More

    ಕೈಗಾರಿಕೋದ್ಯಮದ ಅಭಿವೃದ್ಧಿಗೆ ನೂತನ ಸಂಸ್ಥೆ ಸ್ಥಾಪನೆ; ಸಚಿವ ಎಂ.ಬಿ.ಪಾಟೀಲ ಚಿಂತನೆ

    ಬೆಂಗಳೂರು : ರಾಜ್ಯದ ಕೈಗಾರಿಕಾ ವಲಯಕ್ಕೆ ನಿರಂತರ ಬಂಡವಾಳ ಆಕರ್ಷಿಸಲು ಮತ್ತು ಈಗಾಗಲೇ ರಾಜ್ಯದಲ್ಲಿ ಸ್ಥಾಪನೆಯಾಗಿರುವ ಕಂಪನಿಗಳಿಂದ ಮರುಹೂಡಿಕೆ ಉತ್ತೇಜಿಸಲು ಪೂರ್ಣ ಪ್ರಮಾಣದ ನೂತನ ಸಂಸ್ಥೆಯೊಂದನ್ನು ಸ್ಥಾಪಿಸುವ ಬಗ್ಗೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಚಿಂತನ ನಡೆಸಿದ್ದಾರೆ. ಈ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಮಂಗಳವಾರ ಸಮಾಲೋಚನಾ ಸಭೆ ನಡೆಸಿದರು.

    ಔದ್ಯಮಿಕ ಬೆಳವಣಿಗೆ ಸಾಧಿಸುವುದು ಮತ್ತು ನಿರಂತರ ಹೂಡಿಕೆ ಸೆಳೆಯುವ ನಿಟ್ಟಿನಲ್ಲಿ ಸಿಂಗಪುರ, ತೈವಾನ್, ವಿಯಟ್ನಾಂ, ಚಿಲಿ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಹಲವು ದೇಶಗಳು ಅನುಸರಿಸುತ್ತಿರುವ ಕ್ರಮಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಲಾಗಿದ್ದು, ಚಿಲಿ ದೇಶದ ಹೂಡಿಕೆ ವಿಧಾನ ಜಗತ್ತಿನಲ್ಲೇ ಅಗ್ರಸ್ಥಾನದಲ್ಲಿರುವ ಬಗ್ಗೆ ಮಾಹಿತಿ ನೀಡಿದರು.

    ರಾಜ್ಯವು ಬಂಡವಾಳ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದೆ ಆದರೆ, ಈಗಾಗಲೇ ಹೂಡಿಕೆ ಮಾಡಿರುವ ಕಂಪನಿಗಳಿಂದ ಇನ್ನೂ ಹೆಚ್ಚಿನ ಪ್ರಮಾಣದ ಮರುಹೂಡಿಕೆ ಬಗ್ಗೆ ಕಾರ್ಯಯೋಜನೆ ರೂಪಿಸುವ ಅಗತ್ಯವಿದೆ. ಈ ಬಗ್ಗೆ ಹೆಚ್ಚಿನ ಗಮನ ನೀಡುವ ಉದ್ದೇಶದಿಂದ ಉದ್ದೇಶಿತ ನೂತನ ಸಂಸ್ಥೆಗೆ ಐಎಎಸ್ ಅಧಿಕಾರಿಯೊಬ್ಬರನ್ನು ಸಿಇಓ ಆಗಿ ನೇಮಕ ಮಾಡಿ, ಜಾಗತಿಕ ಗುಣಮಟ್ಟದಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ

    ರಾಜನೀತಿ ಸಂಸ್ಥೆ ಮತ್ತು ಬೋಸ್ಟನ್ ಕನ್ಸಲ್ಟೆನ್ಸಿ ಗ್ರೂಪ್ ತಯಾರಿಸಿರುವ ಎರಡು ಪ್ರತ್ಯೇಕ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದರು. ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಮುಂತಾದವರು ಉಪಸ್ಥಿತರಿದ್ದರು.

    ಸಿಎಂ ಹಂತದಲ್ಲಿ ಸಮಿತಿ ರಚನೆ :ಅಧಿಕಾರಿಗಳು, ಸಚಿವರು ಮತ್ತು ಮುಖ್ಯಮಂತ್ರಿಗಳ ಹಂತಗಳಲ್ಲಿ ಸಮಿತಿಗಳನ್ನು ರಚಿಸಿ ತಿಂಗಳಿಗೊಮ್ಮೆ ಸಭೆ ನಡೆಸಿ ಉದ್ಯಮಿಗಳ ಕುಂದುಕೊರತೆ, ಬೇಡಿಕೆಯನ್ನು ಆಲಿಸಿ, ಕ್ಷಿಪ್ರಗತಿಯಲ್ಲಿ ಬಗೆಹರಿಸಲಾಗುವುದು. ಈ ಎಲ್ಲ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲು ವಿಶಿಷ್ಟವಾದ ಸಾಂಸ್ಥಿಕ ವ್ಯವಸ್ಥೆಯ ಅಗತ್ಯವಿದೆ.

    ಮಾರುಕಟ್ಟೆ ವಿಸ್ತರಣೆ, ಉದ್ಯಮಿಗಳ ನಾಡಿಮಿಡಿತ ಅರಿಯುವಿಕೆ, ರಚನಾತ್ಮಕ ಕಾರ್ಯತಂತ್ರ, ಸ್ಪರ್ಧಾತ್ಮಕತೆಯನ್ನು ಎದುರಿಸುವುದು, ಉತ್ಕೃಷ್ಟತೆಯನ್ನು ಕಾಪಾಡಿಕೊಳ್ಳುವುದು, ಅನುಮೋದನೆ ನೀಡಲಾದ ಯೋಜನೆಗಳ ಅನುಸರಣೆ, ಹೊಸ ಉದ್ಯಮಗಳ ಆಗಮನ, ಏಕಗವಾಕ್ಷಿ ಯೋಜನೆಯ ಜಾರಿ, ಸುಗಮ ವಹಿವಾಟಿನ ವಾತಾವರಣ ಇವೆಲ್ಲವನ್ನೂ ಸಾಧಿಸುವುದರಿಂದ ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ಸಾಧ್ಯ. ನೂತನ ಸಂಸ್ಥೆಯು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts