More

    ಕಾರ್ಯಾಚರಣೆ ನಿಲ್ಲಿಸುವುದಿಲ್ಲ…

    ಹುಬ್ಬಳ್ಳಿ: ಫುಟ್​ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ಕಾಯ್ದೆಯಂತೆ ಕ್ರಮ ತೆಗೆದುಕೊಂಡಿದ್ದೇವೆ. ಈ ಕಾರ್ಯಾಚರಣೆ ಕೇವಲ ಬೀದಿ ಬದಿ ವ್ಯಾಪಾರಿಗಳಿಗೆ ಸೀಮಿತವಲ್ಲ. ದೊಡ್ಡ ವ್ಯಾಪಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ತಿಳಿಸಿದರು.

    ಬುಧವಾರ ಆಯೋಜಿಸಲಾಗಿದ್ದ ಬೀದಿ ಬದಿ ವ್ಯಾಪಾರಿಗಳನ್ನೊಳಗೊಂಡ ಪಟ್ಟಣ ಮಾರಾಟ ಸಮಿತಿ (ಟಿವಿಸಿ)ಯ ಪ್ರಥಮ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾರ್ಯಾಚರಣೆ ಮುಂದುವರಿಯಲಿದೆ. ಫುಟ್​ಪಾತ್, ರಸ್ತೆ ಅತಿಕ್ರಮಿಸಿದ ಶಾಶ್ವತವಾದ ಯಾವುದೇ ನಿರ್ವಣಕ್ಕೆ ನೋಟಿಸ್ ನೀಡುವ ಅಗತ್ಯವಿರುವುದಿಲ್ಲ. ನೇರವಾಗಿ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದರು.

    ಹುಬ್ಬಳ್ಳಿ ದುರ್ಗದಬೈಲ್​ನಿಂದ ತೆರವುಗೊಳಿಸಿರುವ ಬೀದಿ ಬದಿ ವ್ಯಾಪಾರಿಗಳಿಗೆ ಸಮೀಪದ ಎಂ.ಜಿ. ಮಾರ್ಕೆಟ್​ನಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.

    ಮಾರಾಟ ವಲಯ ಸಂಖ್ಯೆ 50ಕ್ಕೆ ಹೆಚ್ಚಳ: ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಅವಳಿ ನಗರದಲ್ಲಿ ಮಾರಾಟ ವಲಯಗಳ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಲು ಹು-ಧಾ ಮಹಾನಗರ ಪಾಲಿಕೆ ನಿರ್ಧರಿಸಿದೆ. ಈಗಾಗಲೇ ಗುರುತಿಸಿರುವ ಮಾರಾಟ ವಲಯಗಳನ್ನು ಪರಿಷ್ಕರಿಸಲು ಹಾಗೂ ವಿಸ್ತರಿಸಲು ಸಹ ತೀರ್ವನಿಸಲಾಗಿದೆ. 2012ರಲ್ಲಿ ಸುಮಾರು 6 ಸಾವಿರ ಬೀದಿ ಬದಿ ವ್ಯಾಪಾರಿಗಳಿಗಾಗಿ ಹು-ಧಾ ದಲ್ಲಿ 25 ಮಾರಾಟ ವಲಯಗಳನ್ನು ಗುರುತಿಸಲಾಗಿತ್ತು. ಆಗ 2011ರ ಜನಗಣತಿ ಪ್ರಕಾರ ಅವಳಿ ನಗರದ ಜನಸಂಖ್ಯೆ 9.43 ಲಕ್ಷ ಇತ್ತು. ಇಂದು 11 ಲಕ್ಷ ದಾಟಿದೆ. ಅದರಂತೆ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ ಸುಮಾರು 11 ಸಾವಿರ ಇದೆ. ಈ ಹಿಂದೆ ಗುರುತಿಸಿದ್ದ ಮಾರಾಟ ವಲಯಗಳನ್ನು ಬದಲಾಯಿಸಬೇಕೆಂಬ ಸೂಚನೆಗಳು ಬಂದಿವೆ. ಈ ಕುರಿತು ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದರು.

    ಹೊಸದಾಗಿ ಮಾರಾಟ ವಲಯಗಳನ್ನು ಗುರುತಿಸುವ, ಈಗಿರುವ ಮಾರಾಟ ವಲಯಗಳ ಪರಿಷ್ಕರಣೆ, ವ್ಯಾಪ್ತಿ ವಿಸ್ತರಣೆ ಕುರಿತು ಪಾಲಿಕೆ ವಲಯ ಕಚೇರಿ ಸಹಾಯಕ ಆಯುಕ್ತರು, ಟಿವಿಸಿ ಸದಸ್ಯರು ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳ ಸಮೀಕ್ಷೆ ನಡೆಸಿ ವಾರದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ. ಮಾರಾಟ ವಲಯಗಳಲ್ಲಿ ಬೀದಿ ದೀಪ, ಶೌಚಗೃಹ ಹಾಗೂ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

    ಸಾರ್ವಜನಿಕರ ಹಿತದೃಷ್ಟಿಯಿಂದ ಕಾರ್ಯ

    ಸಭೆಯಲ್ಲಿ ಮಾತನಾಡಿದ ಹೆಚ್ಚುವರಿ ಆಯುಕ್ತ ಅಜೀಜ್ ದೇಸಾಯಿ, ಸಾರ್ವಜನಿಕ ಹಿತದೃಷ್ಟಿಯಿಂದ ತೆರವು ಕಾರ್ಯಾಚರಣೆ ನಡೆಸಲಾಗಿದೆ. ನಿಜವಾದ ಬೀದಿ ಬದಿ ವ್ಯಾಪಾರಿಗಳಿಗೆ ನಾವು ತೊಂದರೆ ಕೊಟ್ಟಿಲ್ಲ. ಮಾರಾಟ ವಲಯವೆಂದು ಗುರುತಿಸಿದ ಸ್ಥಳ ಬಿಟ್ಟು ಬೇರೆಡೆ ವ್ಯಾಪಾರ ಮಾಡುತ್ತೇವೆ ಎನ್ನುವುದು ತಪ್ಪು. ಯಾರಿಂದ ಸಮಸ್ಯೆ ಆಗುತ್ತಿದೆ ಎಂಬುದು ನಿಮಗೆ ಗೊತ್ತಿದೆ ಎಂದರು.

    ಕಾರ್ಯಾಚರಣೆ ವೇಳೆ ವಶಪಡಿಸಿಕೊಂಡಿರುವ ಬೀದಿ ಬದಿ ವ್ಯಾಪಾರಿಗಳ ಸಾಮಾನು-ಸರಂಜಾಮುಗಳನ್ನು ವಾಪಸ್ ಕೊಡಬೇಕು. ಟಿವಿಸಿ ಸದಸ್ಯರಿಗೆ ತರಬೇತಿ ನೀಡಬೇಕು. ಬೀದಿ ಬದಿ ವ್ಯಾಪಾರಿಗಳ ಮೇಲೆ ದಬ್ಬಾಳಿಕೆ ನಡೆಸಿದ ವಲಯ ಕಚೇರಿ 9ರ ಸಹಾಯಕ ಆಯುಕ್ತರನ್ನು ವರ್ಗಾಯಿಸಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ಅಧಿಕಾರಿಗಳು, ಪೊಲೀಸರು ಕಿರುಕುಳ ಕೊಡಬಾರದು. ಪಾಲಿಕೆ ವ್ಯಾಪ್ತಿಯಲ್ಲಿ 100 ಮಾರಾಟ ವಲಯಗಳನ್ನು ಗುರುತಿಸಬೇಕು ಎಂದು ಸಭೆಯಲ್ಲಿ ಟಿವಿಸಿ ಸದಸ್ಯರು ಒತ್ತಾಯಿಸಿದರು.

    ಪಾಲಿಕೆ ಉಪ ಆಯುಕ್ತ ಎಂ.ಬಿ. ಸಬರದ, ಸಮುದಾಯ ವ್ಯವಹಾರಗಳ ಅಧಿಕಾರಿ ರಮೇಶ ನೂಲ್ವಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್.ಬಿ. ಬೇವೂರ, ಎಸಿಪಿ ವಿನೋದ ಮುಕ್ತೆದಾರ, ಶಹರ ಠಾಣೆ ಪಿಐ ಎಂ.ಎಸ್. ಪಾಟೀಲ, ಟಿವಿಸಿ ಸದಸ್ಯರಾದ ಪ್ರೇಮನಾಥ ಚಿಕ್ಕತುಂಬಳ, ಜಾವೀದ ಟಿನವಾಲೆ, ಪ್ರಕಾಶ ಹಳ್ಯಾಳ, ನಾರಾಯಣಸಾ ಲದವಾ, ಲಕ್ಷ್ಮಿ ವಾಲ್ಮೀಕಿ, ನಿರ್ಮಲಾ ಹಂಜಗಿ, ಜಾಫರ ಮುಲ್ಲಾನವರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts