More

    ರಾಣೆಬೆನ್ನೂರಲ್ಲಿ ಸೊರಗಿದ ಮತ್ಸ್ಯೊದ್ಯಮ

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ತಾಲೂಕಿನಲ್ಲಿ ಮೀನುಗಾರಿಕೆ ಕೃಷಿಯಿಂದ ಬಹುತೇಕರು ವಿಮುಖರಾಗುತ್ತಿದ್ದಾರೆ.

    ತಾಲೂಕಿನಲ್ಲಿ ಒಟ್ಟು 15 ದೊಡ್ಡ, 35 ಸಣ್ಣ ಕೆರೆಗಳಿವೆ. ಕಳೆದ ಬಾರಿ ಉತ್ತಮ ಮಳೆಯಾಗಿದ್ದರಿಂದ ಕೆರೆಗಳು ಭರ್ತಿಯಾಗಿವೆ. ತುಂಗಭದ್ರಾ ಹಾಗೂ ಕುಮದ್ವತಿ ನದಿಯಲ್ಲೂ ನೀರಿನ ಹರಿವು ಚೆನ್ನಾಗಿದೆ. ಜತೆಗೆ ಮೀನು ಕೃಷಿಗೆ ಪೂರಕ ವಾತಾವರಣವಿದೆ. ಆದರೆ, ಪ್ರಮುಖವಾಗಿ ತಾಲೂಕಿನಲ್ಲಿ ಮಿನುಗಾರಿಕೆ ಇಲಾಖೆ ಕಾರ್ಯಾಲಯವೇ ಇಲ್ಲ. ಮತ್ಸ್ಯೊದ್ಯಮಿಗಳಿಗೆ ಕಾಲಕಾಲಕ್ಕೆ ಸರ್ಕಾರದ ಪ್ರಯೋಜನಗಳು ಸಿಗುತ್ತಿಲ್ಲ. ಜತೆಗೆ ಮೀನುಗಾರಿಕೆ ಕೈಗೊಂಡವರಿಗೆ ಸಮಸ್ಯೆ ಎದುರಾದರೆ ಪರಿಹರಿಸುವವರೂ ಇಲ್ಲ. ಹೀಗಾಗಿ ಮೀನುಗಾರಿಕೆ ಕೃಷಿಯಲ್ಲಿ ಆಸಕ್ತಿ ಇದ್ದವರೂ ಹಿಂದೆ ಸರಿಯುತ್ತಿದ್ದು, ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಾಣುತ್ತಿಲ್ಲ.

    ಪಾಳುಬಿದ್ದ ತಾತ್ಕಾಲಿಕ ಕಚೇರಿ: ತಾಲೂಕಿಗೊಂದು ಮೀನುಗಾರಿಕೆ ಇಲಾಖೆ ಕಚೇರಿ ಇರಬೇಕು ಎಂಬ ಸರ್ಕಾರ ನಿಯಮವಿದೆ. ರಾಣೆಬೆನ್ನೂರಲ್ಲಿ 1977ರಲ್ಲಿ ಮೀನುಗಾರಿಕೆ ಇಲಾಖೆಯ ತಾತ್ಕಾಲಿಕ ಕಾರ್ಯಾಲಯ ಹಾಗೂ ಮೀನು ಮರಿ ಜೀವನೋಪಾಯ ತೊಟ್ಟಿ ನಿರ್ವಿುಸಲಾಗಿದೆ. ವಿಪರ್ಯಾಸವೆಂದರೆ ಮೀನು ಮರಿ ತೊಟ್ಟಿಯಲ್ಲಿ ಇದುವರೆಗೂ ಒಂದು ಮೀನೂ ಕಂಡು ಬಂದಿಲ್ಲ.

    ಅಪರೂಪಕ್ಕೆ ಭೇಟಿ: ಸದ್ಯ ರಾಣೆಬೆನ್ನೂರಿನ ಜವಾಬ್ದಾರಿಯನ್ನು ಹಿರೇಕೆರೂರ ತಾಲೂಕಿನ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಗೆ ವಹಿಸಲಾಗಿದೆ. ಜವಾನನಿಂದ ಅಧಿಕಾರಿವರೆಗಿನ ಎಲ್ಲ ಕೆಲಸವನ್ನೂ ಅವರೇ ಮಾಡಿಕೊಳ್ಳಬೇಕು. ಹೀಗಾಗಿ, ಅವರು ತಾಲೂಕಿಗೆ ಅಪರೂಪಕ್ಕೊಮ್ಮೆ ಬರುತ್ತಾರೆ ಎಂಬುದು ಮೀನು ಸಾಕಣೆದಾರರ ಆರೋಪ.

    ಇಲಾಖೆ ಸೌಲಭ್ಯಗಳು: ರಾಣೆಬೆನ್ನೂರ ತಾಲೂಕಿನಲ್ಲಿ 50ಕ್ಕೂ ಅಧಿಕ ಮೀನು ಸಾಕಣೆದಾರರಿದ್ದಾರೆ. ಮೀನು ಸಾಕಣೆಗೆ ಮೊದಲು ಕೊಂಡು ತರುವ ಮರಿಗಳಿಗೆ ಶೇ. 50ರಷ್ಟು ಸಬ್ಸಿಡಿ ನೀಡಬೇಕು. ಮೀನುಗಾರಿಕೆ ಸಹಕಾರ ಸಂಘದ ಸದಸ್ಯರು ಅಪಘಾತಕ್ಕೀಡಾದರೆ ವಿಮೆ ಸೌಲಭ್ಯ. ಬಲೆಗಳು ಮತ್ತಿತರ ಸಾಮಗ್ರಿಗಳನ್ನು ವಿತರಿಸಬೇಕು. ಮೀನು ಮಾರಾಟಕ್ಕೆ ನೆರವಾಗಲು ದ್ವಿಚಕ್ರ ವಾಹನ ವಿತರಿಸಬೇಕು. ಆದರೆ, ತಾಲೂಕಿನಲ್ಲಿ ಈ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಮೀನು ಸಾಕಾಣಿಕೆದಾರರು ದೂರುತ್ತಿದ್ದಾರೆ.

    ರಾಣೆಬೆನ್ನೂರಿನಲ್ಲಿ ಮೀನುಗಾರಿಕೆ ಕಚೇರಿ ಮಂಜೂರಾಗದ ಕಾರಣ ಹಿರೇಕೆರೂರಿಗೆ ರಾಣೆಬೆನ್ನೂರನ್ನು ಸೇರಿಸಲಾಗಿದೆ. ಅಲ್ಲಿ ಸಿಬ್ಬಂದಿ ಇಲ್ಲದ್ದರಿಂದ ತೊಂದರೆಯಾಗಿದೆ. ಈ ಕುರಿತು ಶಾಸಕರಿಗೆ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕಚೇರಿ ಮಂಜೂರಾದರೆ ಅನುಕೂಲವಾಗುತ್ತದೆ.

    | ಎಸ್.ಪಿ. ದಂದೂರ ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ

    ಮೀನು ಸಾಕಣೆ ಹೆಚ್ಚು ಲಾಭದಾಯಕ. ಸರ್ಕಾರ ಇದಕ್ಕೆ ಉತ್ತೇಜನ ನೀಡುತ್ತಿಲ್ಲ. ತಾಲೂಕಿನ ಕೆರೆಗಳನ್ನು ಸರಿಯಾಗಿ ನಿರ್ವಹಿಸಿದರೆ ಮೀನು ಕೃಷಿಗೆ ಅನುಕೂಲ. ಆದರೆ, ಇಲ್ಲಿ ಮೀನುಗಾರಿಕೆ ಇಲಾಖೆ ಕಚೇರಿಯೇ ಇಲ್ಲದ್ದರಿಂದ ಯಾವ ಕೆಲಸಗಳೂ ಆಗುತ್ತಿಲ್ಲ. ಶಾಸಕರು ಸೂಕ್ತ ಕ್ರಮ ಕೈಗೊಂಡು ಮೀನು ಕೃಷಿಕರಿಗೆ ಅನುಕೂಲ ಮಾಡಿಕೊಡಬೇಕು.

    | ಮಹೇಶ ಬಿ. ಮೀನು ಸಾಕಣೆದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts