More

    ವಿದ್ಯಾರ್ಥಿಗಳ ಸಂಖ್ಯೆ ವಿರಳ

    ಗದಗ: ಜಿಲ್ಲೆಯ ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜ್​ಗಳಲ್ಲಿ ಶುಕ್ರವಾರ ಹಬ್ಬದ ವಾತಾವರಣ ನಿರ್ವಣಗೊಂಡಿತ್ತು. ಶೈಕ್ಷಣಿಕ ವರ್ಷದ ಆರಂಭದಲ್ಲಿ (ಜೂನ್) ಆಯೋಜಿಸುತ್ತಿದ್ದ ಶಾಲಾ ಪ್ರಾರಂಭೋತ್ಸವ ಮಾದರಿಯಲ್ಲಿ ಶಾಲೆಗಳ ಬಾಗಿಲುಗಳಿಗೆ ತಳಿರು-ತೋರಣ ಕಟ್ಟಲಾಗಿತ್ತು. ಶಿಕ್ಷಕರು ಮಕ್ಕಳನ್ನು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

    ಆದರೆ, ಮೊದಲ ದಿನ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ವಿರಳವಾಗಿತ್ತು. 6ರಿಂದ 10 ನೇ ತರಗತಿವರೆಗೆ ಗದಗ ಶಹರ ವಲಯದಲ್ಲಿ 16297 ವಿದ್ಯಾರ್ಥಿಗಳು, ಗದಗ ಗ್ರಾಮೀಣದಲ್ಲಿ 15327, ಮುಂಡರಗಿಯಲ್ಲಿ 12226, ನರಗುಂದದಲ್ಲಿ 8169, ರೋಣದಲ್ಲಿ 21515 ಮತ್ತು ಶಿರಹಟ್ಟಿ ತಾಲೂಕಿನಲ್ಲಿ 16569 ಸೇರಿ ಒಟ್ಟು 90,103 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಗದಗ ಶಹರ ವಲಯದಲ್ಲಿ 1428, ಗದಗ ಗ್ರಾಮೀಣದಲ್ಲಿ 1166, ಮುಂಡರಗಿಯಲ್ಲಿ 1292, ನರಗುಂದದಲ್ಲಿ 2376, ರೋಣದಲ್ಲಿ 8497 ಮತ್ತು ಶಿರಹಟ್ಟಿ ತಾಲೂಕಿನಲ್ಲಿ 3517 ಸೇರಿ ಒಟ್ಟು 19,266 ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದರು.

    ಕರೊನಾ ಸೋಂಕಿನ ಭಯದಿಂದ ಕಳೆದ 9 ತಿಂಗಳಿಂದ ಬಂದ್ ಆಗಿದ್ದ ಶಾಲಾ-ಕಾಲೇಜ್ ಕೊಠಡಿಗಳನ್ನು ಗುರುವಾರವೇ ಸ್ವಚ್ಛಗೊಳಿಸಿ, ಸ್ಯಾನಿಟೈಸರ್ ಸಿಂಪಡಿಸಿ ಸಿದ್ಧಗೊಳಿಸಲಾಗಿತ್ತು.

    ದ್ವಿತೀಯ ಪಿಯುಸಿಯಲ್ಲಿ ಶೇ.38 ಹಾಜರಾತಿ

    ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ತರಗತಿಗೆ ಹಾಜರಾದರು. ನಗರದ ಕೆವಿಎಸ್​ಆರ್ ಕಾಲೇಜ್, ಎಎಸ್​ಎಸ್, ರಾಣಾ ಪ್ರತಾಪಸಿಂಹ ಕಾಲೇಜ್​ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿತ್ತು.

    ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಸೇರಿ ಒಟ್ಟು 101 ಪಪೂ ಕಾಲೇಜ್​ಗಳಿವೆ. ಒಟ್ಟು 9351 ದ್ವಿತೀಯ ವಿದ್ಯಾರ್ಥಿಗಳ ಪೈಕಿ ಶುಕ್ರವಾರ 3593 ವಿದ್ಯಾರ್ಥಿಗಳು ಕಾಲೇಜ್​ಗೆ ಹಾಜರಾಗಿದ್ದು, ಶೇ.38 ರಷ್ಟು ಹಾಜರಾತಿ ಇತ್ತು ಎಂದು ಡಿಡಿಪಿಯು ಜಯಪ್ಪ ತಿಳಿಸಿದರು.

    ಐವರು ಶಿಕ್ಷಕರಿಗೆ ಕರೊನಾ

    ಜಿಲ್ಲೆಯಲ್ಲಿ ಐವರು ಶಿಕ್ಷಕರಿಗೆ ಕೋವಿಡ್-19 ದೃಢಪಟ್ಟಿದೆ. ಹೀಗಾಗಿ ಗದಗ ನಗರದ ಸೇಂಟ್ ಜಾನ್ ಶಾಲೆ, ಲೋಯೋಲಾ ಪ್ರೌಢಶಾಲೆ, ಸಿ.ಎಸ್. ಪಾಟೀಲ ಶಾಲೆ, ಮಾರಲ್ ಪ್ರೌಢಶಾಲೆ ಹಾಗೂ ನರಗುಂದ ತಾಲೂಕಿನ ಜಗಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾಗಿಲ್ಲ.

    ಐವರು ಶಿಕ್ಷಕರಿಗೆ ಕರೊನಾ ಸೋಂಕು ದೃಢಪಟ್ಟಿದ್ದರಿಂದ ಐದು ಶಾಲೆಗಳು ಶುಕ್ರವಾರ ಆರಂಭವಾಗಿಲ್ಲ. ಒಂದೆರಡು ದಿನಗಳ ನಂತರ ವೈದ್ಯಕೀಯ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಸದ್ಯಕ್ಕೆ ಆ ಶಾಲೆಗಳನ್ನು ಆರಂಭಿಸುವುದಿಲ್ಲ. ಎಲ್ಲೆಡೆ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿದೆ.

    ಬಸವಲಿಂಗಪ್ಪ ಬಿ.ಎಂ., ಡಿಡಿಪಿಐ ಗದಗ

    ಸರ್ಕಾರ ಶುಕ್ರವಾರದಿಂದ ಶಾಲೆ-ಕಾಲೇಜ್​ಗಳ ಆರಂಭಕ್ಕೆ ಅನುಮತಿ ನೀಡಿದ್ದು, ಮೊದಲ ದಿನ ಶೇ. 70ರಷ್ಟು ಮಕ್ಕಳು ಕಾಲೇಜ್​ಗೆ ಆಗಮಿಸಿದ್ದಾರೆ. ಎಲ್ಲರೂ ತಮ್ಮ ಪೋಷಕರು ಒಪ್ಪಿಗೆ ಪತ್ರವನ್ನು ತೆಗೆದುಕೊಂಡು ಬಂದಿದ್ದಾರೆ. ಪರೀಕ್ಷೆ ಸಮಯ ಹತ್ತಿರವಾಗುತ್ತಿದ್ದು, ಕಾಲೇಜ್ ಆರಂಭಿಸಲು ಸರ್ಕಾರ ನಿರ್ಣಯಿಸಿದ್ದು ಸ್ವಾಗತಾರ್ಹ.

    | ಸತೀಶ ಪಾಸಿ, ಉಪನ್ಯಾಸಕ, ಕೆವಿಎಸ್​ಆರ್ ಕಾಲೇಜ್ ಗದಗ

    ಪ್ರಥಮ ಸ್ಥಾನ ಪಡೆದವರಿಗೆ ಬಹುಮಾನ

    ಮುಂಡರಗಿ: ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕಾಲೇಜ್​ಗೆ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗೆ ವೈಯಕ್ತಿಕ 5001 ರೂ.ನಗದು ಬಹುಮಾನ ನೀಡಲಾಗುವುದು ಎಂದು ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಪಿಯು ಕಾಲೇಜ್ ಕಾಲೇಜ್ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಕರಬಸಪ್ಪ ಹಂಚಿನಾಳ ಹೇಳಿದರು.

    ಶುಕ್ರವಾರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಕಾಲೇಜ್ ಅಭಿವೃದ್ಧಿ ಸಮಿತಿ ಸದಸ್ಯ ಎಸ್.ಬಿ. ಹಿರೇಮಠ ಮಾತನಾಡಿ, ವಿಜ್ಞಾನ ವಿಭಾಗದಲ್ಲಿ ಕಾಲೇಜ್​ಗೆ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗೆ 1001ರೂ. ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದರು.

    ಪೋಷಕರು ಆತಂಕ ಪಡುವ ಅಗತ್ಯವಿಲ್ಲ

    ರೋಣ: ಕರೊನಾ ಭೀತಿಯ ನಡುವೆಯೂ ಶುಕ್ರವಾರ ಶಾಲೆ-ಕಾಲೇಜುಗಳು ಆರಂಭವಾಗಿದ್ದು, ತಾಲೂಕಿನಾದ್ಯಂತ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಮಕ್ಕಳು ಕರೊನಾ ವೈರಸ್ ದುಗುಡದೊಂದಿಗೆ ಶಾಲೆ-ಕಾಲೇಜ್​ಗಳತ್ತ ಮುಖ ಮಾಡಿದ್ದಾರೆ.

    ಶಾಲೆಗಳಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ರೋಣ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಸಜ್ಜನರ ವಿನಂತಿಸಿದ್ದಾರೆ.

    ಕೋವಿಡ್ ಮುನ್ನಚ್ಚರಿಕೆಯ ಕ್ರಮ: ತಾಲೂಕಿನಾದ್ಯಂತ ಎಲ್ಲಾ ಶಾಲೆಗಳಲ್ಲಿ ಕರೊನಾ ಮುನ್ನಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಪಾಲಕರ ಸಭೆ ನಡೆಸಿ ಆರೋಗ್ಯ ಸಮಸ್ಯ ಇರುವ ಮಕ್ಕಳು ಶಾಲೆಗೆ ಬರದಂತೆ ಸೂಚಿಸಲಾಗಿದೆ, ಜೋತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ ಹಾಗೂ ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯ ಮಾಡಲಾಗಿದೆ ಎಂದು ಹುಲ್ಲೂರ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್​ಡಿಎಂಸಿ ಸದಸ್ಯ ಅಶೋಕ ಘಟ್ಟಿ ಹೇಳಿದರು.

    ಗಣೇಶ ಪೂಜೆಯೊಂದಿಗೆ ಶಾಲಾರಂಭ

    ನರಗುಂದ: ಪಟ್ಟಣದ ಲಯನ್ಸ್ ಶಿಕ್ಷಣ ಸಂಸ್ಥೆಯ ಲಯನ್ಸ್ ಆಂಗ್ಲ ಮಾಧ್ಯಮ, ಕನ್ನಡ ಮಾಧ್ಯಮ ಪ್ರೌಢ ಶಾಲೆ ಹಾಗೂ ಲಯನ್ಸ್ ಸ್ವತಂತ್ರ ಪದವಿ ಪೂರ್ವ ಕಾಲೇಜ್ ಆರಂಭೋತ್ಸವವನ್ನು ಶ್ರೀ ಗಣೇಶ ಪೂಜೆಯೊಂದಿಗೆ ಶುಕ್ರವಾರ ಸಂಭ್ರಮದಿಂದ ನೆರವೇರಿಸಲಾಯಿತು.

    ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ ಶಾಲಾ ಆರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಕರೊನಾ ಓಡಿಸಿ, ಮಕ್ಕಳನ್ನು ಓದಿಸಲು ಮುಂದಾಗಬೇಕಿದೆ. ಸರ್ಕಾರದ ಕೋವಿಡ್ ನಿಯಮಗಳನ್ನು ಪಾಲಿಸಿ ಶಾಲೆ ಆರಂಭ ಮಾಡಲಾಗುತ್ತಿದೆ. ಹೊಸ ವರ್ಷ, ಹೊಸ ಜೀವನ, ಹೊಸದಾಗಿಯೇ ಶಿಕ್ಷಣ ಕಲಿಕೆ ಆರಂಭವಾಗಿದೆ ಎಂದರು.

    ಶಿಕ್ಷಣ ಸಂಸ್ಥೆ ನಿರ್ದೆಶಕ ಜಿ.ಬಿ. ಕುಲಕರ್ಣಿ ಮಾತನಾಡಿ, ಕೋವಿಡ್ ನಿಯಮ ಪಾಲಿಸಿ ಶಾಲೆ ಆರಂಭಿಸಲಾಗುತ್ತಿದೆ. ಇದರಿಂದ ಎಲ್ಲೆಡೆ ಆರ್ಥಿಕ ಸಂಕಷ್ಟದ ಜತೆಗೆ ಅನೇಕ ತೊಂದರೆಗಳಾಗಿದ್ದರೂ ಬರತಕ್ಕ ಸಮಸ್ಯೆಗಳನ್ನು ಎದುರಿಸಿ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸಂಸ್ಥೆಯ ಸಿಬ್ಬಂದಿ ಮುಂದಾಗಬೇಕು ಎಂದು ಸಲಹೆ ನೀಡಿದರು.

    ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಜಿ.ಬಿ. ಹಿರೇಮಠ, ಪ್ರಾಚಾರ್ಯ ಎಸ್.ಜಿ. ಜಕ್ಕಲಿ, ಶಿಕ್ಷಣ ಸಂಸ್ಥೆಯ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಡಾ. ಬಸವರಾಜ ಹಲಕುರ್ಕಿ ನಿರ್ವಹಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts