More

    ಸರ್ಕಾರಿ ಶಾಲೆಯಲ್ಲಿ ಮಕ್ಕಳಿದ್ದಾರೆ ಶಿಕ್ಷಕರಿಲ್ಲ!

    ಚಿಕ್ಕಮಗಳೂರು: ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಲ್ಲದಿದ್ದರೂ ಶಿಕ್ಷಕರ ಕೊರತೆ ಕಾಡುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ.

    ಒಟ್ಟು 1,423 ಸರ್ಕಾರಿ ಶಾಲೆಗಳಿದ್ದು ಆ ಪೈಕಿ ಸರ್ಕಾರಿ ಕಿರಿಯ ಪ್ರಾಥಮಿಕ 653, ಹಿರಿಯ ಪ್ರಾಥಮಿಕ 654 ಹಾಗೂ ಪ್ರೌಢ ಶಾಲೆಗಳು 116 ಇವೆ. ಒಂದನೇ ತರಗತಿಯಿಂದ 10ನೇ ತರಗತಿ ತನಕ 1,44,510 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಷ್ಟು ಶಿಕ್ಷಕರು ಇರದೆ ಸಕಾಲಕ್ಕೆ ಪಠ್ಯ ಬೋಧನೆ ಪೂರ್ಣ ಪ್ರಮಾಣದಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲ.
    ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಒಟ್ಟು 4,326 ಶಿಕ್ಷಕರ ಹುದ್ದೆಗಳಿದ್ದು, 3,642 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ 684 ಹುದ್ದೆಗಳು ಖಾಲಿಯಿವೆ. ಪ್ರೌಢಶಾಲೆಯಲ್ಲಿ 1,956 ಶಿಕ್ಷಕರು ಹುದ್ದೆಗಳ ಪೈಕಿ 1,423 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 172 ಹುದ್ದೆಗಳು ಖಾಲಿ ಇವೆ.
    ಖಾಲಿ ಇರುವ ಶಿಕ್ಷಕರ ಕೊರತೆ ನೀಗಿಸಲು ಸರ್ಕಾರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅವಕಾಶ ನೀಡಿದ್ದು, ಪ್ರಾಥಮಿಕ ಹಂತದಲ್ಲಿ 420 ಹಾಗೂ ಪ್ರೌಢಶಾಲೆ ವಿಭಾಗದಲ್ಲಿ 111 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರೌಢಶಾಲೆ ವಿಭಾಗಕ್ಕೆ 35 ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮೇಲಾಧಿಕಾರಿಗಳಿಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಸ್ತಾವ ಸಲ್ಲಿಸಲಾಗಿದೆ.
    ಯಾರೂ ಶಿಕ್ಷಣದಿಂದ ವಂಚನೆಗೆ ಒಳಗಾಗಬಾರದು ಎಂದು ಕಡ್ಡಾಯ ಶಿಕ್ಷಣ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಇದರಡಿ ಪಠ್ಯ ಪುಸ್ತಕ, ಮಧ್ಯಾಹ್ನ ಬಿಸಿಯೂಟ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಿದೆ. ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಹೋಬಳಿಗೊಂದು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸಹ ಪ್ರಾರಂಭಿಸಿದ್ದು, ಇತ್ತೀಚೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿಯಿಂದ ಸರ್ಕಾರಿ ಶಾಲೆಗಳಿಗೆ ದಾಖಲಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.
    27 ಶಾಲೆಗಳಿಗೆ ಬೀಗ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಹಳ್ಳಿಗಳು ಬಹಳ ದೂರದೂರದಲ್ಲಿದ್ದು ಎರಡ್ಮೂರು ಹಳ್ಳಿಗಳಿಗೆ ಸೇರಿ ಒಂದು ಕಿರಿಯ ಪ್ರಾಥಮಿಕ ಅಥವಾ ಹಿರಿಯ ಪ್ರಾಥಮಿಕ ಶಾಲೆಯಿದೆ. ಗ್ರಾಮ ಪಂಚಾಯಿತಿ ಅಥವಾ ಹೋಬಳಿಗೊಂದು ಪ್ರೌಢಶಾಲೆಗಳಿವೆ. ಇನ್ನು ಮಕ್ಕಳಿಲ್ಲದ 27 ಶಾಲೆಗಳನ್ನು ಮುಚ್ಚಲಾಗಿದೆ. 150 ಶಾಲೆಗಳಲ್ಲಿ ಆಟದ ಮೈದಾನ ಇಲ್ಲದಿರುವುದು ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಅವಕಾಶ ಇಲ್ಲದಂತಾಗಿದೆ.
    ಫಲಿತಾಂಶ ಸುಧಾರಣೆಗೆ ವಿಶೇಷ ಕಾರ್ಯಕ್ರಮ: ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ.89.69 ಫಲಿತಾಂಶ ಲಭಿಸಿದ್ದು, ಈ ಬಾರಿ ಫಲಿತಾಂಶ ಸುಧಾರಣೆಗೆ ಕ್ರಿಯಾ ಯೋಜನೆ ತಯಾರಿಸಿಕೊಂಡಿದ್ದು ಹಂತಹಂತವಾಗಿ ಕಾರ್ಯಗತಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳ ತಂಡ ರಚನೆ ಮಾಡಿ ಗುಂಪು ಚರ್ಚೆ, ಕಿರು ಪರೀಕ್ಷೆ, ಕ್ವಿಜ್, ಮಾದರಿ ಪ್ರಶ್ನೆ ಪತ್ರಿಕೆ ತಯಾರಿ ನೀಡಿದ್ದು, ಕಲಿಕೆಯಲ್ಲಿ ಹಿಂದೆ ಉಳಿದಿರುವ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ಪೂರಕ ಪರೀಕ್ಷೆಗಳು ಮುಗಿದ ನಂತರ ವಿಶೇಷ ತರಗತಿಗಳನ್ನು ನಡೆಸಲು ಕ್ರಮಕೈಗೊಳ್ಳಲಾಗಿದೆ.
    44 ಕೊಠಡಿಗಳ ದುರಸ್ತಿಗೆ ಅನುದಾನ: ಶಿಥಿಲಗೊಂಡಿರುವ 44 ಕೊಠಡಿಗಳ ದುರಸ್ತಿಗೆ 1.50 ಕೋಟಿ ರೂಪಾಯಿ ಮೊತ್ತದ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅನುದಾನ ಬಿಡುಗೆಯಾಗಿದ್ದು 44 ಕೊಠಡಿಗಳ ಪೈಕಿ 6 ಕಾಮಗಾರಿ ಮುಗಿದಿದ್ದು, 38 ಕಾಮಗಾರಿಗಳು ಪ್ರಗತಿಯಲ್ಲಿವೆ. ಮಲೆನಾಡು ಭಾಗದಲ್ಲಿ ಪ್ರತಿನಿತ್ಯ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ವರದಿ ತರಿಸಿಕೊಳ್ಳುತ್ತಿದ್ದಾರೆ. ಗಾಳಿ-ಮಳೆಗೆ ಶಾಲೆಗಳ ಹೆಂಚುಗಳು ಬೀಳುತ್ತಿದ್ದು ಎಸ್‌ಡಿಎಂಸಿ ಸಹಾಯದಿಂದ ತಕ್ಷಣವೇ ಸಮಸ್ಯೆ ಬಗೆಹರಿಸಿಕೊಳ್ಳಲಾಗುತ್ತಿದೆ. ಫಲಿತಾಂಶ ಸುಧಾರಣೆಗೆ ಶೈಕ್ಷಣಿಕ ವರ್ಷ ಪ್ರಾರಂಭದಿಂದಲೇ ಕ್ರಿಯಾಯೋಜನೆ ತಯಾರಿಸಿಕೊಂಡಿದ್ದು ಹಂತಹಂತವಾಗಿ ಕಾರ್ಯಗತಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕವಾದ ರೀತಿ ಶಾಲೆಗಳಲ್ಲಿ ವಾತಾವರಣ ಸೃಷ್ಟಿಸಿದ್ದು ಬೋಧನೆಯಲ್ಲಿ ಯಾವುದೇ ರೀತಿ ಕೊರತೆಯುಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ. ಎಲ್ಲ ವಿಷಯಗಳ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗನಾಥಸ್ವಾಮಿ ನೀಡಿದ ಮಾಹಿತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts