More

    ವಿದ್ಯುತ್ ಬೆಲೆ ಏರಿಕೆ, ಹಿಟ್ಟಿನ ಗಿರಣಿಗೂ ತಟ್ಟಿದ ಬಿಸಿ…!

    ವಿಜಯಪುರ: ವಿದ್ಯುತ್ ನಿಗಮಗಳು ಬೇಕಾಬಿಟ್ಟಿಯಾಗಿ ವಿದ್ಯುತ್ ಬೆಲೆ ಏರಿಸಿರುವ ಹಿನ್ನೆಲೆಯಲ್ಲಿ ಸಣ್ಣ ಕೈಗಾರಿಕೋಧ್ಯಮಗಳು, ವ್ಯಾಪಾರಸ್ಥರು ಅನಿವಾರ್ಯವಾಗಿ ತಮ್ಮ ಉತ್ಪನ್ನಗಳ ಬೆಲೆಗಳನ್ನು ಹೆಚ್ಚುವರಿ ಮಾಡುತ್ತಿದ್ದಾರೆ. ಈಗ ಇದೇ ದಾರಿಯಲ್ಲಿ ಗಿರಣಿ ಮಾಲೀಕರು ಚಿಂತನೆ ಮಾಡುತ್ತಿದ್ದು, ಆಗಸ್ಟ್ 1 ರಿಂದ ಗಿರಣಿಯಲ್ಲಿ ಹಿಟ್ಟು ಬೀಸುವ ದರವನ್ನು ಕೆಜಿಗೆ ಕನಿಷ್ಠ 2 ರೂ. ಏರಿಕೆ ಮಾಡಲು ನಿರ್ಧರಿಸಿದೆ.

    ವಿಶೇಷವೆಂದರೆ, ವಿಜಯಪುರ ಗಿರಣಿ ಮಾಲೀಕರ ಸಂಘವು 2020ರ ಡಿಸೆಂಬರ್ 1ರಿಂದ ದರವನ್ನು ಪರಿಷ್ಕೃತಗೊಳಿಸಿ, ಅದರಂತೆ ವ್ಯವಹಾರವನ್ನು ನಡೆಸುತ್ತಿದ್ದರು.

    ಆದರೆ ಈಗ ಗೃಹ ಬಳಕೆಯಂತೆ, ವಾಣಿಜ್ಯ ಬಳಕೆಗೂ ವಿದ್ಯುತ್ ದರವನ್ನು ಅವೈಜ್ಞಾನಿಕವಾಗಿ ಹೆಚ್ಚಿಸಿರುವುದರಿಂದ ಅನಿವಾರ್ಯವಾಗಿ ಈ ಹೊರೆಯನ್ನು ಗ್ರಾಹಕರ ಮೇಲೆ ಹಾಕಲು ನಿರ್ಧರಿಸಲಾಗಿದ್ದು, ಆ. 1 ರಿಂದ ಅನ್ವಯಿಸುವಂತೆ ಹೊಸ ಪರಿಷ್ಕತ ದರದ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸಂಘದ ಉಪಾಧ್ಯಕ್ಷ ಪಿ.ಎಂ. ಹಿರೇಮಠ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.

    ಈಗ ಒಂದು ಕೆಜಿ ಜೋಳ ಮತ್ತು ಗೋಧಿಯನ್ನು ಹಿಟ್ಟು ಮಾಡಿಸಲು 6 ರೂ., ಸಜ್ಜೆಗೆ 7 ರೂ., ರವಾ 6 ರೂ. ಅಕ್ಕಿ, ಬೆಳೆ, ಸಕ್ಕರೆಗೆ 10 ರೂ. ಇದೆ. ಸಾದಾ ಮೆಣಸಿನಕಾಯಿ ಕುಟ್ಟಲು 50 ರೂ., ಮಸಾಲೆ ಮೆಣಿಸಿನಕಾಯಿ ಕುಟ್ಟಲು 60 ರೂ. ಆಕರಿಸಲಾಗುತ್ತಿದೆ. ಮುಂದಿನ ಪರಿಷ್ಕೃತ ದರವು 6 ರೂ. ಇದ್ದದ್ದು 8 ರೂ. ಗೆ ಹಾಗೂ ಸಾದಾ ಮೆಣಸಿನಕಾಯಿ 50 ಇದ್ದದ್ದು 60 ರೂ.ಗೆ, ಮಸಾಲೆ ಮಿಶ್ರಿತ ಮೆಣಸಿನಕಾಯಿ ಕುಟ್ಟಲು 60 ರೂ. ಇದ್ದನ್ನು 70ಕ್ಕೆ ಏರಿಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಿದೆ.

    ವಿದ್ಯುತ್ ಬೆಲೆ ಏರಿಕೆಯಿಂದ ಗಿರಣಿ ಉದ್ಯಮ ನಡೆಸುವುದು ಕಷ್ಟವಾಗಿದೆ. ಅನಿವಾರ್ಯವಾಗಿ ಆಗಸ್ಟ್ 1 ರಿಂದ 2 ರೂ. ಹೆಚ್ಚಿಸಿದ್ದು, ಪರಿಷ್ಕೃತ ದರಪಟ್ಟಿಯನ್ನು ಪ್ರಿಂಟ್ ಮಾಡಿಸಲಾಗಿದೆ.
    ಪಿ.ಎಂ. ಹಿರೇಮಠ, ಉಪಾಧ್ಯಕ್ಷರು, ಗಿರಣಿ ಮಾಲೀಕರ ಸಂಘ, ವಿಜಯಪುರ
    ಕಳೆದ ಡಿಸೆಂಬರ್‌ನಲ್ಲಿ ಗಿರಣಿಯಲ್ಲಿ ಬೀಸುವ ದರವನ್ನು ಹೆಚ್ಚಿಸಲಾಗಿತ್ತು. ಈಗ ವಿದ್ಯುತ್ ದರ ಮಿತಿಮೀರಿ ಹೆಚ್ಚಿಸಿದ ಪರಿಣಾಮ ಮತ್ತೆ ಏರಿಸಿದರೆ, ಗ್ರಾಹಕರಿಗೆ ಅದೊಂದು ಹೊರೆಯಾಗುತ್ತದೆ. ಹಿಟ್ಟು ಬೀಸುವುದು ಎಲ್ಲರಿಗೂ ಅನಿವಾರ್ಯ ಆಗಿರುವುದರಿಂದ ಏನೂ ಮಾಡಲು ಬರಲ್ಲ.
    ವಾಣಿ ಕುಲಕರ್ಣಿ, ಗೃಹಿಣಿ, ಸಾಯಿಪಾರ್ಕ್, ವಿಜಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts