More

  ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ಕಳವು

  ವಿಜಯವಾಣಿ ಸುದ್ದಿಜಾಲ ವಿಟ್ಲ

  ಕಡೂರು-ಕಾಂಞಂಗಾಡು ಅಂತಾರಾಜ್ಯ ಹೆದ್ದಾರಿಯಲ್ಲಿರುವ ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಶಾಖೆಯ ಹಿಂಬಾಗಿಲ ಕಿಟಕಿ ಮೂಲಕ ಒಳನುಗ್ಗಿದ ಕಳ್ಳರು, ಸ್ೇ ಲಾಕರ್ ಒಡೆದು ನಗದು ಸಹಿತ ಚಿನ್ನಾಭರಣವನ್ನು ದೋಚಿದ್ದಾರೆ. ಗುರುವಾರ ಘಟನೆ ಬೆಳಕಿಗೆ ಬಂದಿದೆ. ಶಾಖೆಯ ಹಿಂಭಾಗ ಕಾಡಿನಿಂದ ಆವೃತ್ತವಾಗಿದ್ದು, ಈ ದಾರಿ ಬಳಸಿದ ಕಳ್ಳರು, ಕಿಟಕಿಯ 8 ಸರಳುಗಳನ್ನು ಕತ್ತರಿಸಿ ಒಳಗೆ ನುಗ್ಗಿ ಭದ್ರತಾ ಕೋಶದ ಬಾಗಿಲನ್ನು ಗ್ಯಾಸ್ ಕಟ್ಟರ್ ಬಳಸಿ ತುಂಡರಿಸಿ ನಗದು ಹಾಗೂ ಚಿನ್ನ ದೋಚಿದ್ದಾರೆ.

  ಅಡ್ಯನಡ್ಕ ಪೇಟೆಯಲ್ಲಿ ರಾತ್ರಿ 11 ಗಂಟೆವರೆಗೂ ಜನಸಂಚಾರ ಇದ್ದು, ಬಳಿಕ ತಂಡವೊಂದು ಈ ಕೃತ್ಯ ನಡೆಸಿರಬಹುದು ಎಂದು ಹೇಳಲಾಗುತ್ತಿದೆ. ಗುರುವಾರ ಬೆಳಗ್ಗೆ 9.30ಕ್ಕೆ ಬ್ಯಾಂಕ್ ಸಿಬ್ಬಂದಿ ಬಂದಾಗ ವಿಷಯ ತಿಳಿಯಿತು. ವಿಟ್ಲ ಠಾಣೆ ಹಾಗೂ ಬ್ಯಾಂಕ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

  ಪೊಲೀಸರು ಬ್ಯಾಂಕ್ ಆವರಣವನ್ನು ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಬ್ಯಾಂಕ್ ಶಾಖಾ ವ್ಯವಸ್ಥಾಪಕರನ್ನು ಹೊರತುಪಡಿಸಿ ಉಳಿದವರನ್ನು ಹೊರಗಡೆ ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ. ಅಂದಾಜು ಪ್ರಕಾರ ಲಾಕರ್ ಒಳಗಿದ್ದ 16 ಲಕ್ಷ ನಗದು ಹಾಗೂ ಕೆಲವು ವೈಯಕ್ತಿಕ ಲಾಕರ್‌ಗಳನ್ನು ಕಳ್ಳರು ತೆರೆದು ಅದರಲ್ಲಿದ್ದ ಚಿನ್ನಾಭರಣವನ್ನು ದೋಚಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿದೆ. ಚಿನ್ನಾಭರಣ ಅಡವು ಸಾಲ ನೀಡಿದ ಚಿನ್ನವನ್ನೂ ಕಳವು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದೆ. ಎಸ್‌ಪಿ ರಿಷ್ಯಂತ್, ವಿಟ್ಲ ಠಾಣೆ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

  ಗಂಟೆಗಳ ಕಾರ್ಯಾಚರಣೆ!

  ಪೊಲೀಸರ ಪ್ರಕಾರ ರಾತ್ರಿ 2ರಿಂದ ಬೆಳಗ್ಗಿನ ಜಾವ 5 ಗಂಟೆ ಮಧ್ಯೆ ಕೃತ್ಯ ನಡೆದಿರುವ ಸಾಧ್ಯತೆ ಇದೆ. ಬ್ಯಾಂಕ್ ಒಳಗೆ ಕಳ್ಳರು ಎಷ್ಟು ಗಂಟೆ ಇದ್ದರೆಂಬ ನಿಖರ ಮಾಹಿತಿ ಲಭ್ಯವಾಗದಿದ್ದರೂ, ರಾತ್ರಿ ಬೇಗನೆ ಒಳಗೆ ಹೋಗಿ ಅನುಮಾನ ಬಾರದ ರೀತಿ ಕೃತ್ಯ ನಡೆಸಿರಬಹುದೇ ಎಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಭದ್ರತಾ ಕೋಶ ಬಾಗಿಲು ತೆರೆಯುವ ಸಂದರ್ಭ ಸ್ವಲ್ಪ ಹೆಚ್ಚು ಕಡಿಮೆಯಾದರೂ, ತಕ್ಷಣ ಎಚ್ಚರಿಕೆ ಗಂಟೆ ಮೊಳಗಬೇಕಿತ್ತು. ಆದರೆ ಅಲಾರಾಂ ಮೊಳಗಿಲ್ಲ.

  bank theft 2
  ಅಡ್ಯನಡ್ಕ ಮುಖ್ಯ ಪೇಟೆಯಲ್ಲಿರುವ ಶೌಚಗೃಹದ ಬಳಿ ಶ್ವಾನ ನಿಂತಿರುವುದು.

  ಸಂಪರ್ಕ ರಸ್ತೆ ಬಳಸಿದರೇ?

  ಶ್ವಾನದಳ ಬ್ಯಾಂಕ್ ಒಳಗೆ ಪರಿಶೀಲನೆ ನಡೆಸಿದ ಬಳಿಕ ಪಕ್ಕದಲ್ಲಿದ್ದ ನಿರ್ಜನ ಕಟ್ಟಡಕ್ಕೆ ಆಗಮಿಸಿ ಅಲ್ಲಿ ಅಕ್ಕಪಕ್ಕ ಓಡಾಡಿ ಬಳಿಕ ನೇರ ಮನೆಯೊಂದರ ಅಂಗಳ ಮೂಲಕ ಅಡ್ಯನಡ್ಕ ಪೇಟೆಯಿಂದ ಉಳಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೂಲಕ ಬ್ಯಾಂಕ್ ಹಿಂಭಾಗಕ್ಕೆ ಬಂದಿದೆ. ಇಲ್ಲಿರುವ ಕಾಡಿನ ಜಾಗದಲ್ಲಿ ಓಡಾಡಿ ಬಳಿಕ ಸಂಪರ್ಕ ರಸ್ತೆಯ ಮೂಲಕ ಅಡ್ಯನಡ್ಕ ಮುಖ್ಯ ಪೇಟೆಗೆ ಹೋಗಿ, ಕಟ್ಟಡವೊಂದರ ಸುತ್ತಮುತ್ತ ಓಡಾಡಿ ಕೊನೆಗೆ ಶಾಲೆಯ ಮುಂಭಾಗದ ಶೌಚಗೃಹಕ್ಕೆ ತೆರಳಿ ನಿಂತಿದೆ. ಹಿಂದೆ ಅಡ್ಯನಡ್ಕ ಪೇಟೆಯಲ್ಲಿ ಸರಣಿ ಕಳ್ಳತನ ನಡೆದ ಸಂದರ್ಭದಲ್ಲೂ ಶ್ವಾನ ಇದೇ ಶೌಚಗೃಹದವರೆಗೆ ಹೋಗಿ ನಿಂತಿತ್ತು.

  ಕಳ್ಳರು ಬಳಸಿದ ವಸ್ತು ವಶ

  ಬ್ಯಾಂಕ್ ಹಿಂಭಾಗದ ಕಾಡಿನ ಒಂದು ಭಾಗದಲ್ಲಿ ತಡೆಗೋಡೆ ಹಾರಿ ರಸ್ತೆಗೆ ಇಳಿದಂತೆ ಅಚ್ಚು ಮೂಡಿದ್ದು, ಶ್ವಾನ ಈ ಭಾಗಕ್ಕೆ ಬರುತ್ತಿದ್ದಂತೆ ನಿಂತು ಆ ಜಾಗವನ್ನು ಗಮನಿಸಿ ತೆರಳಿದೆ. ಕಾಡಿನ ಒಂದು ಭಾಗದಲ್ಲಿ ಕಳ್ಳರು ಬಿಟ್ಟು ಹೋದ ಸ್ಪಾನರ್ ಸಹಿತ ಕೆಲವು ಹತ್ಯಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

  ಇಬ್ಬರ ಕೃತ್ಯ?

  ಬ್ಯಾಂಕ್ ಒಳಗೆ ಇದ್ದ ಸಿಸಿ ಕ್ಯಾಮರಾದಲ್ಲಿ ಇಬ್ಬರು ಕಳ್ಳರು ಕೃತ್ಯ ಎಸಗುತ್ತಿರುವ ದೃಶ್ಯ ದಾಖಲಾಗಿದೆ. ಬ್ಯಾಂಕಿನ ಹೊರಬದಿಯಲ್ಲಿ ಮತ್ತಷ್ಟು ಮಂದಿ ಇದ್ದಿರುವ ಸಾಧ್ಯತೆಯೂ ಇದೆ. ತಂಡದಲ್ಲಿ ನಾಲ್ಕರಿಂದ ಐದು ಮಂದಿ ಇದ್ದಿರಬಹುದು. ಬ್ಯಾಂಕ್ ಹೊರತುಪಡಿಸಿ ಇತರ ಕಡೆ ಕ್ಯಾಮರಾ ಇಲ್ಲ. ಇದು ಕಳ್ಳರ ಜಾಡು ಪತ್ತೆಗೆ ತೊಡಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ಕೋಟಿ ರೂ.ಗೂ ಅಧಿಕ ಮೊತ್ತ ಕಳವಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಗುರುವಾರ ರಾತ್ರಿ 10 ಗಂಟೆಯಾದರೂ ಬ್ಯಾಂಕ್‌ನಲ್ಲಿ ತಪಾಸಣೆ ನಡೆಸುತ್ತಿದ್ದರು. ಸಾರಡ್ಕದಿಂದ-ಕುದ್ದುಪದವು ನಡುವಿನ ರಸ್ತೆಯಲ್ಲಿರುವ ಎಲ್ಲ ಕ್ಯಾಮರಾಗಳ ಪರಿಶೀಲನೆ ನಡೆಸಲಾಗುತ್ತಿದೆ.

  ಕರ್ಣಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆಯಲ್ಲಿ ಒಂದು ಲಾಕರ್ ಬ್ರೇಕ್ ಆಗಿದೆ. ವಿಧಿವಿಜ್ಞಾನ ತಂಡ ತಪಾಸಣೆ ನಡೆಸುತ್ತಿದೆ. ಪ್ರಕರಣದ ಪತ್ತೆಗೆ ತಂಡ ನಿಯೋಜನೆ ಮಾಡಲಾಗುತ್ತದೆ. ಬ್ಯಾಂಕ್ ಭದ್ರತಾ ವ್ಯವಸ್ಥೆ ಕ್ಷೀಣವಾಗಿದೆ. ಅಲಾರಾಂ ಮೊಳಗದ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತದೆ.
  – ರಿಷ್ಯಂತ್, ಎಸ್‌ಪಿ, ದ.ಕ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts