More

    ತ್ರಿಶಂಕು ಸ್ಥಿತಿಯಲ್ಲಿ ಪದವಿ ಫಲಿತಾಂಶ

    ಬೆಳಗಾವಿ: ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ, ಚಿನ್ನದ ಪದಕಕ್ಕೆ ಭಾಜನರಾಗಿದ್ದ ಸಾವಿರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪದಕದ ಬದಲು ಹಣ ನೀಡಿ ವಿವಾದಕ್ಕೆ ಗುರಿಯಾಗಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು) ಇದೀಗ ಮತ್ತೆ ಸುದ್ದಿಯಲ್ಲಿದೆ.

    ಕೋವಿಡ್-19 ವಿಷಮ ಸ್ಥಿತಿಯಲ್ಲಿ ಉದ್ಯೋಗಾವಕಾಶ ಕ್ಷೀಣಿಸುತ್ತಿವೆ. ಆಗೊಮ್ಮೆ-ಈಗೊಮ್ಮೆ ದೊರೆಯುವ ಅವಕಾಶವನ್ನೂ ಸಹ ವಿದ್ಯಾರ್ಥಿಗಳಿಗೆ ಪದವಿ ನೀಡಿದ ವಿಶ್ವವಿದ್ಯಾಲಯವೇ ತನ್ನ ದ್ವಂದ್ವ ನಡೆಯಿಂದ ಕಿತ್ತು ಹಾಕುತ್ತಿದೆ. 2019-2020ನೇ ಸಾಲಿನಲ್ಲಿ ಎಂಬಿಎ ಪದವಿಧರರ ಮೂರನೇ ಸೆಮಿಸ್ಟರ್‌ನ ಫಲಿತಾಂಶ ಹಾಗೂ ಬಿ.ಎಡ್ ಪೂರ್ಣಗೊಳಿಸಿದ ಪ್ರಶಿಕ್ಷಣಾರ್ಥಿಗಳು ಸೇರಿ ಒಟ್ಟು 800ಕ್ಕೂ ಅಧಿಕ ವಿದ್ಯಾರ್ಥಿಗಳ ಫಲಿತಾಂಶ ಹೊರಡಿಸದೇ ಅವರ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ.

    ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಡಿಯ ವಿವಿಧ ಮಹಾವಿದ್ಯಾಲಯಗಳಲ್ಲಿ 2019-2020ನೇ ಸಾಲಿನಲ್ಲಿ ಪದವಿ ವ್ಯಾಸಂಗ ಪೂರ್ಣಗೊಳಿಸಿದ 850 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಉದ್ಯೋಗಾವಕಾಶದಿಂದ ವಂಚಿತರಾಗುತ್ತಿದ್ದಾರೆ. ಪದವಿ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ವಿತರಿಸಿರುವ ವಿಶ್ವವಿದ್ಯಾಲಯವು ಅವರ ಮೂರನೇ ಸೆಮಿಸ್ಟರ್‌ನ ಫಲಿತಾಂಶ ನೀಡದೆ ಉನ್ನತ ಶಿಕ್ಷಣ ಇಲಾಖೆಯತ್ತ ಬೆರಳು ತೋರುತ್ತಿದೆ.

    ಇಲಾಖೆ ನಿರ್ದೇಶನ ನೀಡಿಲ್ವಂತೆ!: ಕೋವಿಡ್-19 ನಿಯಂತ್ರಣಕ್ಕಾಗಿ ಈ ಬಾರಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಅವರ ಈ ಹಿಂದಿನ ಶೈಕ್ಷಣಿಕ ಚಟುವಟಿಕೆಗಳಲ್ಲಿನ ಸಾಧನೆ ಪರಿಗಣಿಸಿ ಅಂಕ ನೀಡಿ ಮುಂದಿನ ಹಂತಕ್ಕೆ ಉತ್ತೀರ್ಣಗೊಳಿಸಲು ಸರ್ಕಾರವೇ ನಿರ್ದೇಶನ ನೀಡಿದೆ. ಅದರಂತೆ ಈಗಾಗಲೇ ರಾಜ್ಯದ ಎಲ್ಲ ವಿವಿಗಳು ತಮ್ಮ ವಿದ್ಯಾರ್ಥಿಗಳಿಗೆ ನಿಯಮಾವಳಿಯಂತೆ ಅಂಕ ನೀಡಿ ಆಯಾ ಸೆಮಿಸ್ಟರ್‌ನ ಅಂಕಪಟ್ಟಿ ನೀಡಿದೆ.ಆದರೆ, ಎಂಬಿಎ ವಿದ್ಯಾರ್ಥಿಗಳಿಗೆ ಮೂರನೇ ಸೆಮಿಸ್ಟರ್‌ನ ಅಂಕಪಟ್ಟಿ ವಿತರಿಸುವಂತೆ ಆರ್‌ಸಿಯುಗೆ ಶಿಕ್ಷಣ ಇಲಾಖೆ ನಿರ್ದೇಶನ ನೀಡಿಲ್ಲ ಎಂದು ಪರೀಕ್ಷಾ ವಿಭಾಗದ ಸಿಬ್ಬಂದಿ ಹೇಳುತ್ತಿದ್ದಾರೆ.

    ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗುತ್ತಿದೆ. ಪದವಿ ವ್ಯಾಸಂಗ ಪೂರ್ಣಗೊಂಡು ಮೂರು ತಿಂಗಳಾದರೂ ಮೂರನೇ ಸೆಮಿಸ್ಟರ್‌ನ ಫಲಿತಾಂಶ ಬಿಡುಗಡೆ ಮಾಡದ ಆರ್‌ಸಿಯು ಪರೀಕ್ಷಾ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿದರೆ, ‘ಸುಮಾರು 850 ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವುದು ನಿಜ. ಆದರೆ, 3ನೇ ಸೆಮಿಸ್ಟರ್‌ನ ಫಲಿತಾಂಶ ನೀಡುವ ಬಗ್ಗೆ ಹಾಗೂ ವಿದ್ಯಾರ್ಥಿಗಳಿಗೆ ಅಂಕ ಹಾಗೂ ಗ್ರೇಡ್ ನೀಡುವ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯಿಂದ ಸ್ಪಷ್ಟ ನಿರ್ದೇಶನ ಬಂದಿಲ್ಲ. ಇಲಾಖೆ ನಿದೇರ್ಶನವಿಲ್ಲದೆ ಫಲಿತಾಂಶ ಹೇಗೆ ನೀಡಲು ಸಾಧ್ಯ?‘ ಎಂದು ಪ್ರತಿಕ್ರಿಯಿಸಿದ್ದಾರೆ.

    ಕರೊನಾ ಹಾವಳಿಯಿಂದ ಪರೀಕ್ಷೆಯನ್ನೇ ನಡೆಸದ ಕಾರಣಕ್ಕಾಗಿ ಫಲಿತಾಂಶದಲ್ಲಿ ಗೊಂದಲ ಉಂಟಾಗಿದೆ. ಈ ಬಗ್ಗೆ ಸಂಬಂಧಪಟ್ಟ ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ಮಾಹಿತಿ ಪಡೆದು ಕೂಡಲೇ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು.
    | ಡಾ. ಸಿ.ಎನ್.ಅಶ್ವತ್ಥನಾರಾಯಾಣ ಉನ್ನತ ಶಿಕ್ಷಣ ಸಚಿವ

    ಎಂಬಿಎ 3ನೇ ಸೆಮಿಸ್ಟರ್ ಹಾಗೂ ಬಿ.ಇಡಿ ಪ್ರಶಿಕ್ಷಣಾರ್ಥಿ ಗಳಿಗೆ ಪರೀಕ್ಷೆ ನಡೆಸಿಯೇ ಫಲಿತಾಂಶ ನೀಡಬೇಕೆ? ಇಲ್ಲವೇ? ಯುಜಿಸಿ ನೀಡಿರುವ ಸಲಹೆಯಂತೆ ನೇರವಾಗಿ ಪ್ರಮೋಟ್ ಮಾಡಬೇಕೋ ಎಂಬ ಬಗ್ಗೆ ಸ್ಪಷ್ಟತೆ ನೀಡುವಂತೆ ಸರ್ಕಾರಕ್ಕೆ ಈಗಾಗಲೇ 5 ಬಾರಿ ಪತ್ರ ಬರೆಯಲಾಗಿದೆ. ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರ್ಕಾರಿ ಆದೇಶದ ನಂತರ ಫಲಿತಾಂಶ ನೀಡಲಾಗುವುದು.
    | ಡಾ. ಎಸ್.ಎಂ. ಹುರಕಡ್ಲಿ. ಮೌಲ್ಯಮಾಪನ ಕುಲಸಚಿವ, ಆರ್‌ಸಿಯು, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts