More

    ಅಸಮರ್ಥರ ವಜಾಗೊಳಿಸಲು ಪೊಲೀಸ್ ಇಲಾಖೆ ದಿಟ್ಟ ನಿರ್ಧಾರ

    | ಕೀರ್ತಿನಾರಾಯಣ ಸಿ. ಬೆಂಗಳೂರು

    ಸೇವೆಗೆ ಸೇರಿ 10, 15, 20 ವರ್ಷವಾದರೂ ಪ್ರೊಬೇಷನರಿ ಅವಧಿ ಇತ್ಯರ್ಥಪಡಿಸದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ಲಿಪಿಕ ಸಿಬ್ಬಂದಿಯನ್ನು (ಕ್ಲರಿಕಲ್ ಸ್ಟಾಫ್) ಸೇವೆಯಿಂದಲೇ ಬಿಡುಗಡೆಗೊಳಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಗರಿಷ್ಠ ಕಾಲಮಿತಿಯ ನಂತರವೂ ದೀರ್ಘ ಕಾಲದವರೆಗೆ ಇಲಾಖಾ ಪರೀಕ್ಷೆಗಳನ್ನು ಪಾಸ್ ಮಾಡದ, ತರಬೇತಿ ಪೂರೈಸಲು ಅಸಮರ್ಥ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕೆಲಸದಿಂದ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.

    ಕರ್ನಾಟಕ ಸಿವಿಲ್ ಸೇವೆಗಳ (ಪ್ರೊಬೇಷನ್) ನಿಯಮಗಳು 1977ರ ಅನ್ವಯ ಪ್ರೊಬೇಷನರಿ ಅವಧಿಯಲ್ಲಿರುವ ಸರ್ಕಾರಿ ನೌಕರ ಹಾಗೂ ಲಿಪಿಕ ಸಿಬ್ಬಂದಿ, ನಿಗದಿಪಡಿಸಿರುವ ತರಬೇತಿ ಮತ್ತು ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು. ಆದರೆ, ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಅಧಿಕಾರಿ ಮತ್ತು ಸಿಬ್ಬಂದಿ ಪ್ರೊಬೇಷನರಿ ಅವಧಿ ಪೂರ್ಣಗೊಳಿಸದೆ, ಪರಿವೀಕ್ಷಣಾ ಅವಧಿಯನ್ನು ದೀರ್ಘ ಕಾಲದವರೆಗೆ ವಿಸ್ತರಣೆ ಮಾಡಿಕೊಂಡು ಅರ್ಹತೆ ಇಲ್ಲದಿದ್ದರೂ ಹುದ್ದೆಯಲ್ಲಿ ಮುಂದುವರಿದಿರುವ ವಿಚಾರ ಬಹಿರಂಗವಾಗಿದೆ.

    ನೇಮಕ ಪ್ರಾಧಿಕಾರದ ಹಂತದಲ್ಲಿರುವ ಅಧಿಕಾರ ಬಳಸಿ ಪ್ರೊಬೇಷನರಿ ಅವಧಿಯನ್ನು ವಿಸ್ತರಿಸಿ, ಸರ್ಕಾರದ ಮಂಜೂರಾತಿ ಇಲ್ಲದಿದ್ದರೂ ಅನರ್ಹರನ್ನು ಸೇವೆಯಲ್ಲಿ ಮುಂದುವರಿಸಲಾಗುತ್ತಿದೆ. 10, 15, 20 ವರ್ಷದ ನಂತರವೂ ಪುನಃ ಪ್ರೊಬೇಷನರಿ ಅವಧಿಯನ್ನು ವಿಸ್ತರಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗುತ್ತಿದೆ.

    ಡಿಜಿಪಿ ಪ್ರವೀಣ್ ಸೂದ್, ಸರ್ಕಾರದ ಸೂಚನೆಯ ಮೇರೆಗೆ ಕಾಯಂಪೂರ್ವ ಅವಧಿಯನ್ನು ಇತ್ಯರ್ಥಪಡಿಸುವ ಸಂಬಂಧ ಅಸಮರ್ಥರಾಗಿರುವವರನ್ನು ಸೇವೆಯಿಂದ ಬಿಡುಗಡೆಗೊಳಿಸುವುದು ಸೇರಿ ಕೆಲ ನಿರ್ದೇಶನಗಳನ್ನು ಸರ್ಕಾರದ ಆದೇಶದ ಮೇರೆಗೆ ಎಲ್ಲ ನೇಮಕಾತಿ ಪ್ರಾಧಿಕಾರಿಗಳಿಗೆ ನೀಡಿದ್ದಾರೆ.

    ನಿಯಮದಲ್ಲಿ ಏನಿದೆ?

    – ಕರ್ನಾಟಕ ಸಿವಿಲ್ ಸೇವೆಗಳ (ಪ್ರೊಬೇಷನ್) ನಿಯಮಗಳು 1977ರ ಅನ್ವಯ ಪ್ರೊಬೇಷನರಿ ಅವಧಿ ಪೂರ್ಣಗೊಳಿಸಬೇಕು.

    – ಪ್ರೊಬೇಷನರಿ ಅವಧಿ ವಿಸ್ತರಣೆ, ಕಡಿತಗೊಳಿಸುವುದು ಮತ್ತು ತೃಪ್ತಿಕರವಾಗಿ ಪೂರ್ಣಗೊಳಿಸಿರುವ ಬಗ್ಗೆ ಘೋಷಣೆ ಮಾಡಬೇಕು.

    – ಅನಿವಾರ್ಯ ಹಾಗೂ ನಿರ್ದಿಷ್ಟ ಕಾರಣ ಹೊರತುಪಡಿಸಿ ತೃಪ್ತಿಕರವಾಗಿ ಅವಧಿ ಪೂರ್ಣಗೊಳಿಸದವರನ್ನು ನಿಯಮ 6ರ ಅನ್ವಯ ಸೇವೆಯಿಂದ ಬಿಡುಗಡೆಗೊಳಿಸಬೇಕು.

    ವಿಸ್ತರಣೆ ಅಧಿಕಾರ ಯಾರಿಗಿದೆ?: ಐದು ವರ್ಷಗಳವರೆಗೆ ಪ್ರೊಬೇಷನರಿ ಅವಧಿ ವಿಸ್ತರಿಸಲು ನೇಮಕಾತಿ ಪ್ರಾಧಿಕಾರಿಗಳಿಗೆ ಅಧಿಕಾರ ಇದೆ. ಅದೂ ಅನಿವಾರ್ಯ ಹಾಗೂ ವೈದ್ಯಕೀಯ ಕಾರಣ ಕೊಟ್ಟು ವಿಸ್ತರಿಸಬಹುದು. ಇದರ ಜತೆಗೆ ಸೂಕ್ತ ಎಂದು ಭಾವಿಸಿ ರಾಜ್ಯಪಾಲರು ಹಾಗೂ ಸರ್ಕಾರಕ್ಕೆ ಅವಧಿ ವಿಸ್ತರಣೆ ಮಾಡುವ ಅಧಿಕಾರ ಇದೆ.

    ಪ್ರೊಬೇಷನರಿ ಅವಧಿ ಎಂದರೇನು?: ನೇಮಕಾತಿ ಪ್ರಾಧಿಕಾರವು ಪ್ರೊಬೇಷನರಿ ಅವಧಿಯಲ್ಲಿ ಅಧಿಕಾರಿ/ಸಿಬ್ಬಂದಿಯನ್ನು ನಿರ್ದಿಷ್ಟ ಹುದ್ದೆಗೆ ನೇಮಿಸಿರುತ್ತದೆ. ಆ ಹುದ್ದೆಯನ್ನು ನಿಭಾಯಿಸಲು ಆತ ಅರ್ಹತೆ ಹೊಂದಿದ್ದಾನೆ ಎಂಬುದನ್ನು ಪರಿಗಣಿಸಲು ಇಲಾಖಾ ಪರೀಕ್ಷೆ ಹಾಗೂ ತರಬೇತಿ ನೀಡಲಾಗುತ್ತದೆ. ಪಾಸ್ ಆದರೆ ನೇಮಕಾತಿ ಪ್ರಾಧಿಕಾರ, ಪ್ರೊಬೇಷನರಿ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿದ್ದಾನೆ ಎಂದು ಘೋಷಿಸುತ್ತದೆ. ಒಂದು ವೇಳೆ ಉತ್ತೀರ್ಣನಾಗಬೇಕಿರುವ ವಿಶೇಷ ಪರೀಕ್ಷೆಗಳು ಅಥವಾ ಉಪಪರೀಕ್ಷೆಗಳು ಬಾಕಿ ಉಳಿದಿದ್ದು, 4ನೇ ನಿಯಮದ ಅನ್ವಯ ಪೊ›ಬೇಷನ್ ಅವಧಿ ವಿಸ್ತರಿಸದಿದ್ದಲ್ಲಿ ಅಂತಹ ಅಧಿಕಾರಿ/ಸಿಬ್ಬಂದಿಯನ್ನು ಸೇವೆಯಿಂದ ವಿಮುಕ್ತಗೊಳಿಸಿ ಆದೇಶಿಸಬಹುದು. ಪ್ರೊಬೇಷನರಿ ಅವಧಿಯಲ್ಲಿ ದುರ್ನಡತೆ ತೋರಿದರೂ ಕೆಲಸದಿಂದ ತೆಗೆದು ಹಾಕಬಹುದು. ಇದರ ವಿರುದ್ಧ ಮೇಲ್ಮನವಿಗೂ ಅವಕಾಶವಿಲ್ಲ.

    ಯಾವ್ಯಾವ ವಿಭಾಗಕ್ಕೆ ಸೂಚನೆ?: ಪೊಲೀಸ್ ಇಲಾಖೆಯ ಸಿಐಡಿ, ಪೊಲೀಸ್ ತರಬೇತಿ, ಬೆಂಗಳೂರು ಕಮಿಷನರೇಟ್ ಘಟಕ, ಆಂತರಿಕ ಭದ್ರತಾ ವಿಭಾಗ, ಗುಪ್ತದಳ, ಕೆಎಸ್ಸಾರ್ಪಿ, ಸಿಎಲ್ ಆಂಡ್ ಎಂ, ಡಿಸಿಆರ್​ಇ, ಅಪರಾಧ ಮತ್ತು ತಾಂತ್ರಿಕ ಸೇವೆಗಳು, ಪಿಸಿಡಬ್ಲ್ಯು, ಪೊಲೀಸ್ ನೇಮಕಾತಿ, ಸಿಟಿಆರ್​ಎಸ್, ರೈಲ್ವೆ ವಿಭಾಗ, ಪೊಲೀಸ್ ಗಣಕ ವಿಭಾಗ, ಕೆಎಸ್​ಎಚ್​ಆರ್​ಸಿ, ಎಫ್​ಎಸ್​ಎಲ್ ಸೇರಿ ಇನ್ನಿತರ ವಿಭಾಗಗಳ ಮುಖ್ಯಸ್ಥರಿಗೆ ಡಿಜಿಪಿ ಲಿಖಿತ ಸೂಚನೆ ನೀಡಿದ್ದಾರೆ.

    ನಿಯಮ ಉಲ್ಲಂಘನೆ ಹೇಗೆ?

    • ನೇಮಕ ಪ್ರಾಧಿಕಾರದ ಹಂತದಲ್ಲಿರುವ ಅಧಿಕಾರ ಬಳಸಿ ಪ್ರೊಬೇಷನರಿ ಅವಧಿಯನ್ನು ಅನೇಕ ವರ್ಷಗಳವರೆಗೆ ವಿಸ್ತರಿಸಲಾಗಿದೆ.
    • ಸರ್ಕಾರದ ಮಂಜೂರಾತಿ ಇಲ್ಲದೆ 10, 15, 20 ವರ್ಷಗಳ ಸೇವೆ ನಂತರವೂ ಪ್ರೊಬೇಷನರಿ ಅವಧಿ ವಿಸ್ತರಿಸಲು ಪ್ರಸ್ತಾವನೆಗಳ ಸಲ್ಲಿಸಲಾಗುತ್ತಿದೆ.
    • ಪ್ರತಿ ಹುದ್ದೆಗೂ ನಿರ್ದಿಷ್ಟ ಅರ್ಹತೆ ಗೊತ್ತುಪಡಿಸಲಾಗಿದೆ. ಆದರೆ, ಅರ್ಹತೆ ಇಲ್ಲದವರನ್ನು ಹುದ್ದೆಯಲ್ಲಿ ಮುಂದುವರಿಸಲಾಗುತ್ತಿದೆ.

    ಡಿಜಿಪಿ ಸೂಚನೆ ಏನು?

    • ನೇಮಕಾತಿ ಪ್ರಾಧಿಕಾರಿಗಳು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪ್ರೊಬೇಷನರಿ ಅವಧಿಯಲ್ಲಿಯೇ ವಿನಾಯಿತಿ ಕೊಡದೆ ತರಬೇತಿಗೆ ನಿಯೋಜಿಸಬೇಕು.
    • ಪ್ರೊಬೇಷನರಿ ಅವಧಿಯೊಳಗೆ ನಿಗದಿತ ಇಲಾಖಾ ಪರೀಕ್ಷೆಗಳನ್ನು ತೆಗೆದುಕೊಂಡು ಉತ್ತೀರ್ಣಗೊಳ್ಳಲು ಉತ್ತೇಜನ ನೀಡಬೇಕು.
    • ಪ್ರೊಬೇಷನರಿ ಅವಧಿ ವಿಸ್ತರಿಸುವ ಪ್ರಸ್ತಾವನೆ ಕಳುಹಿಸುವ ಮುನ್ನ ಇಲಾಖಾ ಪರೀಕ್ಷೆಗಳನ್ನು ಪಾಸ್ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆಯೇ ಇಲ್ಲವೇ ಎಂದು ಪರಿಶೀಲಿಸಿ, ಖಾತ್ರಿಪಡಿಸಿಕೊಳ್ಳಬೇಕು.
    • ತೀವ್ರ ಅನಿವಾರ್ಯ ಹಾಗೂ ನಿರ್ದಿಷ್ಟ ವೈದ್ಯಕೀಯ ಕಾರಣಗಳನ್ನು ಹೊಂದಿರುವವರಿಗೆ ಮಾತ್ರವೇ ಪ್ರೊಬೇಷನರಿ ಅವಧಿ ವಿಸ್ತರಿಸಲು ವಿನಾಯಿತಿ ಕೊಡಬೇಕು.
    • ಪ್ರೊಬೇಷನರಿ ಅವಧಿ ವಿಸ್ತರಿಸಿದ ಗರಿಷ್ಠ ಕಾಲಮಿತಿ ನಂತರವೂ ಇಲಾಖಾ ಪರೀಕ್ಷೆ, ತರ ಬೇತಿ ಪೂರೈಸಲು ಅರ್ಹರಿಲ್ಲದ, ಅಸಮರ್ಥ ಅಧಿಕಾರಿ/ಸಿಬ್ಬಂದಿ ಸೇವೆಯಿಂದ ಬಿಡುಗಡೆಗೊಳಿಸಲು ಕ್ರಮ ವಹಿಸಬೇಕು.

    ಮೇಕಪ್​ನಿಂದಾಗಿ ಬಣ್ಣಗೆಟ್ಟಿತು ವಧುವಿನ ಮುಖ; ಮದುವೆಯೇ ಬೇಡ ಎಂದ ವರ

    ಪ್ರೀತಿಸಿ ಅಂತರ್ಜಾತಿ ವಿವಾಹವಾದ ಜೋಡಿಗೆ ಗ್ರಾಮದಿಂದಲೇ ಬಹಿಷ್ಕಾರ; ತರಕಾರಿ, ಹಾಲು, ನೀರೂ ತೆಗೆದುಕೊಳ್ಳುವಂತಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts