More

    ಜೆಜೆಎಂ ಯೋಜನೆ ಅವೈಜ್ಞಾನಿಕ

    ತೀರ್ಥಹಳ್ಳಿ: ಜಲಜೀವನ್ ಮಿಷನ್ ಯೋಜನೆಯಡಿ ತಾಲೂಕಿಗೆ ಮಂಜೂರಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿರುದ್ಧ ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರು ಇದೀಗ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ. ಮತ ಕೇಳಲು ಬರುವ ರಾಜಕಾರಣಿಗಳಿಗೆ ಹಿಡಿಕುಂಟೆ (ಪೊರಕೆ) ಸೇವೆ ಮಾಡುವುದಾಗಿ ಹಾಕಿರುವ ಬ್ಯಾನರ್ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಉದ್ದೇಶಿತ ಯೋಜನೆ ಅವೈಜ್ಞಾನಿಕವಾಗಿದೆ ಎಂಬ ಕಾರಣಕ್ಕೆ ಈ ಯೋಜನೆಯನ್ನು ವಿರೋಧಿಸಿ ಕೋಡ್ಲು ಗ್ರಾಮದಲ್ಲಿ 24 ದಿನಗಳಿಂದ ನಿರಂತರವಾಗಿ ಧರಣಿ ನಡೆಸಲಾಗುತ್ತಿದೆ. ಸ್ಥಳದಲ್ಲೇ ಗಂಜಿ ಬೇಯಿಸಿಕೊಂಡು ಸೇವಿಸಲಾಗುತ್ತಿದೆ. ಎರಡು ದಿನಗಳ ಹಿಂದೆ ಮತದಾನ ಬಹಿಷ್ಕಾರ ಕುರಿತು ಗ್ರಾಮದಲ್ಲಿ ಹಾಕಲಾಗಿದ್ದ ಬ್ಯಾನರ್‌ಗಳನ್ನು ಪೊಲೀಸರ ಮೂಲಕ ತೆರವುಗೊಳಿಸಿರುವ ಬಗ್ಗೆಯೂ ಆಕ್ರೋಶ ಹೊರಹಾಕಿದ್ದಾರೆ.
    ಕಾರ್ಪೋರೇಟ್ ಕಂಪನಿಗಳ ಹಿತರಕ್ಷಣೆ ದೃಷ್ಟಿಯಿಂದ, ಜಲಮೂಲಗಳ ಮೇಲಿನ ಜನಸಾಮಾನ್ಯರ ಹಕ್ಕನ್ನು ಕಸಿದುಕೊಂಡು 344 ಕೋಟಿ ರೂ. ವೆಚ್ಚದ ಈ ಅವೈಜ್ಞಾನಿಕ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂಬುದು ಪ್ರತಿಭಟನಾಕಾರರ ಆರೋಪ.
    ರಾಜಕಾರಣಿಗಳಿಗೆ ಜನಸಾಮಾನ್ಯರು ಎಂದರೆ ಮೋಸದ ಮಾತನ್ನು ನಂಬಿ ಮತ ನೀಡುವವರು ಎಂದೇ ಭಾವಿಸಿದ್ದಾರೆ. ಇದೇ ನಂಬಿಕೆಯಲ್ಲಿ ಬ್ಯಾನರ್‌ಗಳನ್ನು ತೆರವುಗೊಳಿಸಿದಂತೆ ಪೊಲೀಸ್ ಬಲ ಬಳಸಿ ನಮ್ಮನ್ನು ಮತಗಟ್ಟೆಗೆ ಎಳೆದೊಯ್ಯುತ್ತಾರಾ ಎಂದೂ ಕಾಯುತ್ತಿದ್ದೇವೆ. ಜನತಂತ್ರ ವ್ಯವಸ್ಥೆಯಲ್ಲಿ ಸರ್ಕಾರಕ್ಕೆ ಕರ್ತವ್ಯದ ಹೊಣೆಯನ್ನು ಮಾತ್ರ ನೀಡಲಾಗಿದೆ ಎಂಬುದನ್ನು ಅಧಿಕಾರಿಗಳು ಅರಿಯಬೇಕಿದೆ ಎಂದೂ ಜಾಲತಾಣದಲ್ಲಿ ಹಾಕಿರುವ ಸಂದೇಶದಲ್ಲಿ ಹೇಳಲಾಗಿದೆ.
    ಪ್ರತಿಭಟನಾಕಾರ ಕೋಡ್ಲು ವೆಂಕಟೇಶ್ ಮಾತನಾಡಿ, ಯೋಜನೆಗಾಗಿ ನೀರೆತ್ತುವ ಸ್ಥಳ ಬದಲಾವಣೆ ನಿರ್ಧಾರದ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ. ಮಾ.26ರವರೆಗೆ ಧರಣಿ ಮುಂದುವರಿಯಲಿದೆ. ನಂತರ ಪಾದಯಾತ್ರೆಯಲ್ಲಿ ಬಂದು ಮತದಾನ ಬಹಿಷ್ಕಾರ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ನೀಡುತ್ತೇವೆ. ತುಂಗಾ, ಮಾಲತಿ ನದಿದಡದ ಪ್ರತಿ ಮನೆಗಳಿಗೆ ತೆರಳಿ ಮತದಾನ ಬಹಿಷ್ಕರಿಸುವಂತೆ ಮನವಿ ಮಾಡುತ್ತೇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts