More

    ಕಳವು ಆರೋಪಿ ಪೋಲಿಸ್ ವಶಕ್ಕೆ: ಬಾಲಪರಾಧಿ ಹಿನ್ನೆಲೆ ಠಾಣೆಯಲ್ಲೇ ಪ್ರಕರಣ ಇತ್ಯರ್ಥಗೊಳಿಸಿದ ಪೊಲೀಸರು!

    ವಿಜಯವಾಣಿ ಸುದ್ದಿಜಾಲ ಕಡಬ

    ಆಲಂಕಾರು ಪೇಟೆಯಲ್ಲಿರುವ ಮೊಬೈಲ್ ಅಂಗಡಿಯಿಂದ ಫೆ.5ರಂದು ರಾತ್ರಿ ಯುವಕನೋರ್ವ ಅಂಗಡಿಯ ಬೀಗ ಮುರಿದು ಮೊಬೈಲ್ ಕಳ್ಳತನ ನಡೆಸಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಯುವಕನನ್ನು ವಶಕ್ಕೆ ಪಡೆದ ಕಡಬ ಪೊಲೀಸರು ಕದ್ದಿರುವ ಮೊಬೈಲ್‌ಗಳನ್ನು ವಶಕ್ಕೆ ಪಡೆದು ಅಂಗಡಿ ಮಾಲೀಕರಿಗೆ ಹಿಂದಿರುಗಿಸಿದ್ದಾರೆ. ಬಳಿಕ ಈತ ಬಾಲಪರಾಧಿ ಎಂದು ಪ್ರಕರಣ ದಾಖಲಿಸದೆ ಪ್ರಕರಣವನ್ನು ರಾಜಿಯಲ್ಲಿ ಮುಗಿಸಿರುವ ವಿಚಾರ ಬೆಳಕಿಗೆ ಬಂದಿದೆ.

    ಫೆ.5ರಂದು ರಾತ್ರಿ ಉತ್ತರ ಪ್ರದೇಶ ಮೂಲದ, ನೆಕ್ಕೆರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಕುಟುಂಬದ ಜತೆ ಇರುವ ಯುವಕನೋರ್ವ ಅಂಗಡಿಯ ಬೀಗವನ್ನು ಎಕ್ಸೋ ಬ್ಲೇಡ್ ಮೂಲಕ ಮುರಿದು ಒಳನುಗ್ಗಿ ಕಳ್ಳತನ ನಡೆಸಿದ್ದಾನೆ. ಕಳ್ಳತನದ ವಿಷಯ ತಿಳಿದ ಅಂಗಡಿ ಮಾಲೀಕರು ಬೆಳಗ್ಗೆ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ತಮ್ಮ ಅಂಗಡಿಗೆ ಬರುತ್ತಿರುವ ಗ್ರಾಹಕ ಎಂದು ತಿಳಿದಿದೆ. ಬಳಿಕ ಪೊಲೀಸರಿಗೆ ತಿಳಿಸಿದ್ದು, ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಾರಂಭದಲ್ಲಿ ಕಳ್ಳತನದ ಬಗ್ಗೆ ಒಪ್ಪಿಕೊಳ್ಳದಿದ್ದರೂ ವಿಚಾರಣೆ ಬಳಿಕ ಒಪ್ಪಿಕೊಂಡು ಕದ್ದಿರುವ ಮೊಬೈಲ್‌ಗಳನ್ನು ಹಿಂತಿರುಗಿಸಿದ್ದಾನೆ ಎಂದು ತಿಳಿದು ಬಂದಿದೆ.

    ಮೊಬೈಲ್ ಎಗರಿಸಿದಾತ ಬಾಲಪರಾಧಿ ಎಂದು ವಿಚಾರಣೆ ವೇಳೆ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಜಿಯಲ್ಲಿ ಮುಗಿಸಲಾಗಿದೆ. ಅಂಗಡಿ ಮಾಲೀಕರು ದೂರು ನೀಡಿಲ್ಲ ಎಂದು ಕಡಬ ಎಸ್‌ಐ ಅಭಿನಂದನ್ ಮಾಹಿತಿ ನೀಡಿದ್ದಾರೆ.

    ಸಾರ್ವಜನಿಕರಲ್ಲಿ ಆತಂಕ

    ಹೊರ ರಾಜ್ಯದಿಂದ ಕಾರ್ಮಿಕರಾಗಿ ಇಲ್ಲಿಗೆ ಬರುವವರ ಮಾಹಿತಿಯನ್ನು ಠಾಣೆಯಲ್ಲಿ ನೀಡಬೇಕು. ಅವರನ್ನು ಕೆಲಸಕ್ಕೆ ಇಟ್ಟುಕೊಳ್ಳುವವರೂ ಜಾಗೃತರಾಗಬೇಕು ಎಂದು ಇಲಾಖೆ ಪ್ರಕಟಣೆ ನೀಡುತ್ತದೆ. ಆದರೆ ಕಾರ‌್ಯಗತಗೊಳಿಸುತ್ತಿಲ್ಲ. ಇತ್ತೀಚೆಗೆ ಕಡಬ ಐತ್ತೂರು ಗ್ರಾಮ ನಿವಾಸಿಯೋರ್ವರು ಹೊರ ರಾಜ್ಯದಿಂದ ಬರುವವರ ಮಾಹಿತಿಯನ್ನು ಠಾಣೆಗೆ ನೀಡಲು ಬಂದಾಗ ಅವರಿಂದ ಮಾಹಿತಿ ಪಡೆಯಲು ಪೊಲೀಸರು ಹಿಂದೇಟು ಹಾಕಿದ್ದರು, ಬಳಿಕ ಠಾಣಾಧಿಕಾರಿ ಪಡೆದುಕೊಂಡಿದ್ದರು. ಇತ್ತ ಹೊರ ರಾಜ್ಯದಿಂದ ಕೆಲಸಕ್ಕೆ ಬಂದಿರುವ ಈ ಯುವಕ ಕಳ್ಳತನ ನಡೆಸಿರುವ ವಿಡಿಯೋ ಲಭಿಸಿದ್ದರೂ ಆತನನ್ನು ಯಾವುದೇ ಪ್ರಕರಣ ದಾಖಲಿಸದೆ ಬಿಟ್ಟಿರುವುದರಿಂದ ಕಳ್ಳತನಗಳು ಹೆಚ್ಚಾಗುವುದಕ್ಕೆ ಆಸ್ಪದ ನೀಡಿದಂತಾಗುತ್ತದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts