More

    ಪಡಿತರ ಫಲಾನುಭವಿಗಳ ಗೋಳು!

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ತಾಲೂಕಿನಲ್ಲಿ ನ್ಯಾಯ ಬೆಲೆ ಅಂಗಡಿಕಾರರು ಸಮರ್ಪಕವಾಗಿ ಅಂಗಡಿ ತೆರೆಯದಿರುವುದು ಹಾಗೂ ಸರ್ಕಾರದ ನಿಯಮ ಪಾಲನೆ ಮಾಡದಿರುವುದರಿಂದ ಪಡಿತರ ಪಡೆಯಲು ಸಾರ್ವಜನಿಕರು ಪರದಾಡುವಂತಾಗಿದೆ.

    ನಗರ ಹಾಗೂ ತಾಲೂಕಿನಲ್ಲಿ ಬಿಪಿಎಲ್, ಅಂತ್ಯೋದಯ ಸೇರಿ 76,742 ಪಡಿತರ ಚೀಟಿಗಳಿವೆ. ಪಡಿತರ ವಿತರಣೆಗಾಗಿ 101 ಅಂಗಡಿಗಳಿಗೆ ಪರವಾನಗಿ ನೀಡಲಾಗಿದೆ. ಆದರೆ, ಅಂಗಡಿ ಕಾರರು ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರುತ್ತಿರುವುದರಿಂದ ಫಲಾನು ಭವಿಗಳಿಗೆ ತೊಂದರೆಯಾಗುತ್ತಿದೆ.

    ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಹಾಗೂ ಸಂಜೆ 4ರಿಂದ 7.30ರವರೆಗೆ ತೆರೆದಿರಬೇಕು ಹಾಗೂ ತಿಂಗಳು ಪೂರ್ತಿ ಪಡಿತರ ನೀಡಬೇಕು ಎಂದು ನಿಯಮವಿದೆ. ಆದರೆ, ಅಂಗಡಿಕಾರರು ‘ಇನ್ನೂ ಪಡಿತರ ಬಂದಿಲ್ಲ. ಬಂದಿರುವ ಪಡಿತರ ಖಾಲಿಯಾಗಿದೆ. ಮತ್ತೆ ಬರಬೇಕು. ಪಡಿತರ ತರುವ ವಾಹನಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ’ ಎಂಬ ಕುಂಟು ನೆಪಗಳನ್ನು ಹೇಳಿ ಫಲಾನುಭವಿಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ. ಅಲ್ಲದೆ, ತಿಂಗಳಲ್ಲಿ ನಾಲ್ಕೈದು ದಿನ ಅಂಗಡಿ ತೆರೆದು ಬಾಕಿ ದಿನ ಸಂಪೂರ್ಣ ಬಂದ್ ಮಾಡುತ್ತಿದ್ದಾರೆ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ.

    ನ್ಯಾಯ ಬೆಲೆ ಅಂಗಡಿಗಳ ಮುಂದೆ ಪಡಿತರ ಪ್ರಮಾಣವನ್ನು ಕಡ್ಡಾಯವಾಗಿ ಪ್ರಕಟಿಸಬೇಕು. ಪಡಿತರೇತರ ಪದಾರ್ಥ ಗಳನ್ನು ಮಾರಾಟ ಮಾಡುವಂತಿಲ್ಲ ಎಂಬ ನಿಯಮವಿದೆ. ಆದರೆ, ಈ ಎಲ್ಲ ನಿಯಮಗಳು ನಗರ ಹಾಗೂ ತಾಲೂಕಿನ ಬೆರಳೆಣಿಕೆಯಷ್ಟು ನ್ಯಾಯ ಬೆಲೆ ಅಂಗಡಿಗಳಲ್ಲಿ ಮಾತ್ರ ಕಂಡು ಬರುತ್ತಿದೆ.

    ಬೇಸತ್ತು ಹೋದ ಫಲಾನುಭವಿಗಳು: ಪಡಿತರ ಪಡೆದುಕೊಳ್ಳುವವರಲ್ಲಿ ಬಹುತೇಕರು ಕೂಲಿ ಕೆಲಸ ಹಾಗೂ ಕೃಷಿ ಕಾರ್ಯವನ್ನೇ ಅವಲಂಬಿಸಿದ ವರಾಗಿದ್ದಾರೆ. ನಿತ್ಯವೂ ಕೂಲಿ ಮಾಡಿಯೇ ಜೀವನ ನಡೆಸಬೇಕು. ಆದರೆ, ಪಡಿತರ ಬಂದಿದೆ ಎಂಬ ಸುದ್ದಿ ಬಂದ ಬಳಿಕ ವಾರಗಟ್ಟಲೆ ನ್ಯಾಯಬೆಲೆ ಅಂಗಡಿಗೆ ಅಲೆದಾಡಬೇಕು. ಇಲ್ಲವಾದರೆ ಆ ತಿಂಗಳ ಪಡಿತರ ದೊರೆಯುವುದಿಲ್ಲ. ಆದ್ದರಿಂದ ಎಷ್ಟೋ ಫಲಾನುಭವಿಗಳಿಗೆ ತಿಂಗಳ ಮೊದಲಿಗೆ ದೊರೆಯಬೇಕಾದ ಪಡಿತರ ಕೊನೆ ದಿನದಲ್ಲಿ ಸಿಕ್ಕರೆ ಅದೃಷ್ಟ ಎನ್ನುವಂತಾಗಿದೆ.

    ಕಳಪೆ ಜೋಳ ಹಂಚಿಕೆ: ಕಳೆದ ಎರಡು ದಿನದ ಹಿಂದೆ ನಗರದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಕಳಪೆ ಜೋಳ ವಿತರಣೆ ಮಾಡಲಾಗಿತ್ತು. ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಕಳಪೆ ಜೋಳ ನೀಡಿದ್ದನ್ನು ಪ್ರಶ್ನಿಸಿದ ಫಲಾನುಭವಿಗೆ ನ್ಯಾಯಬೆಲೆ ಅಂಗಡಿ ಮಾಲೀಕ ಹೊಡೆಯಲು ಮುಂದಾಗಿರುವ ದೃಶ್ಯಾವಳಿ ಸೆರೆಯಾಗಿದೆ.

    ನ್ಯಾಯ ಬೆಲೆ ಅಂಗಡಿಗಳಲ್ಲಿ ನಿಗದಿತ ಅವಧಿಯಲ್ಲಿ ಪಡಿತರ ನೀಡಿದರೆ, ನಮ್ಮ ಮುಂದಿನ ಕೆಲಸ ಕಾರ್ಯಗಳಿಗೆ ಅನುಕೂಲವಾಗುತ್ತದೆ. ಆದರೆ, ಕೆಲವರು ಪಡಿತರ ಬಂದು ವಾರ ಕಳೆದರೂ ವಿತರಣೆ ಮಾಡುವುದಿಲ್ಲ. ಕೇಳಿದರೆ, ‘ನನಗೆ ಸಮಯವಿದ್ದಾಗ ಕೊಡುತ್ತೇನೆ. ಬೇಕಾದರೆ ಆವಾಗ ಬಂದು ತೆಗೆದುಕೊಳ್ಳಿ’ ಎಂದು ಖಡಾಖಂಡಿತವಾಗಿ ಹೇಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.

    | ಮಹೇಶ ಎನ್., ಪಡಿತರ ಫಲಾನುಭವಿ

    ನ್ಯಾಯಬೆಲೆ ಅಂಗಡಿಯವರು ತಿಂಗಳು ಪೂರ್ಣ ತೆರೆಯಬೇಕು. ಯಾವ ಯಾವ ಅಂಗಡಿ ತೆರೆಯುತ್ತಿಲ್ಲ ಎಂಬ ಬಗ್ಗೆ ಮಾಹಿತಿ ಪಡೆದು ಅವರಿಗೆ ನೋಟಿಸ್ ಜಾರಿ ಮಾಡಲಾಗುವುದು. ಕಳಪೆ ಜೋಳ ವಿತರಣೆ ಮಾಡಿದ ಅಂಗಡಿಯವರಿಗೆ ಸೂಚನೆ ನೀಡಲಾಗಿದೆ. ಫಲಾನುಭವಿಗೆ ವಾಪಸ್ ಗುಣಮಟ್ಟದ ಜೋಳ ನೀಡಲಾಗಿದೆ.

    | ಸ್ವೀವನ್ ಅಂಗಡಿ, ಆಹಾರ ನಿರೀಕ್ಷಕ, ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts