More

    ಕುಪ್ಪಳಿ ಕುವೆಂಪು ಮನೆಯಲ್ಲಿ ನಡೆದಿದ್ದ ಕಳವು ಪ್ರಕರಣದಲ್ಲಿ ಇಬ್ಬರಿಗೆ ಎರಡು ವರ್ಷ ಜೈಲು, 5 ಸಾವಿರ ರೂ. ದಂಡ

    ತೀರ್ಥಹಳ್ಳಿ: ಕುಪ್ಪಳಿಯ ಕವಿಮನೆ (ರಾಷ್ಟ್ರಕವಿ ಕುವೆಂಪು ಮನೆ)ಯಲ್ಲಿ ಪದ್ಮವಿಭೂಷಣ ಪದಕ ಸೇರಿ ಇತರೆ ಅಮೂಲ್ಯ ವಸ್ತು ಕಳ್ಳತನ ಮಾಡಿದ್ದ ಅಪರಾಧಿಗಳಿಗೆ ತೀರ್ಥಹಳ್ಳಿ ನ್ಯಾಯಾಲಯ ಎರಡು ವರ್ಷ ಜೈಲು ವಾಸ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

    ಪ್ರಕರಣದ ಮೊದಲ ಅಪರಾಧಿ ದಾವಣಗೆರೆ ಜಿಲ್ಲೆ ತುರಚಘಟ್ಟದ ಬೆಳಂದೂರಿನ ರೇವಣಸಿದ್ದಪ್ಪ ವಿಚಾರಣಾ ಹಂತದಲ್ಲಿಯೇ ಮೃತ ಪಟ್ಟಿದ್ದಾನೆ.

    ರೇವಣಸಿದ್ದಪ್ಪಗೆ ಪದಕ ಅಪಹರಿಸಲು ಪ್ರೇರೇಪಿಸಿದ ಕವಿಮನೆಯ ಮಾರ್ಗದರ್ಶಕ ತೀರ್ಥಹಳ್ಳಿ ತಾಲೂಕು ಗಡಿಕಲ್ಲು ಅಂಜನಪ್ಪ ಎರಡನೇ ಅಪರಾಧಿ. ಕಳ್ಳತನದ ಮಾಲೆಂದು ತಿಳಿದಿದ್ದರೂ ಅದನ್ನು ಖರೀದಿಸಿದ್ದ ಸವಳಂಗದ ಪ್ರಕಾಶ್ ಮೂರನೇ ಅಪರಾಧಿ.

    ನ್ಯಾಯಾಲಯ 2 ಮತ್ತು 3ನೇ ಅಪರಾಧಿಗಳಿಗೆ ತಲಾ 2 ವರ್ಷ ಕಾರಾಗೃಹ ವಾಸ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲರಾದಲ್ಲಿ ಮತ್ತೆ ಆರು ತಿಂಗಳ ಸಜೆ ಅನುಭವಿಸುವಂತೆ ಆದೇಶಿಸಿದೆ.

    2015ರ ನವೆಂಬರ್ 23ರಂದು ಸಂಜೆ 6.30ರ ಕವಿಮನೆಗೆ ನುಗ್ಗಿ ಒಂದು ಸಾವಿರ ರೂ. ನಗದು ಹಾಗೂ ಕುವೆಂಪು ಅವರಿಗೆ ಮೈಸೂರು ವಿಶ್ವವಿದ್ಯಾಲಯ ನೀಡಿದ್ದ 2 ಪದಕ ಮತ್ತು ಕೇಂದ್ರ ಸರ್ಕಾರ ಪ್ರದಾನ ಮಾಡಿದ್ದ ಪದ್ಮವಿಭೂಷಣ ಪದಕ ಅಪಹರಿಸಿದ್ದರು.

    ಅಲ್ಲದೆ, ಈ ದೃಶ್ಯಾವಳಿ ದಾಖಲಾಗಿದ್ದ ಸಿಸಿ ಕ್ಯಾಮರಾ ಮತ್ತು ಒಂದು ಮಾನಿಟರ್ ಕೂಡ ನಾಶಪಡಿಸಿದ್ದರು. ಈ ಬಗ್ಗೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಖಜಾಂಚಿ ಡಿ.ಎಂ. ಮನುದೇವ್ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಅಂದಿನ ಪಿಎಸ್‌ಐ ಡಿ.ಆರ್. ಭರತ್‌ಕುಮಾರ್ ಹಾಗೂ ಪ್ರಭಾರ ಸಿಪಿಐ ಎಚ್.ಎಂ. ಮಂಜುನಾಥ್ ತಂಡ ಆರೋಪಿಗಳನ್ನು ಬಂಧಿಸಿ ಪದ್ಮವಿಭೂಷಣ ಪ್ರಶಸ್ತಿ ಪದಕ ಹೊರತು ಪಡಿಸಿ ಕಳ್ಳತನ ಮಾಡಿದ್ದ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿತ್ತು.

    ಆದರೆ ಪದ್ಮವಿಭೂಷಣ ಪ್ರಶಸ್ತಿ ಪದಕ ಮಾತ್ರ ಈವರೆಗೂ ಪತ್ತೆಯಾಗಿಲ್ಲ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಡಿ. ಬಿನು ವಾದ ಮಂಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts