More

    ಕಡಲ್ಕೊರೆತ ತಡೆ ಕಾಮಗಾರಿ ಕಳಪೆ

    ಅನ್ಸಾರ್ ಇನೋಳಿ ಉಳ್ಳಾಲ

    ಕಡಲ್ಕೊರೆತ ತಡೆಗಟ್ಟಲು ನಿರ್ಮಿಸಲಾದ ಶಾಶ್ವತ ತಡೆಗೋಡೆ ಕಾಮಗಾರಿ ಕಳಪೆ ಎಂಬ ಆರೋಪ ಎದುರಾಗಿದ್ದು, ಮಳೆಗಾಲದಲ್ಲಿ ಮತ್ತೆ ಹಿಂದಿನ ಪರಿಸ್ಥಿತಿಯೇ ಎದುರಾಗಬಹುದು ಎಂಬ ಆತಂಕ ಕಡಲತೀರದ ಜನರಲ್ಲಿ ವ್ಯಕ್ತವಾಗಿದೆ.

    ಪ್ರತಿ ಮಳೆಗಾಲದಲ್ಲೂ ಕಡಲ್ಕೊರೆತ ಸಂಭವಿಸಿದಾಗ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು, ಅಧಿಕಾರಿಗಳು ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಘೋಷಿಸುವುದು, ಆರೋಪ-ಪ್ರತ್ಯಾರೋಪ ಮಾಡುವುದು ಹಲವು ವರ್ಷಗಳಿಂದ ನಡೆಯುತ್ತ ಬಂದಿದೆ. ಕಡಲ್ಕೊರೆತ ತಡೆಗಟ್ಟುವ ನೆಪದಲ್ಲಿ ಸಮುದ್ರದ ದಂಡೆಗೆ ಶಾಶ್ವತ ತಡೆಗೋಡೆ ಹೆಸರಲ್ಲಿ ಕಲ್ಲುಗಳನ್ನು ತಂದು ಹಾಕುವುದು, ಮಳೆಗಾದಲ್ಲಿ ಅದು ಸಮುದ್ರ ಪಾಲಾಗುವಂಥ ಪ್ರಕರಣಗಳು ನಡೆಯುತ್ತಲೇ ಇತ್ತು.

    ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯ ಶಾಸಕರು ಎಡಿಬಿಯ 226 ಕೋಟಿ ರೂ. ಅನುದಾನದಲ್ಲಿ 2012ರಲ್ಲಿ ಬರ್ಮ್ಸ್ ಮತ್ತು ಬ್ರೇಕ್‌ವಾಟರ್ ಕಾಮಗಾರಿಗೆ ಚಾಲನೆ ನೀಡಿದ್ದರು. ಪ್ರಾಯೋಗಿಕ ಕಾಮಗಾರಿ ಮೊಗವೀರಪಟ್ಣದಲ್ಲಿ ನಡೆದ ಬಳಿಕ ಸಮುದ್ರದ ತಟಕ್ಕೆ ಟೆಟ್ರಾಪೋಡ್(ತ್ರಿಕೋನ ಮಾದರಿಯ ಸಿಮೆಂಟಿನಿಂದ ತಯಾರಿಸಿದ ಕಲ್ಲು) ಅಳವಡಿಸುವ ಕೆಲಸ ಕಳೆದ ವರ್ಷ ಮೊಗವೀರಪಟ್ಣ, ಹಿಲರಿಯಾ ನಗರ, ಕಡಪ್ಪುರ, ಮುಕಚ್ಚೇರಿ ಮುಂತಾದ ಕಡೆ ನಡೆದಿದೆ.

    ಕಳಪೆ ತಡೆಗೋಡೆ: ಆದರೆ ಟೆಟ್ರಾಪೋಡ್ ಅಳವಡಿಕೆ ಸಂದರ್ಭ ನಿರ್ಮಿಸಲಾಗಿರುವ ತಡೆಗೋಡೆ ಓರೆಕೋರೆಯಾಗಿದ್ದು, ಅಲ್ಲಲ್ಲಿ ಬಿರುಕು ಬಿದ್ದಿದೆ. ಇದರಿಂದ ಇಲ್ಲಿ ನಡೆದಿರುವ ಕಾಮಗಾರಿ ಕಳಪೆ ಎಂಬ ಆರೋಪ ಕೇಳಿ ಬಂದಿದೆ. ಕೆಲವು ಕಡೆ ತಡೆಗೋಡೆ ನಿರ್ಮಿಸುವ ಸಂದರ್ಭ ಪಕ್ಕದಲ್ಲಿರುವ ಮನೆಗಳವರ ಅನುಕೂಲಕ್ಕಾಗಿ ರಸ್ತೆ ನಿರ್ಮಿಸಲು ಮರಳು ತೆಗೆದರೂ ಅದನ್ನು ಭರ್ತಿ ಮಾಡದ ಕಾರಣ ಗುಂಡಿಗಳಾಗಿವೆ. ರಸ್ತೆಯೂ ಕೆಲವು ಕಡೆ ಅಗಲವಾಗಿದ್ದರೆ, ಇನ್ನು ಕೆಲವೆಡೆ ಅತ್ಯಂತ ಕಿರಿದಾಗಿದೆ. ತಡೆಗೋಡೆಯನ್ನು ನೆಲಕ್ಕಿಂತ 10 ಅಡಿ ಎತ್ತರಕ್ಕೆ ಕಟ್ಟಬೇಕಿತ್ತಾದರೂ ಏಳೆಂಟು ಅಡಿ ಮಾತ್ರ ಕಟ್ಟಲಾಗಿದೆ. ಇದರಿಂದ ಮುಂದಿನ ಮಳೆಗಾಲದಲ್ಲಿ ಗುಂಡಿ ಇರುವ ಜಾಗದಲ್ಲಿ ನೀರು ನಿಂತು ಇಲ್ಲಿರುವ ಮನೆಗಳಿಗೆ ಅಪಾಯ ಆಗುವ ಸಾಧ್ಯತೆ ಇದೆ. ದೊಡ್ಡ ತೆರೆಗಳು ಅಪ್ಪಳಿಸಿದರೂ ತಡೆಗೋಡೆಯೂ ಒಂದೆರೆಡು ವರ್ಷಗಳಲ್ಲೇ ಸಮುದ್ರ ಪಾಲಾಗುವ ಅಪಾಯವಿದೆ ಎನ್ನುವ ಆತಂಕ ಸ್ಥಳೀಯರದ್ದು. ಇದರಿಂದ ಕಡಲ್ಕೊರೆತ ಕಾಮಗಾರಿ ತಾತ್ಕಾಲಿಕವಾಗಿದ್ದರೂ, ಶಾಶ್ವತವಾದರೂ ಸಮಸ್ಯೆಗೆ ಪರಿಹಾರ ಸಿಗದು ಎಂಬ ಮಾತು ಕೇಳಿ ಬಂದಿದೆ.

    ಕಾಮಗಾರಿ ಮುಗಿದ ಬಳಿಕ ಯಂತ್ರಗಳನ್ನು ಸ್ಥಳಾಂತರಿಸಲೇಬೇಕು. ನಡೆದಾಡಲು ಜಾಗವೇ ಇಲ್ಲದ ಕಡೆ ಈಗ ರಸ್ತೆ ಆಗಿದೆ. ತಡೆಗೋಡೆ ಜೋಡಣೆ ಮಾಡಿರುವ ಕಡೆ ಬಿರುಕು ಬಿಟ್ಟಂತೆ ಕಾಣಬಹುದು. ಕಾಮಗಾರಿ ಸಮರ್ಪಕವಾಗಿಯೇ ನಡೆದಿದೆ. ಗುತ್ತಿಗೆದಾರರಿಗೆ ಒಂದು ವರ್ಷ ನಿರ್ವಹಣೆಯ ಜವಾಬ್ದಾರಿ ಇದೆ.
    ಗೋಪಾಲ್ ನಾಯ್ಕ
    ಎಡಿಬಿ ಯೋಜನಾಧಿಕಾರಿ

    ಕಾಮಗಾರಿ ಸಂದರ್ಭ ಕೈಕೋ ಮತ್ತು ಕಿಲೆರಿಯಾ ನಗರ ಮಧ್ಯೆ ತಾರತಮ್ಯ ಎಸಗಲಾಗಿದ್ದು, ರಸ್ತೆ ಒಂದೇ ರೀತಿ ವಿಸ್ತರಣೆ ಮಾಡಬೇಕಿತ್ತು. ಸಂಬಂಧಪಟ್ಟ ಇಲಾಖೆಯವರು ಕಾಮಗಾರಿ ಮುಗಿದಿಲ್ಲ ಎಂದು ಹೇಳಿದ್ದರೂ ಯಂತ್ರಗಳನ್ನು ಸ್ಥಳಾಂತರ ಮಾಡಿದ್ದಾರೆ. ಎಲ್ಲ ಲೋಪಗಳನ್ನು ಸರಿಪಡಿಸದಿದ್ದಲ್ಲಿ ಇಷ್ಟೊಂದು ಕೋಟಿ ರೂ. ಖರ್ಚು ಮಾಡಿದ ಕಾಮಗಾರಿ ನಿಷ್ಪ್ರಯೋಜಕ ಆಗಬಹುದು.
    ಹಸನಬ್ಬ ಕಡಪ್ಪರ (ಸಿಂಗಲ್ ಫೋಟೊ ಇದೆ)
    ಸದಸ್ಯ, ಸಯ್ಯಿದ್ ಮದನಿ ದರ್ಗಾ ಸಮಿತಿ

    ಗುಂಡಿ ಇರುವ ಕಡೆ ರಸ್ತೆಗೆ ಕಲ್ಲು, ಮರಳು ಹಾಕಿ ಎತ್ತರ ಮಾಡಬೇಕು. ಅಲ್ಲಲ್ಲಿ ಬಿರುಕು ಬಿಟ್ಟಿರುವ ತಡೆಗೋಡೆ ಸರಿಪಡಿಸಬೇಕು. ಇಲ್ಲದಿದ್ದರೆ ಮಳೆಗಾಲದಲ್ಲಿ ಇಲ್ಲಿನ ಮನೆಗಳಿಗೆ ಆಪತ್ತು ಎದುರಾಗಲಿದೆ. ಎಲ್ಲರೂ ಹೆದರಿಕೆಯಲ್ಲೇ ಇರಬೇಕಾಗುತ್ತದೆ.
    ಅಬ್ದುಲ್ ಸಮದ್ (ಸಿಂಗಲ್ ಫೋಟೊ ಇದೆ)
    ಕಡಪ್ಪರ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts