More

    ವೆಬ್​ಸೈಟ್ ನಾಪತ್ತೆ… ಹುಡುಕಿಕೊಡಿ..

    ಹುಬ್ಬಳ್ಳಿ: ಜನಸ್ನೇಹಿಯಾಗುವ ಉದ್ದೇಶದಿಂದ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ಘಟಕವು ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ವೆಬ್​ಸೈಟ್ ಒಂದು ಪ್ರಮುಖ ಸಂಗತಿಯಾಗಿದೆ. ಆದರೆ, ಈ ವೆಬ್​ಸೈಟ್ ಸದ್ಯ ನಾಪತ್ತೆಯಾಗಿದೆ. ಹುಡುಕಿಕೊಡಿ ಎಂದು ಸಾರ್ವಜನಿಕರೇ ಪೊಲೀಸರಿಗೆ ದೂರು ಕೊಡಬೇಕಾದ ಪರಿಸ್ಥಿತಿ ತಲೆದೋರಿದೆ.

    ಕಳೆದ ಎರಡು ತಿಂಗಳಿಂದ ಈ ವೆಬ್​ಸೈಟ್ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ. ಹು-ಧಾ ಕಮಿಷನರೇಟ್ ಘಟಕ ಹಲವು ವರ್ಷಗಳಿಂದ www.hublidharwadpolice.com ಹೆಸರಿನ ವೆಬ್​ಸೈಟ್ ಹೊಂದಿದೆ. ಇದರಲ್ಲಿ ಅವಳಿ ನಗರದ ಅಪರಾಧ, ಕಾನೂನು ಸುವ್ಯವಸ್ಥೆಯ ಮಾಹಿತಿ, ಎಲ್ಲ ಪೊಲೀಸ್ ಠಾಣೆಗಳ ವಿಳಾಸ, ದೂರವಾಣಿ ಸಂಖ್ಯೆ, ಅಧಿಕಾರಿಗಳ ಮೊಬೈಲ್​ಫೋನ್ ಸಂಖ್ಯೆ ಲಭ್ಯವಾಗುತ್ತಿತ್ತು. ಹಿಂದಿನ ಮೂರು ವರ್ಷಗಳ ಅಪರಾಧ, ಅಪಘಾತ, ಕಳ್ಳತನ, ದೊಂಬಿ, ಕೊಲೆ, ಮತ್ತಿತರ ಅಂಕಿ ಅಂಶಗಳು ಕೂಡ ಇದರಲ್ಲಿದ್ದವು.

    ಡಿಜಿಟಲ್ ಇಂಡಿಯಾ ಕಲ್ಪನೆಯಲ್ಲಿ ವಿವಿಧ ಇಲಾಖೆಗಳು ಅಪ್​ಡೇಟ್ ಆಗುತ್ತಿರುವ ಸಂದರ್ಭದಲ್ಲಿ, ಹು-ಧಾ ಕಮಿಷನರೇಟ್ ಮಾತ್ರ ಇದ್ದ ಒಂದು ವೆಬ್​ಸೈಟ್ ಅನ್ನೂ ಬಂದ್ ಮಾಡಿದೆ. ಇನ್ನಾದರೂ ವೆಬ್​ಸೈಟ್​ಗೆ ಮರುಜೀವ ನೀಡಬೇಕು. ಈ ಮೂಲಕ ಜನಸ್ನೇಹಿಯಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

    ಜಿಲ್ಲಾ ಪೊಲೀಸ್ ವೆಬ್​ಸೈಟ್​ಗೆ ಜೀವಕಳೆ

    ಧಾರವಾಡ ಜಿಲ್ಲಾ ಪೊಲೀಸ್ ಘಟಕ ಜ. 26ರ ಗಣರಾಜ್ಯೋತ್ಸವದಂದು ನೂತನ ವೆಬ್​ಸೈಟ್ https://dharwadpolice.karnataka.gov.in ಲೋಕಾರ್ಪಣೆಗೊಳಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ನೇತೃತ್ವದ ತಂಡ ಹೊಸ ವೆಬ್​ಸೈಟ್​ಗೆ ಜೀವಕಳೆ ತಂದಿದೆ. ಜನಸ್ನೇಹಿ, ನಾಗರಿಕ ಕೇಂದ್ರಿತ ಸೇವೆಗಳನ್ನು ಒಳಗೊಂಡ ಸಮಗ್ರ ಮಾಹಿತಿಯನ್ನು ವೆಬ್​ಸೈಟ್ ಮೂಲಕ ನೀಡುತ್ತಿದೆ. ತನ್ಮೂಲಕ ಪೊಲೀಸ್ ಐಟಿ ತಂತ್ರಾಂಶವನ್ನು ಕಾರ್ಯಗತಗೊಳಿಸುವಲ್ಲಿ ಧಾರವಾಡ ಜಿಲ್ಲೆ ರಾಜ್ಯದಲ್ಲೇ 2ನೇ ಸ್ಥಾನ ಪಡೆದಿದೆ.

    ತಪ್ಪಿತು ಆನ್​ಲೈನ್ ದೂರು ಸಲ್ಲಿಸುವ ಅವಕಾಶ: ಈ ವೆಬ್​ಸೈಟ್​ನ ಪ್ರಮುಖ ಅನುಕೂಲ ಏನೆಂದರೆ, ಇದರ ಮೂಲಕವೂ ದೂರು ಸಲ್ಲಿಸುವ ಅವಕಾಶವು ಸಾರ್ವಜನಿಕರಿಗೆ ಇತ್ತು.

    ಎಫ್​ಬಿ ಅಕೌಂಟ್ ಸಕ್ರಿಯ

    ಕಮಿಷನರೇಟ್ ಘಟಕದ ಫೇಸ್​ಬುಕ್ ಅಕೌಂಟ್ (Hubballi Dharawad city Police) ಸಕ್ರಿಯವಾಗಿದೆ. ಘಟಕದ ಮಾಹಿತಿಗಳನ್ನು ಜನರಿಗೆ ತಲುಪಿಸುತ್ತಿದೆ. ಈವರೆಗೆ 38,264 ಫಾಲೋವರ್​ಗಳನ್ನು ಹೊಂದಿದೆ. ಈ ಹಿಂದೆ ಪಾಂಡುರಂಗ ರಾಣೆ ಆಯುಕ್ತರಾಗಿದ್ದಾಗ ಅಪರಾಧ ತಡೆ ಕುರಿತು ಕರಪತ್ರ, ಕಾರ್ಟೂನ್ ಮೂಲಕ ಜಾಗೃತಿ ಮೂಡಿಸುತ್ತಿದ್ದರು.

    ವೆಬ್​ಸೈಟ್​ನಲ್ಲಿ ಕೆಲ ಮಹತ್ವದ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಮೂರು ದಿನಗಳಲ್ಲಿ ವೆಬ್​ಸೈಟ್ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಕಮಿಷನರೇಟ್ ಘಟಕದಿಂದಲೇ ನಿರ್ವಹಣೆ ಮಾಡಲಾಗುವುದು.
    | ಲಾಬುರಾಮ ಹು-ಧಾ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts