More

    ಎಂಬಿಬಿಎಸ್ ಸೀಟ್ ಕೊಡಿಸುವ ಆಮಿಷವೊಡ್ಡಿ ವಂಚಿಸುವರು ಇದ್ದಾರೆ..ಎಚ್ಚರ

    ಬೆಂಗಳೂರು: ಕೇರಳದ ಪ್ರತಿಷ್ಠಿತ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.

    ತೆಲಂಗಾಣದ ಹೈದರಾಬಾದ್ ನಿವಾಸಿ ಶರತ್ ಗೌಡ (65) ಬಂಧಿತ. ಆರೋಪಿಯಿಂದ 47.80 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಇತ್ತೀಚಿಗೆ ಶಿಕ್ಷಕ ತಿಮ್ಮೇಗೌಡ ಅವರ ಪುತ್ರನಿಗೆ ಕೇರಳದಲ್ಲಿ ಪಿ.ಕೆ.ದಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ 12 ಲಕ್ಷ ರೂ. ಪಡೆದು ಆರೋಪಿ ವಂಚಿಸಿದ್ದ. ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್ ಜೆ. ಭಾಗ್ಯವತಿ ನೇತೃತ್ವದ ತಂಡ, ತಾಂತ್ರಿಕ ಮಾಹಿತಿ ಆಧರಿಸಿ ಹೈದರಾಬಾದ್‌ನಲ್ಲಿ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹೈದರಾಬಾದ್‌ನಗರದಲ್ಲಿ ತನ್ನ ಪತ್ನಿ ಮತ್ತು ಮಕ್ಕಳ ಜತೆ ನೆಲೆಸಿದ್ದ ಶರತ್, ಈ ಮೊದಲು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ. ತನ್ನ ಪತ್ನಿಗೂ ಮೆಡಿಕಲ್ ಸೀಟು ದಂಧೆ ಬಗ್ಗೆ ಬಾಯ್ಬಿಟ್ಟಿರಲಿಲ್ಲ. 6 ತಿಂಗಳ ಹಿಂದೆ ಸುಲಭವಾಗಿ ಹಣ ಸಂಪಾದನೆ ಮಾಡಲು ಮೆಡಿಕಲ್ ಸೀಟು ದಂಧೆಗಿಳಿದ ಶರತ್ ಗೌಡ, ನ್ಯೂ ಬಿಇಎಲ್ ರಸ್ತೆಯಲ್ಲಿ ನೆಕ್ಸಸ್ ಎಜ್ಯು ಹೆಸರಿನ ಏಜೆನ್ಸಿ ತೆರೆದಿದ್ದ. ಈ ಕಚೇರಿಗೆ ನಾಲ್ವರು ಯುವತಿಯರನ್ನು ಟೆಲಿ ಕಾಲರ್‌ಗಳನ್ನ ನೇಮಕ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಕರೆ ಮಾಡಿಸುತ್ತಿದ್ದ.

    ಜಸ್ಟ್ ಡಯಲ್ ಏಜೆಂಟ್ ಸಹಾಯದಿಂದ ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಸ್ವ-ವಿವರವನ್ನು ಶರತ್ ಸಂಗ್ರಹಿಸಿದ್ದ. ಈ ಮಾಹಿತಿ ಬಳಸಿ ವೈದ್ಯಕೀಯ ಸೀಟ್ ಬಯಸುವ ವಿದ್ಯಾರ್ಥಿಗಳ ಮೊಬೈಲ್‌ಗೆ ಕರೆ ಮಾಡಿ ಕಡಿಮೆ ವೆಚ್ಚದಲ್ಲಿ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಆಸೆ ಹುಟ್ಟಿಸುತ್ತಿದ್ದರು. ಅಂತೆಯೇ ಸಂಜಯನಗರದ ತಿಮ್ಮೇಗೌಡರ ಪುತ್ರನಿಗೂ ಸಹ ಶರತ್ ಗ್ಯಾಂಗ್ ಕರೆ ಮಾಡಿತ್ತು. ಡ್ರಾಪ್‌ಔಟ್ ಸೀಟ್‌ಗಳನ್ನು ಕಡಿಮೆ ಹಣದಲ್ಲಿ ಸೀಟ್ ಕೊಡಿಸುವುದಾಗಿ ನಂಬಿಸಿದ್ದರು. ಆರೋಪಿಗಳ ನಾಜೂಕಿನ ಮಾತಿಗೆ ಮರುಳಾಗಿ ತಿಮ್ಮೇಗೌಡ, ಆರೋಪಿಯ ಕಚೇರಿಗೆ ಹೋದಾಗ 12 ಲಕ್ಷ ರೂ.ಗೆ ಬೇಡಿಕೆ ಒಡ್ಡಿದ್ದರು.

    ಚೌಕಾಸಿ ನಡೆದು 10 ಲಕ್ಷ ರೂ.ಗೆ ಒಪ್ಪಿಗೆ ಆಗಿತ್ತು. ಹಂತ ಹಂತವಾಗಿ 10 ಲಕ್ಷ ರೂ.ಅನ್ನು ಪಾವತಿ ಮಾಡಿದ್ದರು. ಆದರೆ, ಸೀಟ್ ಮಾತ್ರ ಕೊಡಿಸಿರಲಿಲ್ಲ.
    ಅನುಮಾನಗೊಂಡ ತಿಮ್ಮೇಗೌಡ, ಕೆಲವರನ್ನು ವಿಚಾರಿಸಿದಾಗ ಇದೇ ರೀತಿ 18 ಮಂದಿಯಿಂದ 60 ಲಕ್ಷ ರೂ. ಪಡೆದು ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು. ಕೊನೆಗೆ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts