More

    ಬಿಜೆಪಿಯಿಂದ ಒಡೆದಾಳುವ ನೀತಿ ಸಲ್ಲ : ಡಾ.ರವಿಕುಮಾರ ಬಿರಾದಾರ ವಾಗ್ದಾಳಿ

    ವಿಜಯಪುರ : ಲಿಂಗಾಯತರಲ್ಲಿ ಗೊಂದಲ ಮೂಡಿಸಿ ಒಡೆದಾಳುವ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ. ಬಿಜೆಪಿ ಲಿಂಗಾಯತ ನಾಯಕರನ್ನು ಬಳಸಿ ಬಿಸಾಡುವ ಪ್ರವೃತ್ತಿ ಬೆಳೆಸಿಕೊಂಡಿದೆ ಎಂದು ಕಾಂಗ್ರೆಸ್ ವೈದ್ಯಕೀಯ ಪ್ರಕೋಷ್ಠದ ಅಧ್ಯಕ್ಷ ಡಾ.ರವಿಕುಮಾರ ಬಿರಾದಾರ ವಾಗ್ದಾಳಿ ನಡೆಸಿದರು.

    ಶೇ.40 ರಷ್ಟು ಕಮಿಷನ್ ಭ್ರಷ್ಟಾಚಾರ ಎಲ್ಲ ವಲಯಗಳಲ್ಲೂ ತಾಂಡವವಾಡುತ್ತಿದೆ. ಇದನ್ನು ಪ್ರಶ್ನಿಸಿದರೆ ಬಿಜೆಪಿ ಸಚಿವರು ಕಾಂಗ್ರೆಸ್ ಪಕ್ಷದವರು ಲಿಂಗಾಯತ ಮುಖ್ಯಮಂತ್ರಿಯನ್ನು ಟಾರ್ಗೆಟ್ ಮಾಡಿದ್ದಾರೆ ಎನ್ನುತ್ತಿದ್ದಾರೆ. ಭ್ರಷ್ಟಾಚಾರ ಯಾರು ಮಾಡಿದರೂ ತಪ್ಪು. ಲಿಂಗಾಯತರು ಸಹ ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದಾಗ ಸಿದ್ದರಾಮಯ್ಯ ಸರ್ಕಾರವನ್ನು ಶೇ.10 ರಷ್ಟು ಕಮಿಷನ್ ಸರ್ಕಾರ ಎಂದು ಕರೆದಾಗ ಕಾಂಗ್ರೆಸ್ ಸಾತ್ವಿಕ ಟೀಕೆ ಮಾಡಿತು ಹೊರತು ಮೋದಿ ಹಾಲುಮತ ಸಮಾಜದ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಹೇಳಲಿಲ್ಲ. ಇದೀಗ ಅವರದೇ ಸರ್ಕಾರ ಶೇ.40 ರಷ್ಟು ಕಮಿಷನ್ ಪಡೆದಿರುವುದು ಜಗಜ್ಜಹೀರಾತಾಗಿದೆ. ಆದರೂ ಮೋದಿ ಅವರು ಮೌನ ವಹಿಸಿದ್ದಾರೆ ಎಂದರು.

    ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬಿಜೆಪಿ ಈ ರೀತಿಯ ಒಡೆದಾಳುವ ನೀತಿ ಅನುಸರಿಸುತ್ತಿದೆ. ಲಿಂಗಾಯತ ಸಮಾಜದ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಳಿಸಿದ್ದು ಯಾರು? ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ ಅವರಂತಹ ನಾಯಕರನ್ನು ಬಳಸಿ ಬಿಸಾಡಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಟೀಕಿಸಿದರು.

    ಬಡ ಲಿಂಗಾಯತರನ್ನು ಅನುಕೂಲ ಕಲ್ಪಿಸಲು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ದೊರಕಿಸುವ ಪ್ರಯತ್ನ ನಡೆಯಿತು. ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂಮರು ವಿರೋಧಿಸಲಿಲ್ಲ, ಆದರೆ ಬಿಜೆಪಿ, ಆರ್‌ಎಸ್‌ಎಸ್ ಲಿಂಗಾಯತರಲ್ಲಿಯೇ ಗೊಂದಲ ಮೂಡಿಸಿ ಇದು ಸಾಧ್ಯವಾಗದಂತೆ ಮಾಡಿತು. ನಿಜವಾದ ಅನ್ಯಾಯವನ್ನು ಬಿಜೆಪಿ ಲಿಂಗಾಯತರಿಗೆ ಮಾಡುತ್ತಿದೆ ಎಂದರು.

    ಬಿಜೆಪಿ ಎಂದರೆ ಬಡವರ ವಿರೋಧಿ, ಭ್ರಷ್ಟಾಚಾರಿಗಳ ಪಕ್ಷ. ಪಕ್ಷದ ಶಾಸಕರು, ಸಚಿವರು ಆಪಾದನೆಯಲ್ಲಿ ಸಿಲುಕಿದರೂ ಅದನ್ನು ಬಿ-ರಿಪೋರ್ಟ್ ಹಾಕಿಸುವ ಪ್ರವೃತ್ತಿಯ ಪಕ್ಷ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಮುಖಂಡ ವಸಂತ ಹೊನಮೋಡೆ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts