More

    ಬಡತನದಲ್ಲಿ ಅರಳಿದ ಗ್ರಾಮೀಣ ಪ್ರತಿಭೆ ಕವಿತಾ

    ಕಾನಹೊಸಹಳ್ಳಿ: ಗ್ರಾಮೀಣ ಪ್ರದೇಶದ ಬಡ ರೈತನ ಮಗಳು ಕವಿತಾ ಬಿ.ವಿ. ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 600ಕ್ಕೆ 596 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದು, ಹುಟ್ಟೂರು ಚೌಡಾಪುರದಲ್ಲಿ ಸಂಭ್ರಮ ಮನೆ ಮಾಡಿದೆ.

    ಕೊಟ್ಟೂರಿನ ಇಂದು ಪಪೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕವಿತಾ, ರೈತ ವೀರಬಸಪ್ಪ ಹಾಗೂ ಟೈಲರಿಂಗ್ ವೃತ್ತಿ ಮಾಡುವ ವಿಶಾಲಾಕ್ಷಿ ದಂಪತಿ ಪುತ್ರಿ. ದ್ವಿತೀಯ ಪಿಯುಸಿಯಲ್ಲಿ ಮೊದಲ ಸ್ಥಾನಗಳಿಸುವ ಮೂಲಕ ಬಡತನದಲ್ಲಿ ಅರಳಿದ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಬುಧವಾರ ಬೆಳಗ್ಗೆ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಚೌಡಾಪುರದ ಕವಿತಾ ಹೆಸರು ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿದ್ದರಿಂದ ಗ್ರಾಮದ ಮುಖಂಡರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಸಂಭ್ರಮಿಸಿದರು. ಅಲ್ಲದೆ ಕವಿತಾ ನಮ್ಮ ಊರಿನ ಹೆಮ್ಮೆ ಎಂಬ ಶುಭಾಶಯ ಕೋರುವ ಬ್ಯಾನರ್ ಅಳವಡಿಸಿ ಅಭಿಮಾನ ಮೆರೆದಿದ್ದಾರೆ. ಅಲ್ಲದೆ, ಕವಿತಾ ಇಂದು ಕಾಲೇಜಿನಿಂದ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಅದ್ದೂರಿ ಮೆರವಣಿಗೆ ಮಾಡಿ ಸನ್ಮಾನಿಸಿ ಹರ್ಷ ವ್ಯಕ್ತಪಡಿಸಿದರು.

    ಮುಂದಿನ ವಿದ್ಯಾಭ್ಯಾಸದ್ದೇ ಚಿಂತೆ

    ವೀರಬಸಪ್ಪ, ವಿಶಾಲಕ್ಷಿ ದಂಪತಿಯು ಬಡತನ ನಡುವೆ ಜೀವನ ಮಾಡುವ ಸಣ್ಣ ಕುಟುಂಬ ಅಷ್ಟೇ. ತಂದೆ ಓದಿಲ್ಲ, ತಾಯಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸರ್ಕಾರಿ ಸಾಗುವಳಿ 2 ಎಕರೆ ಭೂಮಿ ಇದ್ದು, ತಂದೆ ಕೃಷಿ ಮಾಡುತ್ತಿದ್ದಾರೆ. ತಾಯಿ ಟೈಲರಿಂಗ್, ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಮಗಳು ಕವಿತಾ ಮುಂದಿನ ವಿದ್ಯಾಭ್ಯಾಸದ್ದೇ ಚಿಂತೆಯಾಗಿದೆ.

    ನಿತ್ಯ 50 ಕಿಮೀ ಸಂಚಾರ

    ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಗಳಿಸಿರುವ ವಿದ್ಯಾರ್ಥಿನಿ ಕವಿತಾ ಹಾಗೂ ವಿದ್ಯಾರ್ಥಿಗಳು ಚೌಡಾಪುರದಿಂದ ಕೊಟ್ಟೂರಿನ ಕಾಲೇಜಿಗೆ ನಿತ್ಯ 25 ಕಿಮೀ ಬಸ್‌ನಲ್ಲಿ ಪ್ರಯಾಣಿಸಿ ಶಿಕ್ಷಣ ಕಲಿತಿದ್ದಾರೆ. ಬೆಳಗ್ಗೆ 7 ಗಂಟೆಗೆ ಬರುವ ಬಸ್‌ನಲ್ಲೇ ಕೊಟ್ಟೂರಿನ ಇಂದು ಕಾಲೇಜಿಗೆ ಹೋಗಿ ಮತ್ತೆ ಸಂಜೆ ವಾಪಸ್ ಬರಬೇಕು. ಒಟ್ಟಾರೆ ನಿತ್ಯ 50 ಕಿಮೀ ಸಂಚರಿಸಿ ಗ್ರಾಮದ ಪ್ರತಿಭೆ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದು ರಾಜ್ಯಮಟ್ಟದಲ್ಲಿ ನಮ್ಮೂರಿನ ಹೆಸರು ಮಿಂಚುವಂತೆ ಮಾಡಿರುವುದು ಸಂತಸ ತಂದಿದೆ ಎನ್ನುತ್ತಾರೆ ಗ್ರಾಮಸ್ಥರು.

    ಕಲಾವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಬಂದಿರುವುದಕ್ಕೆ ಸಂತಸವಾಗಿದೆ. ಹೆತ್ತವರು ಕೂಲಿ ಮಾಡಿ ನನ್ನನ್ನು ಓದಿಸಿದ್ದಾರೆ. ನಾನು ಕಾಲೇಜಿನ ಉಪನ್ಯಾಸಕರ ಪಾಠ ಕೇಳುವದಲ್ಲದೇ ನಂತರ ಅವರೊಂದಿಗೆ ವಿಷಯಾಧಾರಿತವಾಗಿ ಚರ್ಚೆ ಮತ್ತು ನಿರಂತರ ಅಧ್ಯಯದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ನಮ್ಮೂರಿನ ಜನರು ಅದ್ದೂರಿ ಮೆರವಣಿಗೆ ಮಾಡಿ ಗೌರವಿಸಿದ್ದು, ಅವಿಸ್ಮರಣೀಯ ಕ್ಷಣ.

    | ಕವಿತಾ ಬಿ.ವಿ. ವಿದ್ಯಾರ್ಥಿನಿ, ಚೌಡಾಪುರ

    ನನಗೆ ಗಂಡುಮಕ್ಕಳಿಲ್ಲ. ಇಬ್ಬರು ಹೆಣ್ಣು ಮಕ್ಕಳು. ಕವಿತಾ ಹಿರಿಮಗಳು. ಎರಡು ಎಕರೆ ಸಾಗುವಳಿ ಭೂಮಿಯಲ್ಲಿ ಕೃಷಿ, ಹೆಂಡತಿ ಟೈಲರಿಂಗ್ ಮಾಡಿ ಮಗಳನ್ನು ಓದಿಸಿದ್ದೇವೆ. ಮೊದಲ ಸ್ಥಾನ ಪಡೆದಿರುವುದು ಖುಷಿಯಾಗಿದೆ. ಮುಂದಿನ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಕಾಡುತ್ತಿದೆ.
    | ವೀರಬಸಪ್ಪ ಕವಿತಾ ತಂದೆ, ಚೌಡಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts