More

    ರಾಮಮಂದಿರ ನಿರ್ಮಾಣ ಹೋರಾಟದ ಫಲ: ಪೇಜಾವರಶ್ರೀ

    ಮೈಸೂರು: ಬಿಎಸ್‌ಎಸ್ ಟ್ರಸ್ಟ್ ವತಿಯಿಂದ ಕೃಷ್ಣಮೂರ್ತಿಪುರಂನ ಬಿಎಸ್‌ಎಸ್ ವಿದ್ಯೋದಯ ಶಾಲಾ ಆವರಣದಲ್ಲಿ ಆಯೋಜಿಸಿರುವ 7 ದಿನಗಳ ಭಗಿನಿ ರಾಮೋತ್ಸವ ಮತ್ತು ಸಂಗೀತ ಹಬ್ಬಕ್ಕೆ ಭಾನುವಾರ ಸಂಜೆ ಚಾಲನೆ ದೊರೆಯಿತು.


    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸುದೀರ್ಘ ಹೋರಾಟದ ಫಲವಾಗಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದ್ದು, ಬಾಲರಾಮನ ಪ್ರತಿಷ್ಠಾಪನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿದೆ. ಹಿಂದುಗಳ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಇದು ರಾಮಭಕ್ತರ ಸಂಭ್ರಮ, ಸಡಗರಕ್ಕೆ ಕಾರಣವಾಗಿದೆ. ನಿತ್ಯ ಸಹಸ್ರಾರು ಜನರು ಶ್ರೀರಾಮ ದರ್ಶನ ಪಡೆಯುತ್ತಿದ್ದಾರೆ ಎಂದು ಹೇಳಿದರು.


    ಭಗಿನಿ ಸೇವಾ ಸಮಾಜದ ಆವರಣದಲ್ಲಿರುವ ಬಿಎಸ್‌ಎಸ್ ವಿದ್ಯೋದಯ ಶಾಲೆಯನ್ನು ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ. ಇಲ್ಲಿದ್ದ ಹಳೇ ಕಟ್ಟಡವನ್ನು ತೆರವುಗೊಳಿಸಿ ಹೊಸದಾಗಿ ಭವ್ಯವಾದ ಕಟ್ಟಡವಾಗಿ ನಿರ್ಮಿಸಲಾಗಿದೆ. ಪೂರ್ಣಪ್ರಮಾಣದಲ್ಲಿ ದಾನಿಗಳ ಹಣದಿಂದಲೇ ಇದನ್ನು ಕಟ್ಟಲಾಗಿದೆ. ಇದರಿಂದಾಗಿ ಇಲ್ಲಿ ಕಲಿಯುವ ಮಕ್ಕಳಿಗೆ, ಅವರ ಪಾಲಕರಿಗೆ ಹೊರೆಯಾಗುವುದಿಲ್ಲ ಎಂದರು.


    ವಿಜಯ ವಿಠಲ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ ಆರ್.ವಾಸುದೇವ್ ಭಟ್, ಬಿಎಸ್‌ಎಸ್ ಟ್ರಸ್ಟ್‌ನ ಪದಾಧಿಕಾರಿಗಳಾದ ಗುರುರಾಜ್, ಸ್ವರ್ಣ ಕುಮಾರ್, ಮುರಳಿ ಇತರರು ಇದ್ದರು.


    ಬಳಿಕ ವಿದ್ವಾನ್ ಡಾ.ಎಂ. ಮೈಸೂರು ಮಂಜುನಾಥ್ ಮತ್ತು ಮೈಸೂರು ನಾಗರಾಜ್ ಸಹೋದರರಿಂದ ವಯೋಲಿನ್ ವಾದನ ನಡೆಯಿತು. ಮೃದಂಗದಲ್ಲಿ ಜಯಚಂದ್ರ ರಾವ್, ತಬಲದಲ್ಲಿ ರೂಪಕ್ ಸಾಥ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts