More

    ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಯಶಸ್ವಿ

    ಬ್ಯಾಡಗಿ: ಪಹಣಿ ಪತ್ರದ ದೋಷ ತಿದ್ದುಪಡಿ, ಅರ್ಹರಿಗೆ ಸೌಲಭ್ಯ, ಸರ್ಕಾರಿ ಸೇವೆಯಲ್ಲಿನ ವಿಳಂಬ ತಪ್ಪಿಸುವುದು ಸೇರಿ ಜನರ ಮನೆ ಬಾಗಿಲಿಗೆ ಅಧಿಕಾರಿಗಳನ್ನು ಕಳುಹಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮ ಇದಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.

    ತಾಲೂಕಿನ ವೀರಾಪುರ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ, ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ತಾಲೂಕು ಮಟ್ಟದ 29 ಇಲಾಖೆಗಳ ಅಧಿಕಾರಿಗಳು ಹಾಜರಿದ್ದು, ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಮೂಲಕ ನ್ಯಾಯ ಒದಗಿಸಲಾಗುತ್ತಿದೆ. ಗ್ರಾಮಸ್ಥರು ಕೋವಿಡ್ ಎರಡನೇ ಡೋಸ್ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದರು.

    ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಜಿಪಂ ವ್ಯಾಪ್ತಿಯ ಕೆರೆಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಯಾಗಿವೆ. ಆದರೆ, ಹೊರವಲಯದಲ್ಲಿರುವ ಕೆರೆಗಳು ಇದರಿಂದ ಹೊರಗಿದ್ದು, ಗ್ರಾಮಸ್ಥರು ಕೆರೆ ಅಭಿವೃದ್ಧಿಗೊಳಿಸಲು ಸಾಧ್ಯವಾಗಿಲ್ಲ. ಅಲ್ಲದೆ, ಗ್ರಾಮ ಪಂಚಾಯಿತಿಗೆ ಸರ್ಕಾರ ವಿಶೇಷ ಅನುದಾನ ಮಂಜೂರು ಮಾಡಿಲ್ಲ ಎಂದರು.

    ತಾಲೂಕಿನಲ್ಲಿ 20 ಹೈನು ರಾಸುಗಳು ಚರ್ಮಗಂಟು ರೋಗದಿಂದ ಮೃತಪಟ್ಟಿವೆ. ಅವುಗಳ ಮಾಲೀಕರಿಗೆ ಎನ್​ಡಿಆರ್​ಎಫ್ ಅನುದಾನದಡಿ ಪರಿಹಾರ ನೀಡಬೇಕು. ಕುರಿ ಸತ್ತರೆ 5 ಸಾವಿರ ರೂಪಾಯಿ ಇದೆ. ಆದರೆ, ಲಕ್ಷಾಂತರ ರೂ. ವೆಚ್ಚದ ಹೈನುರಾಸು, ಎತ್ತು ಮೃತಪಟ್ಟಲ್ಲಿ ಒಂದು ರೂಪಾಯಿ ಕೂಡ ಸಿಗುತ್ತಿಲ್ಲ. ಈ ಕುರಿತು ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು.

    ಮಲ್ಲೂರು ಗ್ರಾಪಂ ಅಧ್ಯಕ್ಷೆ ನೀಲಮ್ಮ ಕುಲಕರ್ಣಿ, ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಕೆ., ಶಿವಾನಂದ ಉಳ್ಳಾಗಡ್ಡಿ, ಹಿಂದುಳಿದ ವರ್ಗಗಳ ವಿಸ್ತರ್ಣಾಧಿಕಾರಿ ಸಿ.ಬಿ. ಪ್ರಸಾದಿಮಠ, ಗುಡ್ಡಪ್ಪ ಮಾದರ, ಬಸಪ್ಪ ಕಾಕೋಳ, ಶಬ್ಬೀರ ಬಾಗೇವಾಡಿ, ಗುಂಡಪ್ಪ ಹುಬ್ಬಳ್ಳಿ, ಜಗದೀಶ ಮಣ್ಣಮ್ಮನವರ ಇತರರಿದ್ದರು.

    ಮನೆಗಳ ಸ್ಥಳಾಂತರಕ್ಕೆ ಒತ್ತಾಯ

    ಗ್ರಾಮದಲ್ಲಿ ಸುಮಾರು 150 ಮನೆಗಳಿದ್ದು, ಗ್ರಾಮಕ್ಕೆ ಹೊಂದಿಕೊಂಡ ಕೆರೆಯಲ್ಲಿ ಹೂಳೆತ್ತಲಾಗಿದೆ. ಹೆಚ್ಚು ತೆಗ್ಗು ಆಗಿದ್ದರಿಂದ ಕೆರೆ ತುಂಬಿ ಗ್ರಾಮದ ಎಲ್ಲ ಮನೆಗಳಿಗೂ ನೀರು ನುಗ್ಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಗ್ರಾಮಕ್ಕೆ ಹೊಂದಿಕೊಂಡು 12.19 ಎಕರೆ ಸರ್ಕಾರಿ ಗುಡ್ಡದ ಜಮೀನಿದೆ. ಈ ಭೂಮಿಯನ್ನು ಮನೆ ಕಟ್ಟಿಸಿಕೊಳ್ಳಲು ಮಂಜೂರು ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಈ ಕುರಿತು ಗ್ರಾಪಂ ಹಾಗೂ ತಾಪಂನಿಂದ ಮಾಹಿತಿ ತರಿಸಿಕೊಂಡು, ಅಗತ್ಯವಿದ್ದಲ್ಲಿ ಜಾಗ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

    ಅತಿವೃಷ್ಟಿಗೆ ಹಾಳಾದ ಜಮೀನುಗಳಿಗೆ ಪರಿಹಾರ ನೀಡಿಲ್ಲ. ಎಲ್ಲ ಬೆಳೆಗಳು ನೀರಿನಲ್ಲಿ ನಿಂತಿದ್ದು, ಜೀವನ ನಡೆಸುವುದು ಕಷ್ಟವಾಗಿದೆ. ಕೂಡಲೆ ಬೆಳೆ ಹಾನಿ ಪರಿಹಾರ ಒದಗಿಸಿ ಎಂದು ರೈತರೊಬ್ಬರು ಮನವಿ ಮಾಡಿದರು. ತಹಸೀಲ್ದಾರ್ ವೈ. ತಿಪ್ಪೇಸ್ವಾಮಿ ಪ್ರತಿಕ್ರಿಯಿಸಿ, ಈಗಾಗಲೇ ಶೇ. 80ರಷ್ಟು ಅರ್ಜಿಗಳು ವಿಲೇವಾರಿಯಾಗಿವೆ. ಬ್ಯಾಂಕ್ ಖಾತೆ ವಿವರ, ಆಧಾರ ಹಾಗೂ ಉತಾರ ಪಡೆದಿದ್ದು, ಪರಿಶೀಲನೆ ಪೂರ್ಣಗೊಂಡಿದೆ. ಒಂದೆರಡು ದಿನಗಳಲ್ಲಿ ಪರಿಹಾರದ ಹಣ ಜಮೆಯಾಗಲಿದೆ ಎಂದರು.

    ಕೈಕೊಟ್ಟ ವಿದ್ಯುತ್

    ಗ್ರಾಮದಲ್ಲಿ ಮಹತ್ವದ ಕಾರ್ಯಕ್ರಮ ಆಯೋಜಿಸಿದ್ದರೂ, ಹೆಸ್ಕಾಂ ವಿದ್ಯುತ್ ಸ್ಥಗಿತಗೊಳಿಸಿತು. ಹೀಗಾಗಿ, ಸಭೆಯ ಉದ್ಘಾಟನೆ ಭಾಷಣ ಮಾಡುತ್ತಿದ್ದ ಶಾಸಕರು ಹಾಗೂ ಜಿಲ್ಲಾಧಿಕಾರಿ ಧ್ವನಿವರ್ಧಕ ಸಮಸ್ಯೆ ಅನುಭವಿಸಿದರು.

    128 ಅರ್ಜಿ ಸ್ವೀಕಾರ…

    ಗ್ರಾಮ ವಾಸ್ತವ್ಯದಲ್ಲಿ 128 ಅರ್ಜಿಗಳನ್ನು ಸ್ವೀಕರಿಸಿ ಬಹುಪಾಲು ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಯಿತು. ವಿಧವಾ ವೇತನ, ವೃದ್ಧಾಪ್ಯ ವೇತನ ಮಂಜೂರಾತಿ ನೀಡಿ ಆದೇಶ ಪತ್ರವನ್ನು ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts