More

    ಬೊಮ್ಮನಹಳ್ಳಿಯಲ್ಲಿ 7 ಎಕರೆ ವಿಸ್ತೀರ್ಣದ ಕ್ರೀಡಾಂಗಣಕ್ಕೆ ಅಡಿಗಲ್ಲು, ಶಾಸಕ ಸತೀಶ್ ರೆಡ್ಡಿ ಕಾಳಜಿಗೆ ಸಂಸದ ತೇಜಸ್ವಿ ಸೂರ್ಯ ಶ್ಲಾಘನೆ

    ಬೊಮ್ಮನಹಳ್ಳಿ: ಬಡವರು, ಶ್ರಮಿಕರ ಹಾಗೂ ಸರ್ಕಾರಿ ಶಾಲೆಯ ಮಕ್ಕಳ ಕ್ರೀಡಾ ಚಟುವಟಿಕೆಗೆ ಅಟಲ್ ಬಿಹಾರಿ ವಾಜಪೇಯಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಸಹಕಾರಿಯಾಗಲಿದೆ ಎಂದು ಸಂಸದ ಹಾಗೂ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಎಲ್.ಎಸ್. ತೇಜಸ್ವಿ ಸೂರ್ಯ ಹೇಳಿದರು.

    ಬೊಮ್ಮನಹಳ್ಳಿಯಲ್ಲಿ ಶನಿವಾರ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

    7.24 ಎಕರೆ ಇರುವ ಬೃಹತ್ ಕ್ರೀಡಾಂಗಣ ಇಲ್ಲಿ ಸಿದ್ಧವಾಗಲಿದೆ. ಎಲ್ಲ ರೀತಿಯ ಅಥ್ಲೆಟಿಕ್ ಕ್ರೀಡೆಗಳಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ. ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾ ವ್ಯವಸ್ಥೆಗಳನ್ನು ಕಲ್ಪಿಸುವ ಈ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವ ಶಾಸಕ ಸತೀಶ್ ರೆಡ್ಡಿ ಅವರ ಕಾಳಜಿ ಶ್ಲಾಘನೀಯ ಎಂದರು.

    ಸತೀಶ್ ರೆಡ್ಡಿ ಅವರಂತಹ ಆದರ್ಶ ವ್ಯಕ್ತಿಗಳು ಸಮಾಜಕ್ಕೆ ಬೇಕಾಗಿದ್ದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜನರು ಭಾಗ್ಯವಂತರು. ಈ ಭಾಗದ ಜನರು, ಬಡವರು, ಕಾರ್ಮಿಕರ ಜೊತೆ ನಿಂತು ಅವರು ಕೆಲಸ ಮಾಡಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿರುವ ಕಾರ್ಮಿಕರಿಗೆ ಕರೊನಾ ಸಂದರ್ಭದಲ್ಲಿ ಸಹಕಾರ ನೀಡಿದ್ದಾರೆ ಎಂದರು.

    ಶಾಸಕ ಎಂ. ಸತೀಶ್ ರೆಡ್ಡಿ ಮಾತನಾಡಿ, ಹುಟ್ಟುಹಬ್ಬ ಎನ್ನುವ ಹೆಸರಿನಲ್ಲಿ ಪ್ರತಿವರ್ಷ ಕಾರ್ಯಕರ್ತರು ಮುಖಂಡರು ಸೇರಿ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದಾರೆ. ಈ ಬಾರಿ ಬಡಮಕ್ಕಳಿಗೆ ಆನ್ ಲೈನ್ ಶಾಲೆಗಳನ್ನು ನಡೆಸುತ್ತಿರುವ ಸಂದರ್ಭದಲ್ಲಿ ಸಹಕಾರಿಯಾಗಲಿ ಎನ್ನುವ ನಿಟ್ಟಿನಲ್ಲಿ ಟ್ಯಾಬ್‌ಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ. ನಾನು ಟೀಕೆ ಟಿಪ್ಪಣಿಗಳನ್ನೂ ಕೂಡ ಆಶೀರ್ವಾದ ಎಂದು ತೆಗೆದುಕೊಳ್ಳುವ ವ್ಯಕ್ತಿ, ಮಾನವ ಧರ್ಮವನ್ನು ಸಮರ್ಪಕವಾಗಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದರು.

    ಈ ಕ್ರೀಡಾಂಗಣ ನಿರ್ಮಿಸಲು ಸಾಕಷ್ಟು ಅಡೆತಡೆಗಳು ಎದುರಾಗಿದ್ದವು, ಅದೆಲ್ಲವನ್ನು ನಿಭಾಯಿಸಿ ಅಭಿವೃದ್ಧಿ ಹರಿಕಾರ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಅಭಿವೃದ್ಧಿಯಾಗುತ್ತಿರುವುದು ನೆಮ್ಮದಿ ತಂದಿದೆ. ಸರ್ಕಾರಿ ಶಾಲೆಗಳಿಗೆ ಸಣ್ಣ ಕ್ರೀಡಾಂಗಣಗಳು ಇದ್ದು, ಇಂತಹ ಮಕ್ಕಳಿಗೆ ಕ್ರೀಡಾಂಗಣ ಸದುಪಯೋಗವಾಗುವುದು ನಮ್ಮ ಆದ್ಯತೆ ಎಂದರು.

    ದೇಶದ ರಕ್ಷಣೆಗಾಗಿ ಅಟಲ್ ಬಿಹಾರಿ ವಾಜಪೇಯಿ ಅವರು ಕೈಗೊಂಡ ಆದರ್ಶಗಳನ್ನು ನಾವೆಂದೂ ಮರೆಯುವುದಿಲ್ಲ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬಂದಿರುವ ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದರು.

    ಕರ್ನಾಟಕ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ನಿರ್ಮಾಣ ಮಾಡಲಾಗಿರುವ ಕ್ರೀಡಾಂಗಣಕ್ಕೆ ಎಚ್.ಎಸ್.ಆರ್ ಬಡಾವಣೆಯಲ್ಲಿ ಚಾಲನೆ ನೀಡಲಾಗಿದ್ದು ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಿದ್ದರು.

    ಕಾರ್ಯಕ್ರಮದಲ್ಲಿ ಬಿಬಿಎಂಪಿ ಜಂಟಿ ಆಯುಕ್ತ ರಾಮಕೃಷ್ಣ, ಮಾಜಿ ಉಪ ಮಹಾಪೌರ ರಾಮ್ ಮೋಹನ್‌ರಾಜ್, ಪಾಲಿಕೆ ಮಾಜಿ ಸದಸ್ಯರು ಗುರುಮೂರ್ತಿ ರೆಡ್ಡಿ, ಜಲ್ಲಿ ರಮೇಶ್, ಶ್ರೀನಿವಾಸರೆಡ್ಡಿ, ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ, ಆನಂದ್‌ರೆಡ್ಡಿ, ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಮತ್ತಿತರರು ಇದ್ದರು.

    ಬಡವರಿಗೆ ಬಿಬಿಎಂಪಿ ವತಿಯಿಂದ ಒಂಟಿಮನೆ ಹಕ್ಕುಪತ್ರ, ಉಚಿತ ಆರೋಗ್ಯ ಕಾರ್ಡ್, ಅಂಧ ಮಕ್ಕಳಿಗೆ ಕಂಬಳಿ, ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು. ಆರೋಗ್ಯ ತಪಾಸಣಾ ಶಿಬಿರ, ಹೊಂಗಸಂದ್ರದಲ್ಲಿ ಕೊಳವೆಬಾವಿ, ಶೌಚಾಲಯ ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts