ಟ್ಯಾಂಕರ್)ಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಿದರೆ ಈ ಮಾರ್ಗದ ಅರ್ಧ ಸಮಸ್ಯೆ ಬಗೆಹರಿಯಬಹುದು. ಈಗ ಈ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ದಿನವಿಡೀ 50ಕ್ಕೂ ಅಧಿಕ ಲಾರಿಗಳು ನಿಲ್ಲುತ್ತಿವೆ. ಲಾರಿಗಳ ನಡುವೆ ನಡೆಯುವುದೇ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಕಾಂಕ್ರೀಟ್ ರಸ್ತೆ ಇದ್ದರೂ ಇದು ಜನರ ಬಳಕೆಗಿಂತ ಲಾರಿಗಳ ನಿಲುಗಡೆಗೆ ಹೆಚ್ಚು ಉಪಯೋಗವಾಗುತ್ತಿದೆ.

    ಸ್ವಚ್ಛತೆಗೆ ಆದ್ಯತೆ: ಧೂಳು, ರಾಸಾಯನಿಕ ತ್ಯಾಜ್ಯಗಳಿಂದ ಮಲಿನವಾಗಿರುವ ಕಡಲ ತೀರ ಸಂಪರ್ಕಿಸುವ ರಸ್ತೆ ಒಗೆದ ಬಟ್ಟೆಯಂತೆ ಸ್ವಚ್ಛವಾಗಿಡುವುದು ಸಾಧ್ಯವಾಗಬೇಕು. ಇಲ್ಲಿ ಉಭಯ ಕಡೆಗಳಲ್ಲಿ ಸಾಲಾಗಿ ಲಾರಿ, ಟ್ಯಾಂಕರ್‌ಗಳ ಪಾರ್ಕಿಂಗ್ ಅವಕಾಶ ಇರುವ ತನಕವೂ ಇದು ಸಾಧ್ಯವಿಲ್ಲ. ಕಡಲ ತೀರ ಸಮೀಪ ತೆರೆದ ತ್ಯಾಜ್ಯ ಸಂಗ್ರಹ ವಸ್ತು ಇಡುವ ಬದಲು ತ್ಯಾಜ್ಯ ಸಂಗ್ರಹಿಸಲು ದೊಡ್ಡ ಕಂಟೈನರ್ ಇಡಬೇಕು. ತ್ಯಾಜ್ಯ ತುಂಬಿದ ಕೂಡಲೇ ತ್ಯಾಜ್ಯ ತುಂಬಿದ ಕಂಟೈನರ್ ಬದಲಿಸಿ ಹೊಸ ಕಂಟೈನರ್ ಇಡಬೇಕು. ಇದರಿಂದ ಬೀಚ್ ಸಮೀಪ ತ್ಯಾಜ್ಯ ಗುಡ್ಡೆ ಬೀಳುವುದು ತಪ್ಪುತ್ತದೆ.

    ಕರಾವಳಿಯ ಹಿರಿಮೆಯನ್ನು ಸಾಂಕೇತಿಸುವ ಯಕ್ಷಗಾನದ ಪ್ರತಿಮೆಯನ್ನು ರಾಷ್ಟ್ರೀಯ ಹೆದ್ದಾರಿಯಿಂದ ಬೀಚ್ ಪ್ರವೇಶಿಸುವ ದ್ವಾರದಲ್ಲಿ ಪ್ರತಿಷ್ಠಾಪಿಸಬೇಕು. ರಸ್ತೆ ಸ್ವಚ್ಛಗೊಳಿಸುವ ಯಂತ್ರ ಖರೀದಿಸಿ ಕಡಲತೀರ ತಲುಪುವ ತನಕದ ರಸ್ತೆಯನ್ನು ನಿರಂತರ ಸ್ವಚ್ಛವಾಗಿಡುವ ವ್ಯವಸ್ಥೆ ಮಾಡಬೇಕು. ಇದರಿಂದ ಪಣಂಬೂರು ಬೀಚ್ ಹೆಚ್ಚು ಜನಪ್ರಿಯವಾಗಬಹುದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವವರ ಗಮನವನ್ನು ಕೂಡ ಬೇಗ ಸೆಳೆಯಬಹುದು.

    ಯತೀಶ್ ಬೈಕಂಪಾಡಿ
    ಮಾಜಿ ಸಿಇಒ, ಪಣಂಬೂರು ಬೀಚ್ ಅಭಿವೃದ್ಧಿ ಯೋಜನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts