More

    ಗರಗ ಜಾತ್ರೆ ಸಂಪನ್ನ


    ಉಪ್ಪಿನಬೆಟಗೇರಿ: ‘ಶಿವಾಯ ನಮಃ ಓಂ’ … ‘ಶಿವಾಯ ನಮಃ ಓಂ’ ….. ‘ಹರ ಹರ ಮಹಾದೇವ’ ಎಂಬ ಉದ್ಘೋಷಗಳೊಂದಿಗೆ ರಥ ಎಳೆಯುತ್ತಿದ್ದಂತೆ ತೇರಿನ ಕಳಸಕ್ಕೆ ಭಕ್ತ ಸಮೂಹ ಬಾಳೆ ಹಣ್ಣು, ಉತ್ತತ್ತಿ ತೂರಿತು. ಅವುಗಳನ್ನು ಪ್ರಸಾದ ರೂಪವಾಗಿ ಪಡೆಯಲು ನಾ ಮುಂದು ತಾ ಮುಂದು ಎಂದು ಭಕ್ತರು ಓಡುತ್ತಿದ್ದರು. ಇದೆಲ್ಲದರ ಮಧ್ಯೆ ‘ಶ್ರೀ ಮಡಿವಾಳೇಶ್ವರ ಮಹಾರಾಜ್ ಕೀ ಜೈ’ ಎಂಬ ಜಯ ಘೊಷಣೆ ಮಾರ್ದನಿಸಿತ್ತು.

    ಇದು ಧಾರವಾಡ ತಾಲೂಕಿನ ಗರಗ ಗ್ರಾಮದ ಶ್ರೀ ಮಡಿವಾಳೇಶ್ವರ ಶಿವಯೋಗಿಗಳ ಪುಣ್ಯಾರಾಧನೆ ನಿಮಿತ್ತ ಸೋಮವಾರ ಸಂಜೆ 4 ಗಂಟೆಗೆ ಜರುಗಿದ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವದಲ್ಲಿ ಕಂಡು ಬಂದ ಭಕ್ತರ ಸಂಭ್ರಮದ ದೃಶ್ಯ.

    ಮಡಿವಾಳೇಶ್ವರ ದೇವಸ್ಥಾನದ ಮುಂದೆ ಅಲಂಕರಿಸಿದ್ದ ರಥೋತ್ಸವಕ್ಕೆ ಶ್ರೀಮಠದ ಪೀಠಾಧಿಪತಿ ಶ್ರೀ ಚನ್ನಬಸವ ಸ್ವಾಮೀಜಿ ಚಾಲನೆ ನೀಡಿದರು. ರಥವನ್ನು ಸುಮಾರು 200 ಮೀಟರ್ ಉದ್ದದ ಪಾದಗಟ್ಟೆಯವರೆಗೆ ಎಳೆದೊಯ್ದ ಭಕ್ತರು ಮರಳಿ ಮೂಲ ಗದ್ದುಗೆವರೆಗೆ ತಂದು ನಿಲ್ಲಿಸಿದರು. ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ವಿವಿಧ ಭಜನಾ ಮಂಡಳಿಗಳಿಂದ ಶಿವ ಭಜನೆ, ಜಾಂಜ್ ಪಥಕ್, ಜಗ್ಗಲಗಿ ಮೇಳ ಸೇರಿ ಸಕಲ ವಾದ್ಯ ಮೇಳಗಳು ಹಾಗೂ ಶ್ರೀಮಠದ ಸೇವಾ ಸಮಿತಿ ಸದಸ್ಯರ ಹಷೋದ್ಗಾರದ ಮಧ್ಯೆ ರಥೋತ್ಸವದ ಸಂಭ್ರಮ ಕಳೆಗಟ್ಟಿತ್ತು. ಉಪ್ಪಿನಬೆಟಗೇರಿಯ ಕುಮಾರ ವಿರೂಪಾಕ್ಷ ಶ್ರೀಗಳು, ಬೈಲಹೊಂಗಲದ ಪ್ರಭು ಶ್ರೀ ನೀಲಕಂಠ ಸ್ವಾಮೀಜಿ, ಉಗರಕೋಡ ಚನ್ನಬಸವ ಶಿವಾಚಾರ್ಯರು, ಮಡಿವಾಳ ಸ್ವಾಮೀಜಿ, ಪಂಚಾಕ್ಷರಿ ಸ್ವಾಮೀಜಿ, ಗಂಗಾಧರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ ಜಾತ್ರೋತ್ಸವಕ್ಕೆ ಸಾಕ್ಷಿಯಾದರು. ಶಾಸಕ ಅಮೃತ ದೇಸಾಯಿ ಹಾಗೂ ಇತರ ಗಣ್ಯರು ಪಾಲ್ಗೊಂಡಿದ್ದರು. ಜಾತಿ, ಮತ, ಪಂಥಗಳ ಬೇಧವಿಲ್ಲದೇ ಎಲ್ಲ ವರ್ಗದ ಜನರು ಭಕ್ತಿಯಿಂದ ಮಡಿವಾಳಜ್ಜನವರ ಗದ್ದುಗೆ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts