More

    ಏರುತ್ತಲೇ ಇದೆ ಸೋಂಕಿದರ ಸಂಖ್ಯೆ!

    ಹಾವೇರಿ: ಜಿಲ್ಲೆಯಲ್ಲಿ ಗುರುವಾರ ಬ್ಯಾಂಕ್ ಉದ್ಯೋಗಿ ಸೇರಿ 12 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. 33 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

    ಗುರುವಾರದ 12 ಪ್ರಕರಣಗಳು ಸೇರಿ ಈವರೆಗೆ 334 ಜನರಿಗೆ ಕರೊನಾ ದೃಢಗೊಂಡಿದೆ. ಇಂದಿನ 33 ಜನ ಸೇರಿ ಈವರೆಗೆ 244 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 83 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ. ಇಂದು ಹಾವೇರಿ ತಾಲೂಕಿನಲ್ಲಿ 11, ರಾಣೆಬೆನ್ನೂರ ತಾಲೂಕಿನಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

    ಹಾವೇರಿ ವಿದ್ಯಾನಗರದ ನಿವಾಸಿ ಕೆನರಾ ಬ್ಯಾಂಕ್​ನ ಸೂಪರ್​ವೈಸರ್ ಆಗಿದ್ದ 33 ವರ್ಷದ ಪುರುಷ, ಶಿವಬಸವನಗರದ ಕಂಟೇನ್ಮೆಂಟ್ ಜೋನ್​ನ 31 ವರ್ಷದ ಮಹಿಳೆ, ಮೆಹಬೂಬನಗರದ 38 ವರ್ಷದ ಪುರುಷ, 22 ವರ್ಷದ ಮಹಿಳೆ, 26 ವರ್ಷದ ಮಹಿಳೆ, ಶಿವಾಜಿನಗರ ಮೊದಲ ಕ್ರಾಸ್​ನ ನಿವಾಸಿ 6 ವರ್ಷದ ಬಾಲಕ, 32 ವರ್ಷದ ಮಹಿಳೆ, 35 ವರ್ಷದ ಮಹಿಳೆ, 65 ವರ್ಷದ ಮಹಿಳೆ, 8 ವರ್ಷದ ಬಾಲಕ, 4 ವರ್ಷದ ಬಾಲಕ ಹಾಗೂ ಐಎಲ್​ಐ ಲಕ್ಷಣ ಹೊಂದಿದ ರಾಣೆಬೆನ್ನೂರಿನ ಮಾರುತಿ ನಗರದ ನಿವಾಸಿ 26 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

    ಕೆನರಾ ಬ್ಯಾಂಕ್ ಉದ್ಯೋಗಿ 33 ವರ್ಷದ ಪುರುಷ ಲಕ್ಷೆ್ಮೕಶ್ವರದಿಂದ ಹಾವೇರಿಗೆ ಬಂದಿದ್ದರು. ರ್ಯಾಪಿಟ್ ಆಂಟಿಗೇನ್ ಕಿಟ್ ಮೂಲಕ ಜು. 14ರಂದು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದೆ. ಶಿವಾಜಿನಗರ ಹಾಗೂ ಮೆಹಬೂಬ ನಗರದ ಮೂರು ಜನರಿಗೂ ಹಿಂದಿನ ಸೋಂಕಿತರ ಸಂಪರ್ಕದಿಂದ ಪಾಸಿಟಿವ್ ಬಂದಿದೆ. ಮೆಹಬೂಬ್ ನಗರದವರು ಒಂದೇ ಕುಟುಂಬದವರಾಗಿದ್ದಾರೆ. ಇವರ ತಂದೆ ಅನ್ಯ ಕಾಯಿಲೆಯಿಂದ ಧಾರವಾಡ ಎಸ್​ಡಿಎಂಸಿಗೆ ದಾಖಲಾಗಿದ್ದರು. ಅಲ್ಲಿಯೇ ಸ್ವ್ಯಾಬ್ ಟೆಸ್ಟ್ ನಡೆಸಿದಾಗ ಪಾಸಿಟಿವ್ ಬಂದಿತ್ತು. ಅಲ್ಲದೆ, ಅವರು ಜು. 14ರಂದು ಮೃತಪಟ್ಟಿದ್ದಾರೆ. ಶಿವಬಸವ ನಗರದ ಏಳು ಜನ ಸೋಂಕಿತರು ಹಿಂದಿನ ಸೋಂಕಿತರ ಸಂರ್ಪತರಾಗಿದ್ದಾರೆ. ರಾಣೆಬೆನ್ನೂರ ಮಾರುತಿ ನಗರದ ನಿವಾಸಿಗೆ ಐಎಲ್​ಐ ಲಕ್ಷಣದಿಂದ ಪಾಸಿಟಿವ್ ಬಂದಿದೆ.

    33 ಜನ ಬಿಡುಗಡೆ: ಗುರುವಾರ ಜಿಲ್ಲೆಯ ಹಾವೇರಿ ತಾಲೂಕಿನ 14, ಶಿಗ್ಗಾಂವಿ ತಾಲೂಕಿನ 6, ಬ್ಯಾಡಗಿ ಹಾಗೂ ಹಾನಗಲ್ಲ ತಾಲೂಕಿನ ತಲಾ ನಾಲ್ವರು, ಸವಣೂರ ತಾಲೂಕಿನ ಮೂವರು, ಹಿರೇಕೆರೂರ ತಾಲೂಕಿನ ಇಬ್ಬರು ಕರೊನಾದಿಂದ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

    ಕರೊನಾ ಹಾಟ್​ಸ್ಪಾಟ್ ಆಗುತ್ತಿರುವ ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರ ಹಾಗೂ ಹಾವೇರಿ ತಾಲೂಕಿನಲ್ಲಿ ಜೂ. 5ರವರೆಗೆ ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಜೂ. 6ರಿಂದ ಜು. 16ರವರೆಗೆ 40 ದಿನಗಳ ಅವಧಿಯಲ್ಲಿ ಒಟ್ಟು 78ಜನರಿಗೆ ಸೋಂಕು ತಗುಲಿದೆ. ಅದರಲ್ಲಿಯೂ ಇತ್ತೀಚೆಗೆ ಕಳೆದೊಂದು ವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಕಂಡುಬಂದಿದ್ದಾರೆ. 78 ಸೋಂಕಿತರಲ್ಲಿ ಒಟ್ಟು 36 ಜನ ಈವರೆಗೆ ಗುಣವಾಗಿದ್ದು, ಇನ್ನೂ 40 ಸಕ್ರಿಯ ಪ್ರಕರಣಗಳಿವೆ. ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಮೊದಲ ಬಾರಿಗೆ ಜಿಲ್ಲೆಯಲ್ಲಿ ಕರೊನಾ ಹಾಟ್​ಸ್ಪಾಟ್ ಎನ್ನಿಸಿದ್ದ ಶಿಗ್ಗಾಂವಿಯಲ್ಲಿ ಈವರೆಗೆ ಒಟ್ಟು 85 ಜನರಿಗೆ ಪಾಸಿಟಿವ್ ಬಂದಿದೆ. ಆದರೆ, ಅದರಲ್ಲಿ ಈಗಾಗಲೇ 73 ಜನ ಗುಣವಾಗಿ ಬಿಡುಗಡೆಯಾಗಿದ್ದು, 9 ಮಾತ್ರ ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಅತಿಹೆಚ್ಚು ಸಕ್ರಿಯ ಪ್ರಕರಣಗಳಿರುವುದು ಹಾವೇರಿ ತಾಲೂಕಿನಲ್ಲಿ ಮಾತ್ರ. ಅದರಲ್ಲಿಯೂ ಗುರುವಾರ 11 ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ ಹಾವೇರಿ ತಾಲೂಕು ದಿನದಿಂದ ದಿನಕ್ಕೆ ಕರೊನಾ ಹಾಟ್​ಸ್ಪಾಟ್ ಆಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts