More

    ಸಂತ್ರಸ್ತರಿಗೆ ಸಿಕ್ಕಿಲ್ಲ ಇನ್ನೂ ಪರಿಹಾರ

    ಸುಭಾಸ ಧೂಪದಹೊಂಡ ಕಾರವಾರ
    ಕಾಳಿ ಹುಲಿ ಸಂರಕ್ಷಿತ ಯೋಜನೆ(ಕೆಟಿಆರ್) ವ್ಯಾಪ್ತಿಯಲ್ಲಿನ ಕುಟುಂಬಗಳು ಈಗ ಸ್ಥಳಾಂತರಗೊಂಡರೆ ಸರ್ಕಾರ ಅವರಿಗೆ ಪರಿಹಾರ ನೀಡುತ್ತದೆ. ಆದರೆ, ಈ ಹಿಂದೆಯೇ ಸ್ಥಳಾಂತರಗೊಂಡ ಕೆಲ ಕುಟುಂಬಗಳು ಪರಿಹಾರ ಸಿಗದೇ ಪರಿತಪಿಸುತ್ತಿವೆ. ಕೆಟಿಆರ್ ವ್ಯಾಪ್ತಿಯ ಜಮೀನು ಅವರದ್ದೇ ಹೆಸರನಲ್ಲಿದ್ದರೂ ಅದನ್ನು ಸಾಗುವಳಿ ಅಥವಾ ಪರಬಾರೆ ಮಾಡದ ದುಸ್ಥಿತಿ ಅವರದ್ದಾಗಿದೆ.
    ಜೊಯಿಡಾ ತಾಲೂಕಿನ ಕೊಡಸಳ್ಳಿ, ಸುಳಗೇರಿ, ಬಿಡೋಲಿ ಗ್ರಾಮಗಳ 15ರಷ್ಟು ಕುಟುಂಬಗಳು ಅಣಶಿ ಹುಲಿ ಸಂರಕ್ಷಿತ ಅಭಯಾರಣ್ಯದ (ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ನಾಮಕರಣಕ್ಕೂ ಪೂರ್ವದಲ್ಲಿ ಅಣಶಿ ಅಭಯಾರಣ್ಯವಾಗಿತ್ತು)ವ್ಯಾಪ್ತಿಯಲ್ಲಿದ್ದ ಕಾರಣ ಸ್ವ ಇಚ್ಛೆಯಿಂದ 2008ರಲ್ಲಿ ಸ್ಥಳಾಂತರಗೊಂಡವು. ಯಲ್ಲಾಪುರ ತಾಲೂಕಿನ ಕಳಚೆ, ಕಲ್ಲೇಶ್ವರ ಮುಂತಾದೆಡೆ ನೆಲೆ ಕಂಡುಕೊಂಡಿವೆ. ಆದರೆ, ಆ ಕುಟುಂಬಗಳಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ.
    ಕೃಷಿ ಜಮೀನಿನ ಕಾರ್ವಿುಕರು ಮತ್ತು ಗೇಣಿದಾರರಿಗೆ ಪರಿಹಾರ ನೀಡಲಾಯಿತು. ಆದರೆ, ನಮಗೆ ಪರಿಹಾರ ನೀಡಿಲ್ಲ. ಹೊಸದಾಗಿ ಸ್ಥಳಾಂತರಗೊಳ್ಳುವ ಕುಟುಂಬಗಳಿಗೆ ಮಾತ್ರ ಪುನರ್ವಸತಿ ಪರಿಹಾರದ ವ್ಯವಸ್ಥೆ ಇದೆ. ನೀವು ಈಗಾಗಲೇ ಸ್ಥಳಾಂತರವಾದ ಕಾರಣ ಪರಿಹಾರ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ ಕೆಟಿಆರ್ ಅಧಿಕಾರಿಗಳು ಎಂಬುದು ಸ್ಥಳಾಂತರಗೊಂಡ ಕುಟುಂಬಗಳ ಮಾಲೀಕರ ಗೋಳು.
    ಪಾಳು ಬಿದ್ದ ಜಮೀನು: ಕೆಟಿಆರ್ ವ್ಯಾಪ್ತಿಯ ಕುಗ್ರಾಮಗಳಲ್ಲಿರುವ ಜಮೀನು ಇನ್ನೂ ಮಾಲೀಕರ ಹೆಸರಿನಲ್ಲಿಯೇ ಇದೆ. ಆದರೆ, ಸುತ್ತಲೂ ದಟ್ಟವಾದ ಕಾಡು ಬೆಳೆದಿದೆ. ಆ ಭಾಗದಲ್ಲಿ ಕಾಡು ಪ್ರಾಣಿಗಳ ಸಂಖ್ಯೆಯೂ ಹೆಚ್ಚಿದ್ದರಿಂದ ಸಾಗುವಳಿ ಮಾಡಲು ಸಾಧ್ಯವಾಗುತ್ತಿಲ್ಲ. ಜಮೀನುಗಳಿಗೆ ರಸ್ತೆ ಸಂಪರ್ಕವೂ ಇಲ್ಲ. ಪರಬಾರೆ ಮಾಡೋಣ ಎಂದರೆ ಅದೂ ಸಾಧ್ಯವಿಲ್ಲ. ಒಟ್ಟಿನಲ್ಲಿ ನಮ್ಮ ಹೆಸರಿಗೆ ಜಮೀನಿದ್ದೂ ಪ್ರಯೋಜನ ಇಲ್ಲದಂತಾಗಿದೆ ಎಂದು ಕುಟುಂಬದ ಸದಸ್ಯರು ಬೇಸರ ವ್ಯಕ್ತಪಡಿಸುತ್ತಾರೆ. ಕೆಟಿಆರ್ ವ್ಯಾಪ್ತಿಯಲ್ಲಿ ಪಾಳು ಬಿದ್ದ ಜಮೀನುಗಳ ಸಮೀಕ್ಷೆ ಮಾಡಿ. ಜಿಲ್ಲಾಧಿಕಾರಿಗಳ ಪುನರ್ವಸತಿ ಸಮಿತಿಗೆ ವರದಿ ಮಾಡಿದಲ್ಲಿ ಅದರ ಆಧಾರದ ಮೇಲೆ ನ್ಯಾಯಾಲಯದ ಮೊರೆಯನ್ನಾದರೂ ಹೋಗಬಹುದಾಗಿದೆ. ಆದರೆ, ಅದಕ್ಕೂ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಕಲ್ಲೇಶ್ವರದ ನಿವಾಸಿ ನಾರಾಯಣ ಹೆಗಡೆ.
    ಹದಿನೈದು ಲಕ್ಷ ರೂಪಾಯಿ ಪ್ಯಾಕೇಜ್: ಸದ್ಯ ಕೆಟಿಆರ್ ವ್ಯಾಪ್ತಿಯಲ್ಲಿನ ಕುಟುಂಬಗಳು ಸ್ಥಳಾಂತರಗೊಳ್ಳುತ್ತೇವೆ ಎಂದರೆ ಅದಕ್ಕೆ ಪರಿಹಾರದ ಪ್ಯಾಕೇಜ್ ನೀಡಲಾಗುತ್ತದೆ. ಕೆಟಿಆರ್ ವ್ಯಾಪ್ತಿಯ ಕುಟುಂಬಗಳನ್ನು ಸ್ಥಳಾಂತರ ಮಾಡುವ ಜವಾಬ್ದಾರಿಯನ್ನು ಆ ಭಾಗದ ಎನ್​ಜಿಒ ಒಂದು ನಡೆಸುತ್ತಿದೆ. ಸದ್ಯ ತಂದೆ, ತಾಯಿ ಹಾಗೂ ಮದುವೆಯಾಗದ ಗಂಡು ಮಕ್ಕಳ ಹಾಗೂ 18 ವರ್ಷ ವಯೋಮಾನದೊಳಗಿನ ಹೆಣ್ಣು ಮಕ್ಕಳಿರುವ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳಿದ್ದರೆ ಪ್ರತ್ಯೇಕವಾಗಿ ಹೆಚ್ಚುವರಿ 15 ಲಕ್ಷ ರೂ. ನೀಡಲಾಗುತ್ತದೆ. ಅದೇ ಕುಟುಂಬದಲ್ಲಿ ಮದುವೆಯಾದ ಮಗನಿದ್ದ ಎಂದರೆ ಆತನ ಕುಟುಂಬವನ್ನು ಪ್ರತ್ಯೇಕವಾಗಿ ಪರಿಗಣಿಸಿ ಹೆಚ್ಚುವರಿ 15 ಲಕ್ಷ ರೂ. ಪರಿಹಾರ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ, ಈ ಹಿಂದೆ ಸ್ಥಳಾಂತರವಾದವರಿಗೆ ಈ ಪ್ಯಾಕೇಜ್ ಸಿಕ್ಕಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts