More

    ಮನೆ ಬಾಡಿಗೆ ವಿನಾಯಿತಿ ಘೋಷಿಸಿ, ದೆಹಲಿ ಸರ್ಕಾರದ ಯೋಜನೆಯನ್ನು ಇಡೀ ದೇಶಕ್ಕೆ ಅನ್ವಯಿಸಿ: ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ ಮಾಜಿ ಸಿಎಂ ಎಚ್​ಡಿಕೆ

    ಬೆಂಗಳೂರು: ಆರ್ಥಿಕ ಚಟುವಟಿಕೆಗಳೆಲ್ಲ ಸ್ಥಗಿತಗೊಂಡಿರುವ ಕಾರಣ ಸಾಮಾನ್ಯ ಜನರ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಈ ಸಂದರ್ಭದಲ್ಲಿ ಮನೆ ಬಾಡಿಗೆ ಕೊಡುವುದೂ ಹೊರೆಯಾಗುತ್ತಿದೆ. ಹಾಗಾಗಿ ಈ ವಿಚಾರದಲ್ಲಿ ವಿನಾಯಿತಿ ಕೊಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.

    ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಆರ್ಥಿಕ ಚಟುವಟಿಕೆಗಳೆಲ್ಲ ಸಮಗ್ರವಾಗಿ ಸ್ಥಗಿತಗೊಂಡ ಈ ದಿನಗಳಲ್ಲಿ ಎಂದಿನಂತೆ ಪ್ರತಿ ತಿಂಗಳು ಮನೆ ಬಾಡಿಗೆಯನ್ನು ಕೊಡಲೇಬೇಕು ಎಂದು ಮಾಲೀಕರು ಪಟ್ಟು ಹಿಡಿದರೆ ಬಾಡಿಗೆದಾರನಿಗೆ ಹೊರೆಯಾಗುತ್ತದೆ. ಬೇರೆ ಮನೆ ಹುಡುಕಿಕೊಂಡು ಹೋಗುವ ಪರಿಸ್ಥಿತಿಯೂ ಸದ್ಯಕ್ಕೆ ಇಲ್ಲ. ಹಾಗಾಗಿ ಕೇಂದ್ರ ಸರ್ಕಾರ ಕೂಡಲೇ ಬಾಡಿಗೆ ವಿನಾಯಿತಿ ಯೋಜನೆ ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ.

    ದೆಹಲಿ, ಮುಂಬೈ, ಬೆಂಗಳೂರಿನಂತಹ ನಗರಗಳಲ್ಲಿ ವೃತ್ತಿ ಮಾಡುತ್ತಿರುವ ಹಾಗೂ ಓದುತ್ತಿರುವ ಅನೇಕ ಜನರ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಮನೆ, ಪಿಜಿ, ಹಾಸ್ಟೆಲ್​ಗಳ ಮಾಲೀಕರು ಎಂದಿನಂತೆ ಬಾಡಿಗೆ ವಸೂಲಿಗೆ ಇಳಿಯದೆ ಉದಾರತೆ ತೋರಬೇಕು. ಹಾಗೇ ಸರ್ಕಾರ ಬಾಡಿಗೆ ಇರುವ ಜನಸಾಮಾನ್ಯನ ಕಷ್ಟಗಳಿಗೆ ಸ್ಪಂದಿಸಬೇಕು ಎಂದಿದ್ದಾರೆ.

    ಆರ್ಥಿಕ ಮುಗ್ಗಟ್ಟಿನಿಂದ ಬಾಡಿಗೆದಾರರನ್ನು ಕಾಪಾಡಲು ಅನೇಕ ದೇಶಗಳು ಕರೋನ ಸಂಕಟದ ಅವಧಿಗೆ ಬಾಡಿಗೆ ವಿನಾಯಿತಿಯನ್ನು ಘೋಷಿಸಿವೆ. ದೆಹಲಿ ಸರ್ಕಾರವೂ ಮೂರು ತಿಂಗಳ ಬಾಡಿಗೆಯನ್ನು ತಾನೇ ಕೊಡುವ ಯೋಜನೆ ಘೋಷಿಸಿದೆ. ಇಡೀ ದೇಶಕ್ಕೆ ಅನ್ವಯವಾಗುವಂತೆ ಮೂರು ತಿಂಗಳು ಬಾಡಿಗೆ ವಿನಾಯಿತಿಯನ್ನು ಪ್ರಧಾನಮಂತ್ರಿ ಘೋಷಿಸಬೇಕು ಎಂದು ಮನವಿ ಮಾಡಿಕೊಳ್ಳುವುದಾಗಿ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts