More

    ಕೋರೆಗಾಂವ್ ವಿಜಯ ದಲಿತರ ಸ್ವಾಭಿಮಾನದ ಪ್ರತೀಕ

    ಚಿಕ್ಕಮಗಳೂರು: ಪೇಶ್ವೆ ಬಾಜಿರಾವ್ ನಾಯಕತ್ವದ 28 ಸಾವಿರ ಸೈನಿಕರನ್ನು 1818ರ ಜ.1ರಂದು ಕೇವಲ 500 ಮಂದಿ ಮಹರ್ ಸೈನಿಕರು ಸೋಲಿಸಿದ್ದರು. ಇದನ್ನು ಅಸ್ಪಶ್ಯತೆ ವಿರುದ್ಧದ ಮೊದಲ ಸಂಗ್ರಾಮ ಎಂದು ಪರಿಗಣಿಸಲಾಗುತ್ತದೆ. ಇದನ್ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಎನ್ನಲಾಗುತ್ತದೆ ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ತಿಳಿಸಿದರು.

    ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸೋಮವಾರ ದಲಿತ ಸಂಘರ್ಷ ಸಮಿತಿಯಿಂದ ಆಯೋಜಿಸಿದ್ದ ಕೋರೆಗಾಂವ್ ದಿನಾಚರಣೆಯಲ್ಲಿ ಕೇಕ್ ಹಂಚಿ ಸಂಭ್ರಮಾಚರಿಸಿ ಮಾತನಾಡಿದ ಅವರು, ನಾವೆಲ್ಲರೂ ಇಂದು ಸಮಾನತೆಯಿಂದ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಮೂಲ ಕಾರಣ ಅಂಬೇಡ್ಕರ್ ಸಿದ್ಧಾಂತಗಳು ಹಾಗೂ ಭೀಮಾ ಕೋರೆಗಾಂವ್ ಹೋರಾಟ. ಈ ವಿಜಯೋತ್ಸವವನ್ನು ನಾವೆಲ್ಲರೂ ಎಂದೆಂದಿಗೂ ನೆನೆಯಲೇಬೇಕು ಎಂದು ತಿಳಿಸಿದರು.
    ಭೀಮಾ ಕೋರೆಗಾಂವ್ ಕದನ ಲಿತಾಂಶದಿಂದ ಭಾರತದ ಪರಿಶಿಷ್ಟ ಜಾತಿಗಳು ಪೌರಾಣಿಕ ಸ್ಥಾನಮಾನ ಗಳಿಸಿದವು. ಕೋರೆಗಾಂವ್‌ನಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ತಮ್ಮ ಪರವಾಗಿ ಹೋರಾಡಿದ ಮಹರ್ ಸಮುದಾಯದವರ ಸ್ಮರಣಾರ್ಥ ವಿಜಯಸ್ತಂಭವನ್ನು ಸ್ಥಾಪಿಸಿದೆ ಎಂದರು.
    ಡಿಎಸ್‌ಎಸ್ ಮುಖಂಡ ಕಬ್ಬಿಕೆರೆ ಮೋಹನ್‌ಕುಮಾರ್ ಮಾತನಾಡಿ, ಭೀಮಾ ಕೋರೆಗಾಂವ್ ಯುದ್ಧದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಗೆದ್ದಿತು. ಅಸೃಶ್ಯತೆ ವಿರುದ್ಧ ದನಿಯೆತ್ತಿದ ಮಹರ್ ಸಮುದಾಯದ ಜನರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಸೇರಿ ಪೇಶ್ವೆಗಳ ವಿರುದ್ಧ ಹೋರಾಡುವ ಮೂಲಕ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ ಎಂದು ತಿಳಿಸಿದರು.
    ಕೋರೆಗಾಂವ್ ಕದನ ಭಾರತದ ಇತಿಹಾಸದಲ್ಲೇ ಮಹತ್ವದ ಸ್ಥಾನ ಪಡೆದಿದೆ. ದಲಿತರ ಆತ್ಮಗೌರವ ಹಾಗೂ ಹಕ್ಕುಗಳಿಗೆ ತಳುಕು ಹಾಕಿಕೊಂಡ ಸ್ಥಳವಿದು. ಮಹರ್ ಸಮುದಾಯದ ಹೋರಾಟಗಾರರು ಆಹಾರ, ನೀರು ಹಾಗೂ ವಿಶ್ರಾಂತಿಯಿಲ್ಲದೆ ಪೇಶ್ವೆಗಳ ಸೈನ್ಯದ ವಿರುದ್ಧ ನಿರಂತರ 12 ತಾಸು ಕಾದಾಡಿದ ಸ್ಮರಣೀಯ ಕದನವಿದು ಎಂದರು.
    ಬಿಎಸ್‌ಪಿ ಮುಖಂಡರಾದ ಕೆ.ಟಿ.ಸುಧಾ, ಗಂಗಾಧರ್, ಪ್ರಮುಖರಾದ ಎಂ.ಎಲ್.ಮೂರ್ತಿ, ರಘು, ರೇಣುಕಾರಾಧ್ಯ, ಆರದವಳ್ಳಿ ಮೋಹನ್, ಮೂರ್ತಿ, ನಿವೃತ್ತ ಬ್ಯಾಂಕ್ ಅಧಿಕಾರಿ ಚಂದ್ರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts