More

    ಮರುನಿರ್ಮಿತ ಬಸ್ ನಿಲ್ದಾಣ ನಿರುಪಯುಕ್ತ

    ಶಿಗ್ಗಾಂವಿ: ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಿಸಿರುವ ಹಳೇ ಬಸ್ ನಿಲ್ದಾಣ ಪ್ರಯಾಣಿಕರ ಬಳಕೆಗಿಲ್ಲದೆ ನಿರುಪಯುಕ್ತವಾಗಿದೆ.

    ಮೊದಲಿದ್ದ ಹಳೆಯ ಕಟ್ಟಡ ತೆರವುಗೊಳಿಸಿ, ಅಂದಾಜು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ವಾಣಿಜ್ಯ ಮಳಿಗೆಗಳೊಂದಿಗೆ ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಉದ್ಘಾಟನೆಗೊಂಡಿದೆ. ಆದರೆ, ಇದುವರೆಗೂ ಬಸ್ ನಿಲ್ದಾಣದ ಒಳಗೆ ಬಸ್ ಹೋಗಿಲ್ಲ!

    ಪ್ರತಿದಿನ ಸವಣೂರ, ಹುಲಗೂರು, ತಡಸ, ಕುಂದಗೋಳ, ಹಾನಗಲ್ಲ ಸೇರಿದಂತೆ ಹತ್ತಾರು ಹಳ್ಳಿಗಳ ಸಾವಿರಾರು ಜನ ತಮ್ಮ ನಿತ್ಯ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ, ಬಸ್‌ಗಳು ನವೀಕರಣಗೊಂಡ ಬಸ್ ನಿಲ್ದಾಣಕ್ಕೆ ಬಾರದೇ ಬೈಪಾಸ್ ಮಾರ್ಗಗಳ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹೊಸ ಬಸ್ ನಿಲ್ದಾಣ ತಲುಪುತ್ತವೆ. ಹೀಗಾಗಿ, ಗ್ರಾಮೀಣ ಪ್ರದೇಶಗಳಿಂದ ಬಂದ ಜನರು ತಮ್ಮ ಕೆಲಸ ಕಾರ್ಯ ಮುಗಿಸಿಕೊಂಡು ಬಸ್ ಹತ್ತಲು ಹೊಸ ಬಸ್ ನಿಲ್ದಾಣದತ್ತ ಹೋಗುವುದಿಲ್ಲ. ಎಲ್ಲೆಂದರಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಖಾಸಗಿ ವಾಹನಗಳನ್ನು ಹೆಚ್ಚು ಅವಲಂಬಿಸುವಂತಾಗಿದೆ.

    ಗ್ರಾಮೀಣ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸದ್ಯ ಹೊಸ ಬಸ್ ನಿಲ್ದಾಣದ ಮೂಲಕ ಹಳ್ಳಿಗಳಿಗೆ ಹೊರಡುವ ಬಸ್‌ಗಳನ್ನು ನವೀಕರಣಗೊಂಡಿರುವ ಈ ಹಳೇ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ. ಕೂಡಲೇ ಸಾರಿಗೆ ಸಂಸ್ಥೆ ಅಧಿಕಾರಿಗಳು ಗ್ರಾಮೀಣ ಪ್ರದೇಶದ ಪ್ರಯಾಣಿಕರ ಹಿತದೃಷ್ಟಿಯಿಂದ ಈ ಬಸ್ ನಿಲ್ದಾಣಕ್ಕೆ ಗ್ರಾಮೀಣ ಬಸ್‌ಗಳ ಸೇವೆ ಸ್ಥಳಾಂತರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

    ನಿಲ್ದಾಣದಲ್ಲಿ ಖಾಸಗಿ ವಾಹನಗಳ ದರ್ಬಾರ್: ನಿಲ್ದಾಣದ ಪ್ರವೇಶ ದ್ವಾರದಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ ಎನ್ನುವ ನಾಮಫಲಕವಿದೆ. ಆದರೂ, ಖಾಸಗಿ ವಾಹನಗಳನ್ನು ಯಾವುದೇ ಭಯವಿಲ್ಲದೆ ನಿಲ್ದಾಣದ ಆವರಣದಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ನಿಲುಗಡೆ ಮಾಡಲಾಗುತ್ತಿದೆ. ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ನಿರ್ವಾಹಕ ಅಧಿಕಾರಿಗೆ ಪ್ರತಿದಿನವೂ ನಿಂತಿರುವ ಖಾಸಗಿ ವಾಹನಗಳನ್ನು ತೆರವುಗೊಳಿಸುವುದೇ ನಿತ್ಯದ ಕಾಯಕವಾಗಿದೆ.

    ಪಟ್ಟಣದಿಂದ ಹಳ್ಳಿಗಳಿಗೆ ಹೋಗುವ ಎಲ್ಲ ಬಸ್‌ಗಳಿಗೂ ಹಳೇ ಬಸ್ ನಿಲ್ದಾಣ ಒಳ ಪ್ರವೇಶಿಸಿಸಲು ಎಲ್ಲ ಚಾಲಕರು ಮತ್ತು ನಿರ್ವಾಹಕರಿಗೆ ತಿಳಿಸಲಾಗಿದೆ. ನಿರ್ವಾಹಕರ ಟ್ರಿಪ್ ಚೀಟಿಯಲ್ಲಿ ಕಡ್ಡಾಯವಾಗಿ ನಿಲ್ದಾಣದ ಒಳ ಪ್ರವೇಶಿಸಲು ಬರೆದು ಕಳುಹಿಸಲಾಗುತ್ತಿದೆ. ಈಗಾಗಲೇ ಅಲ್ಲಿ ಕಾರ್ಯ ನಿರ್ವಹಿಸಲು ಒಬ್ಬ ನಿರ್ವಹಣಾ ಅಧಿಕಾರಿ ನೇಮಿಸಲಾಗಿದೆ.
    I ಕೆ. ಶೇಖರನಾಯಕ, ಸವಣೂರು ಉಪವಿಭಾಗೀಯ ನಿಲ್ದಾಣ ಅಧಿಕಾರಿ

    ಗ್ರಾಮೀಣ ಜನರ ಹಿತದೃಷ್ಟಿಯಿಂದ ಕ್ಷೇತ್ರದ ಶಾಸಕರು ಕೋಟ್ಯಂತರ ರೂಪಾಯಿ ಅನುದಾನದೊಂದಿಗೆ ಈ ಬಸ್ ನಿಲ್ದಾಣವನ್ನು ನವೀಕರಿಸಿದ್ದಾರೆ. ಸಾರಿಗೆ ಸಂಸ್ಥೆ ಅಧಿಕಾರಿಗಳು ಬಸ್ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಹೊಸ ಬಸ್ ನಿಲ್ದಾಣದಿಂದ ಹೊರಡುವ ಎಲ್ಲ ಬಸ್‌ಗಳಿಗೂ ಹಳೇ ಬಸ್ ನಿಲ್ದಾಣ ಒಳಪ್ರವೇಶಿಸಿ ಹೋಗಲು ಕಡ್ಡಾಯವಾಗಿ ಸೂಚನೆ ನೀಡಬೇಕು.
    I ಶಿವಾನಂದ ಮ್ಯಾಗೇರಿ, ವಾಕರಸಾ ಸಂಸ್ಥೆಯ ಮಾಜಿ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts