More

    ವಾತಾವರಣ ಸಂರಕ್ಷಿಸಲು ವಿದ್ಯಾವಂತರು ಮುಂದಾಗುವಂತೆ ಸಚಿವ ಎಂ.ಸಿ.ಸುಧಾಕರ ಕರೆ

    ಬೆಂಗಳೂರು: ಕೈಗಾರಿಕರಣ ಮತ್ತು ಆಧುನಿಕ ಜೀವನ ಶೈಲಿಯ ದುಷ್ಪರಿಣಾಮಗಳನ್ನು ನಿಯಂತ್ರಿಸುವ ಮೂಲಕ ಮುಂದಿನ ಪೀಳಿಗೆಗೆ ಸುರಕ್ಷಿತ ವಾತಾವರಣ ಕಲ್ಪಿಸಲು ವಿಶ್ವದ ವಿದ್ಯಾವಂತ ಸಮುದಾಯ ಮುಂದಾಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ ಕರೆ ನೀಡಿದ್ದಾರೆ. ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜ್ಞಾನಜ್ಯೋತಿ ಸಮಾಂಗಣದಲ್ಲಿ ಆಯೋಜಿಸಿದ್ದ ಶೂನ್ಯ ಇಂಗಾಲ ಸೂಸುವಿಕೆ ಮತ್ತು ಡಿಜಿಟಲ್ ರೂಪಾಂತರ ದ್ವಿಮುಖ ಪರಿವರ್ತನೆ ಕುರಿತ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಜಾಗತೀಕರಣದ ಪೈಪೋಟಿಯಿಂದಾಗಿ ಜಾಗತಿಕ ತಾಪಮಾನ ಏರಿಕೆ ಮತ್ತು ವಾಯುಮಾಲಿನ್ಯ ಸಮಸ್ಯೆಗಳು ಹಿಂದೆಂದಿಗಿಂತಲೂ ಅತ್ಯಂತ ಗಂಭೀರ ಸ್ವರೂಪ ಪಡೆದುಕೊಂಡಿದ್ದು ಶೂನ್ಯ ಇಂಗಾಲ ಸೂಸುವಿಕೆಯ ಅಂತಾರಾಷ್ಟ್ರೀಯ ಗುರಿ ಸಾಧನೆಗೆ ಭಾರತವೂ ಕೈಜೋಡಿಸಬೇಕಿದೆ.

    ಬೆಂಗಳೂರು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಮುಂಚೂಣಿಯಲ್ಲಿದ್ದು, ಕೈಗಾರಿಕೆಗಳು ಮತ್ತು ವಾಹನ ದಟ್ಟಣೆಯಿಂದಾಗಿ ದಿನೇ ದಿನೇ ಹೆಚ್ಚುತ್ತಿರುವ ಮಾಲಿನ್ಯದ ಪ್ರಮಾಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ವಿಚಾರಸಂಕಿರಣ ಸೂಕ್ತ ಮಾರ್ಗೋಪಾಯ ಸೂಚಿಸುವ ನಿರೀಕ್ಷೆ ಇದೆ ಎಂದರು.

    ಸಮಾರಂಭದಲ್ಲಿ ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾಲಯದ ನಿರ್ದೇಶಕರಾದ ಪ್ರೊ. ಅಲೆಕ್ಸ್ ಡೆ ರೂಯ್ಟೆರ್, ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಲಿಂಗರಾಜ ಗಾಂಧಿ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕೆ.ಜಿ ಚಂದ್ರಶೇಖರ್, ಎ್ಕೆಸಿಸಿಐ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ, ಡಾ. ತಾಂಡವಗೌಡ ಮತ್ತಿತರರು ಉಪಸ್ಥಿತರಿದ್ದರು.

    ವಿವಿಧ ವಿಷಯಗಳ ಕುರಿತಂತೆ ನಡೆದ ಗೋಷ್ಠಿಗಳಲ್ಲಿ ಸಮ್ಮೇಳನದ ಆಶಯಗಳ ಕುರಿತು ಚಿಂತನ-ಮಂಥನ ನಡೆಯಿತು. ವಿವಿಧೆಡೆಗಳಿಂದ ಆಗಮಿಸಿದ್ದ ವಿಷಯ ಪರಿಣಿತರು ಮತ್ತು ಉದ್ಯಮ ವಲಯದ ಪ್ರಮುಖರು ಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದರು.

    ಪರ್ಯಾಯ ಇಂಧನ ಪರಿಹಾರ: ಜಗತ್ತಿನ ಒಟ್ಟು ಇಂಗಾಲ ಸೂಸುವಿಕೆಯಲ್ಲಿ ಚೀನಾ, ಭಾರತ ಮತ್ತು ಅಮೆರಿಕಾ ಸದ್ಯ ಅರ್ಧಕ್ಕೂ ಹೆಚ್ಚು ಸಿಂಹಾಪಾಲನ್ನು ಹೊಂದಿದ್ದು 2050ರ ವೇಳೆಗೆ ಶೂನ್ಯ ಮಟ್ಟಕ್ಕೆ ತಲುಪುವ ಗುರಿಯತ್ತ ಗಮನಹರಿಸಬೇಕಿದ್ದು, ಪರ್ಯಾಯ ಇಂಧನ ಮೂಲಗಳ ಬಗ್ಗೆ ಹೆಚ್ಚು ಪರಿಶೋಧನೆ ಮಾಡುವ ಅವಶ್ಯಕತೆಯಿದೆ ಎಂದು ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾಲಯದ ನಿರ್ದೇಶಕರಾದ ಪ್ರೊ. ಅಲೆಕ್ಸ್ ಡೆ ರೂಯ್ಟೆರ್ ಅಭಿಪ್ರಾಯಪಟ್ಟರು.

    ಸಂಪನ್ಮೂಲಗಳ ಮರುಬಳಕೆ ಮಾಡಬೇಕು : ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಸಹಭಾಗಿತ್ವ ಗುಣಮಟ್ಟದ ಅಭಿವೃದ್ಧಿಗೆ ಪೂರಕವಾಗಿದ್ದು, ಸಂಪನ್ಮೂಲ ಪೋಲಾಗುವುದನ್ನು ತಡೆಗಟ್ಟಿ ಆದಷ್ಟೂ ಮರುಬಳಕೆ ಮಾಡುವುದರಿಂದ ಪರಿಸರ ಸಂರಕ್ಷಣೆ ಸಾಧ್ಯ ಎಂದು ಟೊಯೋಟಾ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸಂತೋಷ ರಾವ್ ತಿಳಿಸಿದರು.

    ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನದಿಗಳ ಪುನರುಜ್ಜೀವನ ಮತ್ತು ಗಿಡಮರಗಳ ಪೋಷಣೆ ಮೂಲಕ ಅಂತರ್ಜಲ ಅಭಿವೃದ್ಧಿಗೆ ತಮ್ಮ ಸಂಸ್ಥೆ ಸಾಮಾಜಿಕ ಜವಾಬ್ದಾರಿಯ ಯೋಜನೆ ಹಮ್ಮಿಕೊಂಡಿರುವುದಾಗಿ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts