More

    ಎಂ.ಬಿ. ಪಾಟೀಲ ಹೇಳಿಕೆ, ಡಬ್ಬಲ್ ಇಂಜಿನ್ ಸರ್ಕಾರ ಟೋಪಿ ಹಾಕಿದೆ

    ವಿಜಯಪುರ: ಡಬ್ಬಲ್ ಇಂಜಿನ್ ಸರ್ಕಾರ ಪೆಟ್ರೋಲ್ ಮತ್ತು ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸುವ ಮೂಲಕ ಯುವಕರಿಗೆ ಟೋಪಿ ಹಾಕಿದೆ. ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ನೀಡದೇ ಬೆಳೆಗಳ ನಿರ್ವಹಣೆ ವೆಚ್ಚ ಮೂರ್ನಾಲ್ಕು ಪಟ್ಟು ಹೆಚ್ಚು ಮಾಡುವ ಮೂಲಕ ಅನ್ನದಾತರಿಗೂ ಅನ್ಯಾಯ ಮಾಡಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದರು.

    ಬಬಲೇಶ್ವರ ತಾಲೂಕಿನ ಹಂಚಿನಾಳ ಪಿ.ಎಂ, ಮಂಗಳೂರ, ಕೊಡಬಾಗಿ ಮತ್ತು ಮಮದಾಪುರ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡು ಅವರು ಮಾತನಾಡಿದರು.
    ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್ ಬೆಲೆ ಏರಿಕೆ, ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳ ಮಾಡುವ ಮೂಲಕ ಯುವಕರಿಗೆ ಮೊದಲು ಟೋಪಿ ಹಾಕಿದ್ದಾರೆ. ರೂ. 60 ಇದ್ದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಈಗ ರೂ. 100 ದಾಟಿದೆ. ರೂ. 45 ಸಾವಿರ ಇದ್ದ ದ್ವಿಚಕ್ರ ವಾಹನಗಳ ಬೆಲೆ ಈಗ ರೂ. 1 ಲಕ್ಷ ಮೀರಿದೆ.

    ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದ ಪ್ರಧಾನಿ ಕಳೆದ ಒಂಬತ್ತು ವರ್ಷಗಳಲ್ಲಿ 18 ಕೋಟಿ ಉದ್ಯೋಗ ಸೃಷ್ಠಿಸಿಲ್ಲ. ಬದಲಾಗಿ ಈ ಮುಂಚೆಯಿಂದ ಇದ್ದ ಹುದ್ದೆಗಳನ್ನೂ ಭರ್ತಿ ಮಾಡಿಲ್ಲ. ಈ ಮೂಲಕ ಅವರು ತಮ್ಮ ಪರ ಜೈಕಾರ ಹಾಕುವ ಯುವಕರಿಗೆ ನಾನಾ ರೀತಿಯಲ್ಲಿ ಟೋಪಿ ಹಾಕಿದ್ದಾರೆ ಎಂದು ಹೇಳಿದರು.

    ರೈತರನ್ನೂ ಬಿಡದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸುವ ಕೆಲಸ ಮಾಡಿಲ್ಲ. ಬದಲಾಗಿ ಬೆಳೆಗಳ ನಿರ್ವಹಣೆ ವೆಚ್ಚ ಮೂರ್ನಾಲ್ಕು ಪಟ್ಟು ಹೆಚ್ಚಾಗುವಂತೆ ಮಾಡಿದ್ದಾರೆ. ಈ ಮುಂಚೆ ಕ್ವಿಂಟಾಲ್ ಗೆ ರೂ. 2000-3000 ಇದ್ದ ಈರುಳ್ಳಿ ಬೆಲೆ ಈಗ ರೂ. 500ಕ್ಕೆ ಇಳಿದಿದೆ. ಕಬ್ಬಿನ ಬೆಲೆ ಹಿಂದಿನಷ್ಟೇ ಇದೆ. ಈ ಮುಂಚೆ ಪ್ರತಿ ಕೆಜಿಗೆ ರೂ. 200 ಇದ್ದ ಒಣ ದ್ರಾಕ್ಷಿ ಬೆಲೆ ರೂ. 100ಕ್ಕೆ ಇಳಿದಿದೆ. ಕಾಂಗ್ರೆಸ್ ಪ್ರಧಾನಿಗಳಾದ ಪಿ. ವಿ. ನರಸಿಂಹರಾವ ಮತ್ತು ಮನಮೋಹನ್ ಸಿಂಗ್ ರೂಪಿಸಿದ್ದ ಭಾರತದ ಸುಭದ್ರ ಆರ್ಥಿಕತೆಯನ್ನು ನೋಟ್ ಬ್ಯಾನ್ ಮೂಲಕ ಪ್ರಧಾನಿ ಕುಸಿಯುವಂತೆ ಮಾಡಿದ್ದಾರೆ ಎಂದು ಅವರು ಹೇಳಿದರು.

    2013- 2018ರ ವರೆಗೆ ಸಿದ್ಧರಾಮಯ್ಯ ಸರ್ಕಾರ 165ರ ಪೈಕಿ 158 ಭರವಸೆಗಳನ್ನು ಈಡೇರಿಸಿದೆ. 30 ಭರವಸೆಗಳನ್ನು ಹೆಚ್ಚುವರಿಯಾಗಿ ಈಡೇರಿಸಿದ್ದೇವೆ. ಆದರೆ, ಈಗಿನ ಸರ್ಕಾರ ನೀಡಿದ್ದ ಭರವಸೆಗಳಲ್ಲಿ ಶೇ. 10ರಷ್ಟನ್ನೂ ಈಡೇರಿಸಿಲ್ಲ. ತೋಟಗಾರಿಕೆ ಇಲಾಖೆ ಕಳೆದ ನಾಲ್ಕು ವರ್ಷಗಳಿಂದ ರೈತಪರ ಯೋಜನೆಗಳನ್ನು ನಿಲ್ಲಿಸಿವೆ. ಕೃಷಿ ಹೊಂಡ, ಪೈಪ್, ಸ್ಪಿಕ್ಲರ್, ಡ್ರಿಪ್ ಏನೂ ಇಲ್ಲ. ಕೃಷಿ ಇಲಾಖೆ ಕೂಡ ರೈತರಿಗೆ ಅನುಕೂಲಕರ ಯೋಜನೆಗಳನ್ನು ನೀಡಿಲ್ಲ. ಸಿದ್ಧರಾಮಯ್ಯ ಸಿಎಂ ಆಗಿದ್ದಾಗ 15 ಲಕ್ಷ ಮನೆಗಳ ನಿರ್ಮಾಣ ಮಾಡಲಾಗಿತ್ತು. ಬಿಜೆಪಿ ಕಳೆದ ನಾಲ್ಕು ವರ್ಷಗಳಲ್ಲಿ ಒಂದೂ ಮನೆ ಕಟ್ಟಿಲ್ಲ. ಹಳೆಯ ಮನೆಗಳ ಹಣವನ್ನೂ ನೀಡಿಲ್ಲ ಎಂದರು.

    ರಾಜ್ಯ ಬಿಜೆಪಿ ಸರ್ಕಾರ ರೂ. 3.50 ಲಕ್ಷ ಕೋಟಿ ಸಾಲ ಮಾಡಿದೆ. ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ರೂ. 1.20 ಲಕ್ಷ ಕೋಟಿ ಸಾಲ ಇತ್ತು. ಆದರೆ, ಬಿಜೆಪಿ ಅವಧಿಯಲ್ಲಿ ಬಡವರಿಗೆ ಒಂದೂ ಮನೆ ಕಟ್ಟಿಲ್ಲ. ರೈತರಿಗೆ ಕೃಷಿ ಯೋಜನೆ ಮತ್ತು ತೋಟಗಾರಿಕೆ ಯೋಜನೆ ರೂಪಿಸಿಲ್ಲ. ಆದರೂ, ಏತಕ್ಕಾಗಿ ರೂ. 3.50 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಗೊತ್ತಿಲ್ಲ. 40 ಪರ್ಸೆಂಟ್ ಕಮಿಷನ್ ಇವರ ದೊಡ್ಡ ಸಾಧನೆಯಾಗಿದೆ. ಪೇಮೆಂಟ್ ಆಗದೇ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ ಎಂದು ಅವರು ಹೇಳಿದರು.

    ಮುಖಂಡರಾದ ಬಸವರಾಜ ದೇಸಾಯಿ, ಸಂಗಮೇಶ ಬಬಲೇಶ್ವರ, ಹಂಚನಾಳ ಗ್ರಾಮದ ಬಸನಗೌಡ ಬಿರಾದಾರ, ಭೀಮನಗೌಡ ಬಿರಾದಾರ, ಸದಪ್ಪ ಜೋಗೀನ, ಮಲ್ಲಪ್ಪ ಸತ್ತಿಗೇರಿ, ಮಂಗಳೂರ ಗ್ರಾಮದ ಮಲ್ಲಪ್ಪ ಹಂಗರಗಿ, ಭೀಮಪ್ಪ ಗುಡದಿನ್ನಿ, ಸುರೇಶ ಕಮ್ಮಾರ, ಗಂಗಯ್ಯ, ಕೊಡಬಾಗಿ ಗ್ರಾಮದ ಜಿ. ಬಿ. ಹರನಟ್ಟಿ, ಎಚ್.ಬಿ. ಹರನಟ್ಟಿ, ವೆಂಕಟೇಶ ಬಿರಾದಾರ, ಮಹಾದೇವಸ್ವಾಮಿ ಹಿರೇಮಠ, ಮುಖಂಡರಾದ ಕೃಷ್ಣಾ ಕುಲಕರ್ಣಿ, ಲಕ್ಷ್ಮಣ ತೇಲಿ, ಡಾ. ಕೌಸರನಿಯಾಜ್ ಅತ್ತಾರ, ಮಲ್ಲಿಕಾರ್ಜುನ ಗಂಗೂರ, ಚನ್ನಪ್ಪ ಕೊಪ್ಪದ, ಪ್ರಕಾಶ ಸೊನ್ನದ, ಶಂಕರ ಸಿದರೆಡ್ಡಿ, ಮುನ್ನಾ ಗಣಿ, ಮಕ್ಬುಲ್ ಭಾಗವಾನ, ಶಿವನಗೌಡ ಪಾಟೀಲ, ಸುರೇಶ ಕರಿಕಲ್ಲ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts