More

    ಜಿಲ್ಲೆಯಲ್ಲಿ ಹೆಚ್ಚಿದ ಎರಡನೇ ಅಲೆ ಭೀತಿ

    ಕಾರವಾರ: ಜಿಲ್ಲೆಯಲ್ಲಿ ಕಳೆದ ವರ್ಷದ ಕೋವಿಡ್ ಪರಿಸ್ಥಿತಿ ಮರುಕಳಿಸುತ್ತಿದೆ. ಭಾನುವಾರ 47 ಜನರಲ್ಲಿ ಸೋಂಕು ಪತ್ತೆಯಾಗಿದೆ.

    ಕಾರವಾರದಲ್ಲಿ 10, ಕುಮಟಾದಲ್ಲಿ 7, ಶಿರಸಿ, ಯಲ್ಲಾಪುರ, ಹಳಿಯಾಳದಲ್ಲಿ ತಲಾ 6, ಅಂಕೋಲಾದಲ್ಲಿ 5, ಹೊನ್ನಾವರ, ಮುಂಡಗೋಡಿನಲ್ಲಿ ತಲಾ 3 ಪ್ರಕರಣಗಳು ಪತ್ತೆಯಾಗಿವೆ. ಕಾರವಾರದ ಸರ್ಕಾರಿ ಮೆಡಿಕಲ್ ಕಾಲೇಜ್​ನ ಐವರು ವೈದ್ಯಕೀಯ ವಿದ್ಯಾರ್ಥಿಗಳಲ್ಲೂ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯ ವಿವಿಧೆಡೆ ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ, ಹೊರ ಊರುಗಳಿಂದ ಬರುವ ಕಾರ್ವಿುಕರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕ ಹೆಚ್ಚಿಸಲು ಕಾರಣವಾಗಿದೆ.

    21 ಜನ ತೀವ್ರ ನಿಗಾ: ಸದ್ಯ ಜಿಲ್ಲೆಯಲ್ಲಿ 231 ಸಕ್ರಿಯ ಪ್ರಕರಣಗಳಿವೆ. ವಿವಿಧ ಆಸ್ಪತ್ರೆಗಳಲ್ಲಿ 33 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ 21 ಜನರನ್ನು ಸರ್ಕಾರಿ ಮೆಡಿಕಲ್ ಕಾಲೇಜ್​ನ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಉಳಿದ 198 ಜನರು ತಮ್ಮ ಮನೆಗಳಲ್ಲೇ ಐಸೋಲೇಶನ್​ನಲ್ಲಿದ್ದಾರೆ.

    4800 ರೂ. ದಂಡ: ಒಂದೇ ದಿನ ನಗರದ ಸಂತೆ ಮಾರುಕಟ್ಟೆಯಲ್ಲಿ ಬುಧವಾರ ಮಾಸ್ಕ್ ಹಾಕದವರಿಂದ ದಂಡ ಆಕರಿಸಲಾಯಿತು. ನಗರಸಭೆ ಆರೋಗ್ಯ ವಿಭಾಗದ ಯಾಖೂಬ್ ಹಾಗೂ ಸಿಬ್ಬಂದಿ ಒಟ್ಟು 48 ಜನರಿಗೆ ತಲಾ 100 ರೂ. ದಂಡ ವಿಧಿಸಿ 4800 ರೂ. ಸಂಗ್ರಹಿಸಿದರು.

    ತಪ್ಪಿಸಿಕೊಂಡ ವ್ಯಾಪಾರಸ್ಥರು: ಮೀನು ಮಾರುಕಟ್ಟೆ ಹಾಗೂ ತರಕಾರಿ ಸಂತೆಯಲ್ಲಿ ವ್ಯಾಪಾರ ಮಾಡುವವರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಎಂದು ನಗರಸಭೆ ಪ್ರಚಾರ ಮಾಡಿತ್ತು. ಭಾನುವಾರದ ಸಂತೆಯಲ್ಲಿ ಓಡಾಡಿದ ನಗರಸಭೆ ಅಧಿಕಾರಿಗಳು ವಯಸ್ಸಾದಂತೆ ಕಂಡ ಹಲವು ವ್ಯಾಪಾರಸ್ಥರನ್ನು ಕರೆದು ಲಸಿಕೆ ಹಾಕಿಸಲು ಮುಂದಾದರು. ಆದರೆ, ಅಧಿಕಾರಿಗಳಿಂದ ಕೈಯ್ಯಿಂದ ತಪ್ಪಿಸಿಕೊಂಡು ಪರಾರಿಯಾದರು. ಹಲವರು ಆಧಾರ ಕಾರ್ಡ್ ತಂದಿಲ್ಲ ಎಂಬ ನೆಪ ಹೇಳಿದರು. ಮುಂದಿನ ವಾರ ಆಧಾರ ಕಾರ್ಡ್ ತನ್ನಿ ಇಲ್ಲವೇ ಲಸಿಕೆ ಹಾಕಿಸಿಕೊಂಡು ಬನ್ನಿ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

    ಖರೆ ಹೌದಾ ಮಾರಾಯಾ..?: ಕಳೆದ ಒಂದು ವರ್ಷದಿಂದ ಇದ್ದ ಪರಿಸ್ಥಿತಿ ಸುಧಾರಿಸಿ, ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದ ವ್ಯವಸ್ಥೆಗೆ ಮತ್ತೆ ಎರಡನೇ ಅಲೆಯ ಸುದ್ದಿ ಗೊಂದಲ ಹುಟ್ಟಿಸಿದೆ. ಸಹಜವಾಗಿ ಓಡಾಡಿಕೊಂಡಿದ್ದವರಿಗೆ ಸರ್ಕಾರದ ಹೊಸ ಲಾಕ್​ಡೌನ್ ನಿಯಮಾವಳಿಗಳು ಆತಂಕ ಮೂಡಿಸುತ್ತಿವೆ. ಹಲವರಿಗೆ ಕೋವಿಡ್ ಭಯಕ್ಕಿಂತ ಉದ್ಯೋಗ, ಆದಾಯ ಕಳೆದುಕೊಳ್ಳುವ ಭೀತಿಯೇ ಹೆಚ್ಚಿದೆ. ಜ್ವರ ಎಂದು ಆಸ್ಪತ್ರೆಗೆ ಹೋದರೆ ಕೋವಿಡ್ ಪರೀಕ್ಷೆ ಮಾಡಿಸಲಾಗುತ್ತದೆ. ಸೋಂಕು ಕಂಡು ಬಂದರೆ ಅವರ ಸಂಪರ್ಕಕ್ಕೆ ಬಂದವರ ಹುಡುಕಾಟ ಮತ್ತೆ ಶುರುವಾಗಿದೆ. ಸಂಪರ್ಕಕ್ಕೆ ಬಂದ ಹೆಚ್ಚಿನವರಲ್ಲಿ ಕರೊನಾ ಇದೆ ಎಂಬ ವರದಿ ಬರುತ್ತಿದೆ. ಆದರೆ, ಬಹುತೇಕರಲ್ಲಿ ಯಾವುದೇ ರೋಗ ಲಕ್ಷಣಗಳೇ ಇಲ್ಲದಿರುವುದು ಕಂಡುಬಂದಿದೆ. ‘ಈ ಕೋವಿಡ್ ಎನ್ನುವುದು ಖರೆ ಹೌದಾ ಮಾರಾಯಾ..?’ ಎಂಬ ಮೂಲ ಪ್ರಶ್ನೆಯನ್ನು ಹಲವರು ಎತ್ತಲಾರಂಭಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts