More

    ಕನ್ನಡದ ಗಟ್ಟಿತನ ಮಸುಕಾಗುವ ಅಪಾಯ

    ಶಿವಮೊಗ್ಗ: ಕನ್ನಡ ಭಾಷೆ ಅತ್ಯಂತ ವ್ಯವಸ್ಥಿತವಾಗಿ ರೂಪುಗೊಂಡಿದೆ. ಎಲ್ಲ ಭಾವನೆಗಳನ್ನು ಹಂಚಿಕೊಳ್ಳಲು ಪದಪುಂಜಗಳಿವೆ. ಆಂಗ್ಲ ಭಾಷೆಯಲ್ಲಿ ಕೆಲವು ಭಾವಾಭಿವ್ಯಕ್ತಿಗೆ ಪದಗಳೇ ಇಲ್ಲ. ಕನ್ನಡ ಒಂದು ರೀತಿಯಲ್ಲಿ ಆನೆಯ ಸ್ವರೂಪದ್ದು. ವಿಪರ್ಯಾಸವೆಂದರೆ ಇಂದು ಆನೆಯಂತಹ ಕನ್ನಡವನ್ನು ಆಡಿನಂತಹ ಇಂಗ್ಲಿಷ್ ನುಂಗಿ ಹಾಕುತ್ತಿದೆ ಎಂದು ನಿವೃತ್ತ ಪ್ರಾಚಾರ್ಯ, ಖ್ಯಾತ ವ್ಯಂಗ್ಯ ಚಿತ್ರಕಾರ ನಟರಾಜ್ ಅರಳಸುರಳಿ ಬೇಸರ ವ್ಯಕ್ತಪಡಿಸಿದರು.

    ತೀರ್ಥಹಳ್ಳಿ ತಾಲೂಕು ಹೊಸಅಗ್ರಹಾರದ ಬಾನ್ಸುರಿ ನಿಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ವೆಂಕಟರಮಣ ಭಟ್ (ಹಿರಿಯಣ್ಣ) ಅವರ ಪಲ್ಲವ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂದು ಅನೇಕ ಪ್ರಕಾರಗಳಲ್ಲಿ ಆಧುನಿಕತೆ ಆವರಿಸಿಕೊಂಡಿರುವ ಪರಿಣಾಮ ಕನ್ನಡತನ, ಕನ್ನಡದ ಗಟ್ಟಿತನ ಮಸುಕಾಗುವ ಅಪಾಯ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಕನ್ನಡದಲ್ಲಿನ ವಾಕ್ಯ ರಚನೆಗಳು ಸ್ಪಷ್ಟವಾಗಿ ಮನಮುಟ್ಟುತ್ತವೆ. ಇವು ಅತ್ಯಂತ ನಿಖರವಾಗಿಯೂ ಇರುತ್ತವೆ. ಕನ್ನಡ ವಿರಹ ಎಂಬ ಪದದ ವಿಸ್ತಾರವಾದ ಅರ್ಥವನ್ನು ವಿವರಿಸುವ ಇಂಗ್ಲಿಷ್ ಪದವೇ ಇಲ್ಲ. ಇದೊಂದು ಉದಾಹರಣೆಯಷ್ಟೇ. ಇಂತಹ ಅನೇಕ ವಿಷಯಗಳಲ್ಲಿ ಕನ್ನಡ ಬೇರೆಲ್ಲ ಭಾಷೆಗಳಿಗಿಂತಲೂ ವಿಶಿಷ್ಟವಾಗಿದೆ ಎಂದರು.
    ವೆಂಕಟರಮಣ ಭಟ್ ಅವರು ಅತ್ಯುತ್ತಮ ಕವಿತೆಗಳನ್ನು ರಚಿಸಿದ್ದಾರೆ. 70-80 ದಶಕಗಳಲ್ಲಿ ಅವರು ಬರೆದಿದ್ದ ಕವಿತೆಗಳಲ್ಲಿ ಕೆಲವು ಪ್ರಕಟಿತವಾಗಿದ್ದವು. ಇನ್ನು ಕೆಲವು ಅಪ್ರಕಟಿತವಾಗಿಯೇ ಉಳಿದಂತವು. ತಡವಾಗಿಯಾದರೂ ಅದಕ್ಕೊಂದು ದಾಖಲೆಯ ಸ್ವರೂಪ ಸಿಕ್ಕಿರುವುದು ಸಂತೋಷದ ಸಂಗತಿ. ಮುದ್ರಣಗೊಂಡು ಓದುಗರ ಮುಂದೆ ಪಲ್ಲವದ ರೂಪದಲ್ಲಿ ಕಾಣಿಸಿಕೊಂಡಿರುವುದು ಖುಷಿಯ ವಿಚಾರ ಎಂದು ಹೇಳಿದರು.
    ಈ ಕವನ ಸಂಕಲದಲ್ಲಿ ವಿಷಯ ವೈವಿಧ್ಯತೆಯಿದೆ. ಭಾಷೆ ಸರಳವಾಗಿದೆ. ಕಾವ್ಯ ರಚನೆ, ಕಾವ್ಯದ ವಸ್ತು ಎಲ್ಲವೂ ಸರಳ ಎನಿಸಿದರೂ ಕೆಲವು ಕವಿತೆಗಳನ್ನು ಅರ್ಥ ಮಾಡಿಕೊಳ್ಳಲು ಒಳನೋಟದ ಅಗತ್ಯವೂ ಇದೆ. ಪದ್ಯದೊಳಗೆ ಒಂದು ಗೂಡಾರ್ಥ ಇರುತ್ತದೆ. ಬೇರೆ ಸಾಹಿತ್ಯಗಳಂತೆ ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಇವುಗಳನ್ನು ಅಸಂಗತದ ಪದ್ಯದ ಶೈಲಿ ಎನ್ನಲಡ್ಡಿಯಿಲ್ಲ. ಇದು ಆಂಗ್ಲ ಸಾಹಿತ್ಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಶೈಲಿ ಬಹಳ ಹಿಂದೆಯೇ ಕನ್ನಡದಲ್ಲಿ ಚಾಲ್ತಿಯಲ್ಲಿದೆ. ಶಿಶುನಾಳ ಶರೀಫರ ತತ್ವ ಪದಗಳೇ ಇದಕ್ಕೆ ನಿದರ್ಶನ ಎಂದರು.
    ಆಪ್ತ ಸಮಾಲೋಚಕಿ ವಿನುತಾ ಮುರಳೀಧರ ಮಾತನಾಡಿ, ಇಂದು ಕೌಟುಂಬಿಕ ವ್ಯವಸ್ಥೆ ಶಿಥಿಲಗೊಳ್ಳುತ್ತಿದೆ. ಎಲ್ಲವೂ ಲಾಭ-ನಷ್ಟದ ಲೆಕ್ಕಾಚಾರದಲ್ಲೇ ಸಾಗುತ್ತಿದೆ. ಮಕ್ಕಳಲ್ಲೂ ಅದೇ ಮನಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಸಂಸ್ಕಾರ, ಸಾಹಿತ್ಯಿಕ ಮನೋಭಾವ ಬೆಳೆಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಪ್ರತಿಪಾದಿಸಿದರು.
    ಡಿಜಿಟಲ್ ಹನಿ ಪರಿಣಾಮ: ಕಳೆದ ಎರಡು ದಶಕಗಳಿಂದೀಚೆಗೆ ಎಲ್ಲರ ತಲೆಯಲ್ಲೂ ಡಿಜಿಟಲ್ ಹನಿಗಳು ಆವರಿಸಿಕೊಂಡಿವೆ. ಹೀಗಾಗಿ ಸಾಮಾಜಿಕ ಜಾಲತಾಣ, ಮೊಬೈಲ್ ವ್ಯಾಮೋಹ ಹೆಚ್ಚುತ್ತಿದೆ. ಸಾಹಿತ್ಯದೆಡೆಗೆ ಆಸಕ್ತಿ ಕಡಿಮೆಯಾಗುತ್ತಿದೆ. ಅಳುವ ಮಕ್ಕಳನ್ನು ಸಮಾಧಾನಪಡಿಸಲು, ಮಕ್ಕಳಿಗೆ ಊಟ ಮಾಡಿಸಲೂ ಮೊಬೈಲ್ ಅನಿವಾರ್ಯ ಎನ್ನುವ ಪರಿಸ್ಥಿತಿಗೆ ಬಂದಿದ್ದೇವೆ. ಇದು ಅತ್ಯಂತ ಅಪಾಯಕಾರಿ ಸನ್ನಿವೇಶ. ಡಿಜಿಟಲೀಕರಣ ವ್ಯವಸ್ಥೆಯನ್ನು ಅವಶ್ಯಕತೆಗೆ ತಕ್ಕಷ್ಟು ಮಾತ್ರ ಬಳಕೆ ಮಾಡುವುದು ಒಳಿತು ಎಂದು ಸಾಹಿತಿ ಡಾ.ಮುರಳೀಧರ ಕಿರಣಕೆರೆ ಅಭಿಪ್ರಾಯ ವ್ಯಕ್ತಪಡಿಸಿದರು.
    ಶಿವಮೊಗ್ಗ ವಿಕಾಸ ವಿದ್ಯಾ ಸಮಿತಿ ಕಾರ್ಯದರ್ಶಿ ಎ.ಜೆ.ರಾಮಚಂದ್ರ, ವೆಂಕಟರಮಣ ಭಟ್ ಹಾಗೂ ವಿಶಾಲಾಕ್ಷಿ ವೆಂಕಟರಮಣ ಭಟ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ತೀರ್ಥಹಳ್ಳಿಯ ಆತ್ಮಿಕಾ ಭಟ್ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts