ಮಸ್ಕಿ: ತಾಲೂಕಿನಲ್ಲಿ ಹೆಚ್ಚಿನ ಜನರಲ್ಲಿ ಮದ್ರಾಸ್ ಐ ಸೋಂಕು ಕಾಣಿಸಿಕೊಳ್ಳುತ್ತಿದೆ. ಕಣ್ಣು ಕೆಂಪಗಾಗಿ ನೋವಾಗುವ ಈ ಕಾಯಿಲೆಗೆ ಕಂಜಿಕ್ಟಿವೈಟಿಸ್ ಎಂದು ಕರೆಯಲಾಗುತ್ತದೆ.
ಯುವಕರು ಹಾಗೂ ವಯಸ್ಕರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮಕ್ಕಳಿಗೆ ಬಂದರೆ ಹೇಗೆಂಬ ಚಿಂತೆ ಪಾಲಕರನ್ನು ಕಾಡುತ್ತಿದೆ. ಇದರಿಂದಾಗಿ ಶಾಲೆಗೆ ಮಕ್ಕಳನ್ನು ಕಳಿಸಲು ಕೆಲವು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಕಣ್ಣುಗಳು ಕೆಂಪಗಾಗಿ ತುರಿಕೆ ಹಾಗೂ ನೋವು ಕಾಣಿಸಿಕೊಳ್ಳುತ್ತದೆ. ಕಣ್ಣಿಂದ ಆಗಾಗ ನೀರು ಸೋರುವುದು, ಕೆಲವೊಮ್ಮೆ ದೃಷ್ಟಿ ಮಸುಕು ಆಗುವುದು ಆಗುತ್ತದೆ. ಕಣ್ಣುಗಳಲ್ಲಿ ಬಾಹು ಬಂದು ಮೈ-ಕೈ ನೋವು ಕಾಣಿಸಿಕೊಳ್ಳುತ್ತದೆ.
ಕಣ್ಣು ಬೇನೆ ಬಂದಿರುವವರು ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು. ಪದೇ ಪದೆ ಕಣ್ಣುಗಳನ್ನು ಮುಟ್ಟಿಕೊಳ್ಳಬಾರದು. ಟಾವೆಲ್, ಹಾಸಿಗೆ, ಹೊದಿಕೆ ಮತ್ತು ಕರವಸ್ತ್ರವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಸೋಂಕಿತರು ಇತರರಿಂದ ಅಂತರ ಕಾಯ್ದುಕೊಳ್ಳಬೇಕು.