More

    ಪಟ್ಟಣ ಪಂಚಾಯಿತಿ ಕನಸಿಗೆ ರೆಕ್ಕೆ, ಹಿರಿಯ ವಕೀಲರಿಂದ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕರ ಹಿತಾಸಕ್ತಿ ಅರ್ಜಿ ವಿಚಾರಣೆ

    ತ್ಯಾಮಗೊಂಡ್ಲು: ಗ್ರಾಮ ಪಂಚಾಯಿತಿಯಾಗಿರುವ ತ್ಯಾಮಗೊಂಡ್ಲನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಹಿರಿಯ ವಕೀಲರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದು, ಸೋಮವಾರ ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆದಿದೆ.

    ವಿಜಯವಾಣಿಯಲ್ಲಿ ಸೆ.14ರಂದು ‘ನನಸಾಗದ ಪಟ್ಟಣ ಪಂಚಾಯಿತಿ ಕನಸು’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ವರದಿ ಗಮನಿಸಿದ ಹಿರಿಯ ವಕೀಲ ವೆಂಕಟೇಶ್ ಎಚ್.ದೊಡ್ಡೇರಿ ಅವರು, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಪತ್ರಿಕೆಯಲ್ಲಿ ಬಂದ ವರದಿಯನ್ನು ಅರ್ಜಿ ಜತೆ ಅಡಕ ಮಾಡಿದ್ದಾರೆ. ಅರ್ಜಿಯನ್ನು ಹೈಕೋರ್ಟ್ ಅ.19ರಂದು ವಿಚಾರಣೆಗೆ ಅಂಗೀಕರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ, ಪಟ್ಟಣ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ, ರಾಜ್ಯ ಚುನಾವಣಾ ಆಯೋಗ ಸೇರಿ ಸಂಬಂಧಪಟ್ಟ ಎಲ್ಲ ಇಲಾಖೆಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ನ.2ಕ್ಕೆ ಕೋರ್ಟ್ ಮುಂದೂಡಿದೆ.

    ಜನಸಂಖ್ಯೆ ಸೇರಿದಂತೆ ಇತರ ನಿಯಮಗಳ ಅಡಿಯಲ್ಲಿ ಗ್ರಾಪಂಗಳನ್ನು ಮೇಲ್ದರ್ಜೆಗೇರಿಸುವುದು ಸರ್ಕಾರದ ಕರ್ತವ್ಯ. ಆದರೆ ಇಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ಕೋರ್ಟ್ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ವಕೀಲರು ವಾದ ಮಂಡಿಸಿದರು.

    ಸಿಎಂ ಶಿಾರಸು:  ತ್ಯಾಮಗೊಂಡ್ಲು ಗ್ರಾಮವನ್ನು ಮೇಲ್ದರ್ಜೆಗೇರಿಸುವಂತೆ 2017ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಶಿಾರಸು ಮಾಡಿ ಪತ್ರ ಕೂಡ ಬರೆದಿದ್ದರು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಸಾಧ್ಯವಾಗಿಲ್ಲ.

    ಸೆಪ್ಟೆಂಬರ್‌ನಲ್ಲಿ ಸ್ವಗ್ರಾಮ ತ್ಯಾಮಗೊಂಡ್ಲು ಹೋಬಳಿಯ ದೊಡ್ಡೇರಿಗೆ ಬಂದಿದ್ದಾಗ ವಿಜಯವಾಣಿಯಲ್ಲಿ ಬಂದಿದ್ದ ವಿಶೇಷ ವರದಿ ಓದಿದ್ದೆ. 2017ರಲ್ಲಿ ಮುಖ್ಯಮಂತ್ರಿಗಳು ಶಿಫಾರಸು ಮಾಡಿರುವ ಪತ್ರಕ್ಕೆ ಬೆಲೆ ನೀಡದಿರುವ ಬಗ್ಗೆ ತಿಳಿದುಕೊಂಡು ಸಾರ್ವಜನಿಕ ಹಿತಾಸಕ್ತಿ ದಾಖಲು ಮಾಡಲು ತೀರ್ಮಾನಿಸಿ, ಅದಕ್ಕೆ ಬೇಕಾದ ಎಲ್ಲ ದಾಖಲೆಗಳನ್ನು ಒಗ್ಗೂಡಿಸಿಕೊಂಡು ಮಾಜಿ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಅವರ ಮೂಲಕ ಧಾವೆ ಹಾಕಿದ್ದೇನೆ. ಈಗ ಸರ್ಕಾರಕ್ಕೆ ನೋಟಿಸ್ ನೀಡಲಾಗಿದ್ದು, ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ.
    ಎಚ್. ವೆಂಕಟೇಶ್, ದೊಡ್ಡೇರಿ, ಹಿರಿಯ ವಕೀಲ

    ವಿಜಯವಾಣಿಯಲ್ಲಿ ಬಂದಿದ್ದ ವಿಶೇಷ ವರದಿ ಗಮನಿಸಿ ಹಿರಿಯ ವಕೀಲರಾದ ವೆಂಕಟೇಶ್ ಎಚ್. ದೊಡ್ಡೇರಿ ಅವರು ತ್ಯಾಮಗೊಂಡ್ಲು ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಪ್ರಕರಣ ಹೂಡಿರುವುದು ಸ್ವಾಗತಾರ್ಹ, ಪಟ್ಟಣ ಪಂಚಾಯಿತಿಯಾದರೆ ಈ ಪಟ್ಟಣದ ಸ್ವರೂಪವೇ ಬದಲಾಗುತ್ತದೆ.
    ಟಿ.ಎನ್. ಹನುಮಂತರಾಜು, ಗ್ರಾಪಂ ಮಾಜಿ ಅಧ್ಯಕ್ಷ, ತ್ಯಾಮಗೊಂಡ್ಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts