More

    ಹೆಚ್ಚುತ್ತಿದೆ ಮೊಬೈಲ್ ಕಳ್ಳರ ಹಾವಳಿ

    ಬೇಲೂರು: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮೊಬೈಲ್ ಕಳ್ಳರ ಹಾವಳಿಯಿಂದಾಗಿ ನಿತ್ಯ ಸ್ಮಾರ್ಟ್‌ಫೋನ್‌ಗಳ ಕಳ್ಳತನ ಹೆಚ್ಚಾಗುತ್ತಿದ್ದು, ಕಡಿವಾಣ ಹಾಕುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.

    ಪಟ್ಟಣದಲ್ಲಿರುವ ಬೇಲೂರು ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ನಿತ್ಯ ಸಾವಿರಾರು ಪ್ರವಾಸಿಗರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಂದು ಹೋಗುತ್ತಾರೆ. ಆದರೆ ಬಸ್‌ನಲ್ಲಿ ಬಂದು ಹೋಗುವ ಪ್ರಯಾಣಿಕರು ಬಸ್ ಅನ್ನು ಹತ್ತಿ ಇಳಿಯುವಾಗ ಮೊಬೈಲ್ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ.

    ಸತತ ರಜೆ ದಿನಗಳಲ್ಲಂತೂ ಬೇಲೂರಿಗೆ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿರುತ್ತದೆ. ಜತೆಗೆ ಶನಿವಾರ, ಭಾನುವಾರದಂದು ಶುಭ ಸಮಾರಂಭಗಳಿಗಾಗಿ ಬಸ್‌ನಲ್ಲಿ ಬಂದು ಹೋಗುವವರು ಹೆಚ್ಚಾಗಿರುತ್ತಾರೆ. ಪ್ರಯಾಣಿಕರು ಹೆಚ್ಚಾಗಿರುವ ಈ ಸಂದರ್ಭವನ್ನು ನಾಜೂಕಾಗಿ ಬಳಸಿಕೊಳ್ಳುತ್ತಿರುವ ಮೊಬೈಲ್ ಕಳ್ಳರು, ಐದರಿಂದ ಆರಕ್ಕೂ ಹೆಚ್ಚು ಮೊಬೈಲ್‌ಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ. ಬೇಲೂರು ಬಸ್ ನಿಲ್ದಾಣದಲ್ಲಿ ಒಬ್ಬ ಗೃಹರಕ್ಷಕ ಇಲ್ಲ. ನಿಲ್ದಾಣದಲ್ಲಿ ಅಲ್ಲೊಂದು ಇಲ್ಲೊಂದು ಸಿಸಿ ಕ್ಯಾಮರಾ ಬಿಟ್ಟರೆ ಕಳ್ಳರನ್ನು ಪತ್ತೆ ಹಚ್ಚುವಂತಹ ಗುಣಮಟ್ಟದ ಕ್ಯಾಮರಾಗಳು ಇಲ್ಲ.

    ಮೊಬೈಲ್ ಫೋನ್ ಕಳೆದುಕೊಂಡವರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡುತ್ತಿದ್ದರಾದರೂ ಈ ಪೈಕಿ ಕೆಲವನ್ನು ಪತ್ತೆ ಹಚ್ಚಲಾಗಿದೆ. ಇನ್ನುಳಿದಂತೆ ಕಳ್ಳರ ಗುರುತು ಸಿಗುತ್ತಿಲ್ಲ. ಇತ್ತೀಚೆಗೆ ತಾಲೂಕಿನ ಎಂಬಿಎ ವಿದ್ಯಾರ್ಥಿನಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ಸಂದರ್ಭ ಕಳ್ಳರ ಗುಂಪು ಜೇಬಿನಲ್ಲಿದ್ದ ಫೋನ್ ಕಳ್ಳತನ ಮಾಡಿದೆ. ಇದಕ್ಕಾಗಿ ಮೂವರು ಹೊಂಚು ಹಾಕುತ್ತಿದ್ದ ದೃಶ್ಯ ಬಸ್ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಅಂತೆಯೇ ಲಾಕ್ ಹಾಗಿದ್ದ ಯುವತಿಯ ಸ್ಮಾರ್ಟ್‌ಫೋನ್‌ನಿಂದ ಐದು ಸಾವಿರ ರೂ., ಅನ್ನು ಮತ್ತೊಂದು ನಂಬರ್‌ಗೆ ಕಳುಹಿಸಿಕೊಂಡಿದ್ದು, ಬೇಲೂರು ಠಾಣೆಯಲ್ಲಿ ದೂರು ನೀಡಿ ಎಂಟು ದಿನ ಕಳೆದಿದೆ. ಆದರೂ ಪೊಲೀಸ್ ಯಾವುದೇ ಕ್ರಮ ಕೈಗೊಂಡಿಲ್ಲ.

    ದೇಗುಲದ ಹೊಳ, ಹೊರ ಭಾಗ ಮತ್ತು ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ, ಬಸ್‌ಗಳು ನಿಲ್ಲುವ ಮತ್ತು ಪ್ರಯಾಣಿಕರು ಬಸ್ ಹತ್ತಿಳಿಯುವ ಸ್ಥಳಗಳಲ್ಲಿ ಗುಣಮಟ್ಟದ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಜತೆಗೆ ಮೊಬೈಲ್ ಹಾಗೂ ಸರಗಳ್ಳರ ಮೇಲೆ ನಿಗಾ ವಹಿಸಲು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಮಫ್ತಿಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕು. ಅರ್ಧ ಗಂಟೆಗೊಮ್ಮೆ ಪೊಲೀಸ್ ವಾಹನ ಬಸ್ ನಿಲ್ದಾಣದೊಳಕ್ಕೆ ಬಂದು ಅನುಮಾನವಿದ್ದವರನ್ನು ವಿಚಾರಣೆಗೆ ಒಳಪಡಿಸಿದರೆ ಸಾಧ್ಯವಾದಷ್ಟು ಮೊಬೈಲ್ ಹಾಗೂ ಸರಗಳ್ಳತನಕ್ಕೆ ಕಡಿವಾಣ ಹಾಕಬಹುದು ಎಂಬುದು ಸಾರ್ವಜನಿಕ ವಲಯದ ಮಾತು.

    ಪ್ರಯಾಣಿಕರ ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ವಿಭಾಗಿಯ ನಿಯಂತ್ರಣಾಧಿಕಾರಿ, ಡಿಪೋ ವ್ಯವಸ್ಥಾಪಕರು, ಪೊಲೀಸ್ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ ಕಳ್ಳರನ್ನು ಹಿಡಿದು ಹೆಡೆ ಮುರಿ ಕಟ್ಟಿದರೆ ಕಳ್ಳತನಗಳನ್ನು ತಡೆಗಟ್ಟಬಹುದು. ಇನ್ನಾದರೂ ಕೆಎಸ್‌ಆರ್‌ಟಿಸಿ ಮತ್ತು ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಎಚ್ಚರಿಕೆ ವಹಿಸಲಿ ಎಂಬುದು ನಾಗರಿಕರ ಆಗ್ರಹ.

    ಬೇಲೂರಿನಿಂದ ಬೆಂಗಳೂರಿಗೆ ತೆರಳಲು ಬಸ್ ಹತ್ತುತ್ತಿದ್ದಾಗ ಕಳ್ಳರು ನನ್ನ ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಫೋನ್ ಕದ್ದಿದ್ದಾರೆ. ಫೋನ್‌ನಲ್ಲಿ ನನ್ನ ಎಂಬಿಎ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಮೊಬೈಲ್ ಕದ್ದ ಕೆಲವೇ ಗಂಟೆಗಳಲ್ಲಿ ಫೋನ್ ಪೇನಲ್ಲಿದ್ದ 5 ಸಾವಿರ ಹಣವನ್ನೂ ಟ್ರಾನ್ಸ್‌ಫರ್ ಮಾಡಿಕೊಂಡಿದ್ದಾರೆ. ಹಣ ಹೋದರೂ ಪರವಾಗಿಲ್ಲ. ದಾಖಲೆಗಳಿರುವ ಫೋನ್ ಬೇಕಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ.
    ಅನನ್ಯಾ ಎಂಬಿಎ ವಿದ್ಯಾರ್ಥಿನಿ ಅಡಮನಹಳ್ಳಿ ಬೇಲೂರು ತಾಲೂಕು (ಫೋನ್ ಕಳೆದುಕೊಂಡವರು)

    ಬೇಲೂರು ಬಸ್ ನಿಲ್ದಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಬಸ್ ಹತ್ತುವಾಗ ಮತ್ತು ಇಳಿಯುವಾಗ ಮೊಬೈಲ್ ಕಳ್ಳತನ ಪ್ರಕರಣ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಸ್ ಹತ್ತಿಳಿಯುವ ಪ್ರಯಾಣಿಕರನ್ನು ಗಮನಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜತೆಗೆ ನಮ್ಮ ಸಿಬ್ಬಂದಿಯನ್ನೂ ನಿಯೋಜಿಸಿ ಜನರ ಚಲನವಲನ ಗಮನಿಸಲು ತಿಳಿಸಲಾಗಿದೆ. ನಾನು ಸಹ ದಿನದಲ್ಲಿ ಎರಡರಿಂದ ಮೂರು ಬಾರಿ ಬಸ್ ನಿಲ್ದಾಣಕ್ಕೆ ತೆರಳಿ ಪರಿಶೀಲಿಸುತಿದ್ದೇನೆ. ಕಳ್ಳತನವಾಗಿರುವ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
    ಸುಬ್ರಹ್ಮಣ್ಯ ಪೊಲೀಸ್ ಇನ್‌ಸ್ಪೆಕ್ಟರ್, ಬೇಲೂರು ಪೊಲೀಸ್ ಠಾಣೆ

    ಬೇಲೂರು ಡಿಪೋಗೆ ವರ್ಗವಾಗಿ ಬಂದು ನಾಲ್ಕು ದಿನಗಳಾಗಿದೆ. ಇಲ್ಲಿ ಮೊಬೈಲ್ ಕಳ್ಳತನಗಳಾಗುತ್ತಿರುವ ಬಗ್ಗೆ ಮಾಹಿತಿ ಇಲ್ಲ. ನಮ್ಮ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದು ಹೆಚ್ಚಿನ ಸಿಬ್ಬಂದಿ ನೇಮಿಸಿ ಕಳ್ಳರ ಹಾವಳಿ ತಡೆಗಟ್ಟಲು ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.
    ಸಾಧ್ಯ ವ್ಯವಸ್ಥಾಪಕಿ, ಕೆಎಸ್‌ಆರ್‌ಟಿಸಿ ಬಸ್ ಡಿಪೋ ಬೇಲೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts