More

    ಧನ್ವಂತರಿ: ಶುದ್ಧ ಆಹಾರದಿಂದ ಬುದ್ಧಿಯ ಪರಿಶುದ್ಧತೆ…

    ಧನ್ವಂತರಿ: ಶುದ್ಧ ಆಹಾರದಿಂದ ಬುದ್ಧಿಯ ಪರಿಶುದ್ಧತೆ...ಶರೀರವು ಪ್ರತಿನಿತ್ಯ ಎರಡು ವಿಚಾರಗಳನ್ನಷ್ಟೇ ಎದುರಿಸಬೇಕಾಗುವುದು! ಸೇವಿಸುವ ಆಹಾರ ಹಾಗೂ ಜ್ಞಾನೇಂದ್ರಿಯಗಳಿಗೆ ಸಂಬಂಧಿಸಿದ ವಿಷಯ. ಆಹಾರದ ಬಗ್ಗೆ ಗಮನ ನೀಡಲೇಬೇಕು ಎನ್ನುವುದು ಇದಕ್ಕಾಗಿಯೇ. ಆಹಾರಕ್ಕೆ ಅಷ್ಟೊಂದು ಮಹತ್ವವಿದೆ. ಮಾತ್ರವಲ್ಲ, ಆಹಾರವು ಮನಸ್ಸನ್ನು ಬೇಕಾದೆಡೆಗೆ ಸೆಳೆಯಬಲ್ಲದು. ಶುದ್ಧ ಆಹಾರದಿಂದ ಬುದ್ಧಿಯ ಪರಿಶುದ್ಧತೆ, ಶುದ್ಧ ಬುದ್ಧಿಯಿಂದ ಜ್ಞಾಪಕಶಕ್ತಿಯ ಪ್ರಾಪ್ತಿ ಎಂಬ ಉಲ್ಲೇಖ ಛಾಂದೋಗ್ಯ ಉಪನಿಷತ್​ನಲ್ಲಿದೆ. ಶುದ್ಧ ಆಹಾರದಿಂದ ಶುದ್ಧ ಮನಸ್ಸು ಎಂಬುದು ಎಂಥ ಮೇರುಚಿಂತನೆ! ಅಂದಮೇಲೆ ವ್ಯಕ್ತಿತ್ವದ ನಿರ್ವಣದಲ್ಲಿ ಆಹಾರದ ಪಾತ್ರವಿದೆ ಎಂದಾಯಿತು. ಅದೇ ಛಾಂದೋಗ್ಯ ಉಪನಿಷತ್ ಇದನ್ನು ಮತ್ತೂ ವಿಸ್ತಾರಗೊಳಿಸುತ್ತದೆ. ನಾವು ಸ್ವೀಕರಿಸುವ ಆಹಾರವು ಮೂರು ರೀತಿಯಲ್ಲಿ ವಿಭಜನೆಗೊಳ್ಳುತ್ತದೆ. ಜೀರ್ಣವಾಗಿ ಹೀರಲ್ಪಡದ ಘನಭಾಗ ಮಲವಾಗಿ ರೂಪಾಂತರಗೊಳ್ಳುತ್ತದೆ. ಪಚನವಾಗಿ ದೇಹದೊಳಕ್ಕೆ ಹೀರಲ್ಪಟ್ಟ ಆಹಾರಾಂಶವು ಧಾತುಗಳನ್ನು ಪೋಷಿಸುತ್ತದೆ. ಆಹಾರದ ಸಾರಭಾಗದಿಂದ ಮನಸ್ಸು ಉಂಟಾಗುತ್ತದೆ! ಈ ಸಾರರೂಪವೇ ಮನಸ್ಸಿನ ಸತ್ತ್ವ, ರಜ, ತಮ ಅಂಶಗಳು. ಇದರಿಂದಾಗಿ ಮನುಷ್ಯರ ಆಲೋಚನೆ ಹಾಗೂ ನಡತೆಗಳು ಸೇವಿಸುವ ಆಹಾರವನ್ನು ನೇರವಾಗಿ ಅವಲಂಬಿಸಿವೆ. ಮನಸ್ಸಿನಲ್ಲಿ ಸತ್ತ್ವಗುಣ ಹೆಚ್ಚಿಸುವ ಆಹಾರಕ್ಕೆ ಸಾತ್ವಿಕ ಆಹಾರ ಎನ್ನುತ್ತೇವೆ. ರಜೋಗುಣದಿಂದ ಕೂಡಿದ ಆಹಾರವು ರಾಜಸಿಕ ಹಾಗೂ ತಮೋಗುಣದಿಂದ ಭೂಯಿಷ್ಟವಾಗಿದ್ದರೆ ತಾಮಸಿಕ ಆಹಾರವೆಂದು ಪರಿಗಣಿಸಲ್ಪಡುತ್ತದೆ.

    ಆಯುರ್ವೇದದ ಚರಕಸಂಹಿತೆಯಲ್ಲಿ ಈ ಕುರಿತಾದ ನುಡಿಗಳು ಗಮನ ಸೆಳೆಯುತ್ತವೆ. ಮನಸ್ಸು ಸಂತೋಷದಿಂದ ಇದ್ದಾಗ ಸೇವಿಸುವ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ಚಿಂತೆಯಿದ್ದಾಗ, ಬೇಸರವಾದಾಗ, ಭಯವಿದ್ದರೆ, ಕೋಪವಿರುವಾಗ, ರಾತ್ರಿ ನಿದ್ದೆ ಸರಿಯಾಗದಿದ್ದರೆ ತಿಂದ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಸಾತ್ವಿಕಗುಣದ ವ್ಯಕ್ತಿಗಳು ಯೋಗ್ಯ ಹಾಗೂ ಸಮಪ್ರಮಾಣದ ಆಹಾರವನ್ನು ಸೇವಿಸುತ್ತಾರೆ. ರಾಜಸಿಕ ವ್ಯಕ್ತಿಗಳು ಹೊಟ್ಟೆ ಪೂರ್ಣವಾಗಿ ತುಂಬುವವರೆಗೆ ರುಚಿಯಾದ ಆಹಾರವನ್ನು ಸೇವಿಸಬಯಸುತ್ತಾರೆ! ತಾಮಸಿಕ ಜನರು ನಾಲಿಗೆಯ ಮೇಲೆ ನಿಯಂತ್ರಣವಿಲ್ಲದೆ ಮಿತಿಮೀರಿ ತಿನ್ನುತ್ತಾರೆ!

    ಭಗವದ್ಗೀತೆಯು ಮನಸ್ಸಿನ ಮೇಲೆ ಆಹಾರದ ಪರಿಣಾಮವನ್ನು ಸ್ಪಷ್ಟ ವಾಕ್ಯಗಳಲ್ಲಿ ಹೇಳಿದೆ. ಹಣ್ಣುಗಳ ರಸ, ದ್ರವಾಹಾರ, ಹಾಲು, ಬೆಣ್ಣೆ, ತುಪ್ಪಗಳಿಂದ ಕೂಡಿದ ದೇಹಪೋಷಕ ಜಿಡ್ಡುಗಳು, ಒಣಹಣ್ಣುಗಳು, ಹೃದಯಕ್ಕೆ ಹಿತವಾಗಿರುವ, ರುಚಿಕರವಾದ ಸಾತ್ವಿಕ ಆಹಾರ ಸೇವನೆಯಿಂದ ಆಯುಸ್ಸು, ಆರೋಗ್ಯ, ಸುಖ, ಪ್ರೀತಿ, ದೈಹಿಕ ಹಾಗೂ ಮಾನಸಿಕ ಬಲಗಳು ಸಂವರ್ಧನೆಯಾಗುತ್ತದೆ. ಸಾತ್ವಿಕ ಜನರು ಸಾತ್ವಿಕ ಆಹಾರವನ್ನೇ ಬಯಸುವುದರಿಂದ ಅವರ ಸತ್ತ್ವಗುಣ ಇನ್ನಷ್ಟು ಉತ್ಕರ್ಷಗೊಳ್ಳುತ್ತದೆ. ಅತಿಯಾದ ಖಾರ, ಹುಳಿ, ಉಪ್ಪು, ಅತಿಬಿಸಿ, ತೀಕ್ಷ್ಣ, ಒಣ, ಹುಳಿ ಬಂದ ಆಹಾರಗಳು ರಜೋಗುಣ ಹೆಚ್ಚಿಸುವವುಗಳಾಗಿದ್ದು ರಾಜಸಿಕ ವ್ಯಕ್ತಿಗಳು ಇಷ್ಟಪಡುತ್ತಾರೆ. ಪರಿಣಾಮವಾಗಿ ದುಃಖ, ಬೇಸರ, ರೋಗಗಳಿಗೆ ತುತ್ತಾಗಿ ಕಷ್ಟಪಡುತ್ತಾರೆ! ತಯಾರಿಸಿ ಮೂರು ಗಂಟೆ ಕಳೆದ, ರುಚಿ ಕಳೆದುಕೊಂಡ, ವಾಸನೆ ಬದಲಾಗುತ್ತಿರುವ, ಉಳಿದ ಹಳೆಯದಾದ, ಇನ್ನೊಬ್ಬರು ತಿಂದ, ಮನಸ್ಸನ್ನು ಕೆಡಿಸುವ ಆಹಾರ ತಾಮಸಿಕರಿಗಷ್ಟೇ ಪ್ರೀತಿ! ಇದರಿಂದ ಮಿದುಳು, ಮನಸ್ಸು, ಬುದ್ಧಿಗಳ ಅವನತಿ ಖಾತರಿ!

    ಪಂಚಸೂತ್ರಗಳು
    • ಶುಂಠಿ: ನೋವು ನಿಯಂತ್ರಕ.
    • ಕಬ್ಬು: ಪಿತ್ತದ ಗಂಧೆ ಗುಣಕಾರಿ.
    • ಸೋಮಲತಾ: ವೈರಾಣು ನಾಶಕ.
    • ಎಳ್ಳೆಣ್ಣೆ: ಚರ್ಮದ ನವೆ ನಿವಾರಕ.
    •  ಗಜಹಿಪ್ಪಲಿ: ಕಫವನ್ನು ಹೊರಹಾಕುವುದು.

    ಕೊನೇಹನಿ: ಅಶೋಕಮರದ ಒಣಗಿದ ಹೂವಿನ ಅರ್ಧ ಲೋಟ ಕಷಾಯದ ನಿತ್ಯಸೇವನೆ ಮಧುಮೇಹದಲ್ಲಿ ಪ್ರಯೋಜನಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts