More

    ಶ್ರೀಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವ ವೈಭವ

    ಬೇಲೂರು: ಶ್ರೀಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವ ಭಕ್ತರ ಸಾಗರದ ನಡುವೆ ಶನಿವಾರ ಶುಭ ಮಿಥುನ ಲಗ್ನದಲ್ಲಿ ವೈಭವದಿಂದ ನೆರವೇರಿತು.

    ಬ್ರಹ್ಮ ರಥೋತ್ಸವದ ಅಂಗವಾಗಿ ಬೆಳಗ್ಗೆ ಶ್ರೀಚನ್ನಕೇಶವಸ್ವಾಮಿ ಉತ್ಸವ ಮೂರ್ತಿಯನ್ನು ದೇಗುಲದ ಅಷ್ಠ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ದೇಗುಲದ ಮುಂಭಾಗದಲ್ಲಿರುವ ಬಾವಿಕಟ್ಟೆ ಸಮೀಪ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ವಿಶೇಷ ಪೂಜೆ ಸಲ್ಲಿಸಿದ ಅರ್ಚಕರು ವೇದ ಘೋಷಗಳನ್ನು ಮೊಳಗಿಸಿದರು. ಉತ್ಸವ ಮೂರ್ತಿಯನ್ನು ರಥದ ಸುತ್ತ ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಕೂರಿಸಲಾಯಿತು.

    ದೇಗುಲದ ಸಂಪ್ರದಾಯದಂತೆ ತಾಲೂಕಿನ ದೊಡ್ಡಮೇದೂರು ಗ್ರಾಮದ ಮುಸ್ಲಿಂ ಧರ್ಮಗುರು ಸಯ್ಯದ್ ಸಜ್ಜದ್ ಭಾಷ ಖಾದ್ರಿ ಅವರು ಬ್ರಹ್ಮ ರಥೋತ್ಸವ ಪ್ರಾರಂಭಕ್ಕೂ ಮುನ್ನ ದೇಗುಲದ ಒಳ ಆವರಣದ ಕಲ್ಯಾಣಿ ಸಮೀಪದ ನೆಲ ಹಾಸಿನ ಮೇಲೆ ನಿಂತು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಗಸದಲ್ಲಿ ಗರುಡ ಪ್ರತ್ಯಕ್ಷವಾಗಿದ್ದನ್ನು ಗಮನಿಸಿದ ಭಕ್ತರು ಗೋವಿಂದ, ಗೋವಿಂದ ಎಂದು ಘೋಷಣೆ ಕೂಗಿದರು. ದೇವಸ್ಥಾನದ ಅರ್ಚಕರು ರಥದಲ್ಲಿ ದೇವರಿಗೆ ಮಹಾ ಮಂಗಳಾರತಿ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ರಥವನ್ನು ಮುಂದೆ ಎಳೆಯುತ್ತಿದ್ದಂತೆ ಭಕ್ತರು ಬಾಳೆಹಣ್ಣು, ಮೆಣಸಿನ ಕಾಳು ಹಾಗೂ ದವನವನ್ನು ಎಸೆದರು. ದೇವಸ್ಥಾನದ ಎಡ ಭಾಗದ ಮೂಲ ಸ್ಥಾನದಿಂದ ಬಲ ಭಾಗದ ಮೋಹಿನಿ ಭಸ್ಮಾಸುರ ಮೂಲೆವರೆಗೆ ರಥವನ್ನು ಎಳೆದು ನಿಲ್ಲಿಸಲಾಯಿತು.

    ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಿಂದ ಆಗಮಿಸಿದ್ದ ಭಕ್ತರಿಗೆ ಬೆಳಗ್ಗಿನಿಂದಲೇ ಶ್ರೀಚನ್ನಕೇಶವಸ್ವಾಮಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಹರಕೆ ತೀರಿಸುವುದಕ್ಕಾಗಿ ರಾತ್ರಿಯೇ ರಾಜ್ಯದ ವಿವಿಧೆೆಡೆಯಿಂದ ಆಗಮಿಸಿದ್ದ ಭಕ್ತರು ಸಮೀಪದ ವಿಷ್ಣು ಸಮುದ್ರ ಕಲ್ಯಾಣಿಯಲ್ಲಿ ಮಿಂದು ದೇವರಿಗೆ ಪೂಜೆ ಸಲ್ಲಿಸಿದರು.

    ಜಿಲ್ಲಾಧಿಕಾರಿ ಸತ್ಯಭಾಮಾ, ಜಿಪಂ ಸಿಒಒ ಪೂರ್ಣಿಮಾ, ತಹಸೀಲ್ದಾರ್ ಎಂ.ಮಮತಾ, ಶಾಸಕ ಎಚ್.ಕೆ.ಸುರೇಶ್, ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಇಒ ಯೋಗೀಶ್, ಡಿವೈಎಸ್‌ಪಿ ಲೋಕೇಶ್.ಜೆ, ಪಿಐ ಸುಬ್ರಹ್ಮಣ್ಯ, ಜಯರಾಂ, ಪಿಎಸ್‌ಐ ಪ್ರವೀಣ್, ಅರ್ಚಕರಾದ ಶ್ರೀನಿವಾಸ ಭಟ್ಟರ್, ಪ್ರಿಯಾ ಭಟ್ಟರ್ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts