More

    ಮಂದಿರ ಉದ್ಘಾಟಿಸಿದ ನಂತರ ಘೋಷಿಸಿದ ಮೊದಲ ಸ್ಕೀಂ ‘ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ’: ನೀವು ಎರಡು ರೀತಿಯಲ್ಲಿ ಲಾಭ ಮಾಡಿಕೊಳ್ಳಬಹುದು….

    ಮುಂಬೈ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಮೊದಲ ಯೋಜನೆ ಇದಾಗಿದೆ. ಇದೇ ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’. ಈ ಯೋಜನೆಯ ಮೂಲಕ ಎರಡು ರೀತಿಯಲ್ಲಿ ಸಾರ್ವಜನಿಕರು ಲಾಭ ಮಾಡಿಕೊಳ್ಳಬಹುದು. ಸರ್ಕಾರದ ಸಬ್ಸಿಡಿ ನೆರವು ಪಡೆದು ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್​ ಉತ್ಪಾದಿಸಿ ಮಾರಾಟ ಮಾಡಬಹುದು. ಇದರ ಜತೆಗೆ, ಈ ಯೋಜನೆ ಘೋಷಣೆಯಿಂದಾಗಿ ಏರಿಕೆಯಾಗುತ್ತಿರುವ ಸೌರ ಫಲಕ ಸಂಬಂಧಿ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಿ ಲಾಭ ಪಡೆದುಕೊಳ್ಳಬಹುದು.

    ದೇಶದ 1 ಕೋಟಿ ಮನೆಗಳ ಮೇಲೆ ಸೌರ ಮೇಲ್ಛಾವಣಿಗಳನ್ನು ಸ್ಥಾಪಿಸುವ ಗುರಿ ಇರುವ ಯೋಜನೆ ಇದಾಗಿದೆ. ಇದು ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಕಡಿಮೆ ಮಾಡುವುದಲ್ಲದೆ, ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿ ಮಾಡಲಿದೆ ಎಂದು ಎಕ್ಸ್‌ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಪ್ರಧಾನಿ ಹೇಳಿದ್ದಾರೆ.

    ರಾಮ ಮಂದಿರದ ಉದ್ಘಾಟನೆ ಸಮಾರಂಭದ ನಂತರ ಅಯೋಧ್ಯೆಯಿಂದ ಹಿಂದಿರುಗಿದ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22 ರಂದು ಒಂದು ಕೋಟಿ ಮನೆಗಳಲ್ಲಿ ಸೌರ ಮೇಲ್ಛಾವಣಿಗಳನ್ನು ಸ್ಥಾಪಿಸುವ ಯೋಜನೆಯನ್ನು ಪ್ರಾರಂಭಿಸುವುದು ತಮ್ಮ ಮೊದಲ ನಿರ್ಧಾರ ಎಂದು ಘೋಷಿಸಿದ್ದಾರೆ.

    “ಅಯೋಧ್ಯೆಯಿಂದ ಹಿಂದಿರುಗಿದ ನಂತರ ನಾನು ತೆಗೆದುಕೊಂಡ ಮೊದಲ ನಿರ್ಧಾರವೆಂದರೆ ನಮ್ಮ ಸರ್ಕಾರವು 1 ಕೋಟಿ ಮನೆಗಳ ಮೇಲೆ ಸೌರ ಮೇಲ್ಛಾವಣಿಗಳನ್ನು ಸ್ಥಾಪಿಸುವ ಗುರಿಯೊಂದಿಗೆ ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ಯನ್ನು ಪ್ರಾರಂಭಿಸಲಿದೆ” ಎಂದು ಮೋದಿ ಎಕ್ಸ್​ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

    “ಇದು ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದಲ್ಲದೆ, ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ” ಎಂದೂ ಪ್ರಧಾನಿ ಹೇಳಿದ್ದಾರೆ.

    “ಜಗತ್ತಿನ ಎಲ್ಲಾ ಭಕ್ತರು ಸೂರ್ಯವಂಶಿ ಭಗವಾನ್ ಶ್ರೀರಾಮನ ಬೆಳಕಿನಿಂದ ಯಾವಾಗಲೂ ಶಕ್ತಿಯನ್ನು ಪಡೆಯುತ್ತಾರೆ” ಎಂದು ಅವರು ಹೇಳಿದರು.

    “ಇಂದು, ಅಯೋಧ್ಯೆಯಲ್ಲಿ ಉದ್ಘಾಟನೆ ಶುಭ ಸಂದರ್ಭದಲ್ಲಿ, ಭಾರತದ ಜನರು ತಮ್ಮ ಮನೆಗಳ ಛಾವಣಿಯ ಮೇಲೆ ತಮ್ಮ ಸೌರ ಮೇಲ್ಛಾವಣಿ ವ್ಯವಸ್ಥೆಯನ್ನು ಹೊಂದಿರಬೇಕು ಎಂಬ ನನ್ನ ಸಂಕಲ್ಪವು ಮತ್ತಷ್ಟು ಬಲಗೊಂಡಿದೆ” ಎಂದು ಮೋದಿ ಹೇಳಿದರು.

    ಪ್ರಧಾನಿ ಮಾಡಿದ ಘೋಷಣೆಯನ್ನು ಸೌರ ಉದ್ಯಮದವರು ಸ್ವಾಗತಿಸಿದ್ದಾರೆ. ಇಂಧನ, ಪರಿಸರ ಮತ್ತು ನೀರಿನ ಮಂಡಳಿ (CEEW) ನ ಹಿರಿಯ ಅಧಿಕಾರಿ ನೀರಜ್ ಕುಲದೀಪ್ ಮಾತನಾಡಿ, ಭಾರತವು ಗ್ರಾಮೀಣ ಮತ್ತು ನಗರಗಳೆರಡರಲ್ಲೂ ಛಾವಣಿಗಳ ಮೇಲೆ ಸೌರ ವ್ಯವಸ್ಥೆಗಳನ್ನು ಸ್ಥಾಪಿಸುವ ಬಗ್ಗೆ ಭಾರಿ ಸಾಮರ್ಥ್ಯವನ್ನು ಹೊಂದಿದೆ. ಇತ್ತೀಚಿನ CEEW ಅಧ್ಯಯನದ ಪ್ರಕಾರ, ಭಾರತೀಯ ಕುಟುಂಬಗಳು ತಾಂತ್ರಿಕವಾಗಿ 640 GW ಗಿಂತ ಹೆಚ್ಚಿನ ಛಾವಣಿಯ ಸೌರವನ್ನು ನಿಯೋಜಿಸಬಹುದು ಎಂದಿದ್ದಾರೆ.

    ಪ್ರಸ್ತುತ, ಅಂದಾಜು 7-8 ಲಕ್ಷ ಕುಟುಂಬಗಳು ಮೇಲ್ಛಾವಣಿ ಸೌರ ವ್ಯವಸ್ಥೆಗಳನ್ನು ಸ್ಥಾಪಿಸಿದ್ದು, ಸರ್ಕಾರದ ಬಂಡವಾಳ ಸಬ್ಸಿಡಿ ಕಾರ್ಯಕ್ರಮದಿಂದ ಪ್ರಯೋಜನ ಪಡೆದಿವೆ. ಇದರ ಪರಿಣಾಮವಾಗಿ ಪ್ರಸ್ತುತ ಅಂದಾಜು 4 GW ಸೌರ ಉತ್ಪಾದಿಸುವ ಸಾಮರ್ಥ್ಯ ಸೃಷ್ಟಿಯಾಗಿದೆ.

    “1 ಕೋಟಿ ಕುಟುಂಬಗಳನ್ನು ಸೌರೀಕರಣಗೊಳಿಸುವ ಇಂದಿನ ಘೋಷಣೆಯು ಉನ್ನತ ಮಟ್ಟ ತಲುಪಲು ಸೌರ ವಲಯಕ್ಕೆ ಅಗತ್ಯವಾದ ಪ್ರೇರಣೆಯನ್ನು ನೀಡುತ್ತದೆ. ಸೌರಶಕ್ತಿ ಚಾಲಿತ ಕುಟುಂಬಗಳಲ್ಲಿ 12-14 ಪಟ್ಟು ಹೆಚ್ಚಳವು ಹೆಚ್ಚುವರಿ 20-25 GW ಸೌರ ಸಾಮರ್ಥ್ಯವನ್ನು ಸೇರಿಸುತ್ತದೆ. ಇದು ರಾಜ್ಯಗಳಿಗೆ ವಿದ್ಯುತ್ ಸಬ್ಸಿಡಿಯನ್ನು ಉಳಿಸಲು ಸಹಾಯ ಮಾಡುತ್ತದೆ. ವಿದ್ಯುತ್ ಸರಬರಾಜು ಕಂಪನಿಗಳ ಆರ್ಥಿಕ ಆರೋಗ್ಯವನ್ನು ಸುಧಾರಿಸಲು ಸಹ ಕೊಡುಗೆ ನೀಡುತ್ತದೆ ಎಂದು ಕುಲದೀಪ್ ಹೇಳಿದರು.

    ಷೇರು ಬೆಲೆ ಹೆಚ್ಚಳ:

    ಪ್ರಧಾನಿ ನರೇಂದ್ರ ಮೋದಿ ಅವರು ‘ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ’ಯನ್ನು ಘೋಷಿಸಿರುವುದರಿಂದ ಹಲವಾರು ಕಂಪನಿಗಳ ಷೇರುಗಳು ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

    ಟಾಟಾ ಪವರ್, ಜೆನಸ್ ಪವರ್, ಎಚ್‌ಪಿಎಲ್ ಎಲೆಕ್ಟ್ರಿಕ್ ಮತ್ತು ಪವರ್, ಬೊರೊಸಿಲ್ ರಿನ್ಯೂವಬಲ್ಸ್, ಸ್ಟರ್ಲಿಂಗ್ ಮತ್ತು ವಿಲ್ಸನ್ ರಿನ್ಯೂವಬಲ್ ಎನರ್ಜಿ, ವೇರ್ ರಿನ್ಯೂವಬಲ್ ಟೆಕ್ನಾಲಜೀಸ್, ಸುರಾನಾ ಸೋಲಾರ್ ಮತ್ತು ಜೆನ್‌ಸೋಲ್ ಎಂಜಿನಿಯರಿಂಗ್ ಷೇರುಗಳು ಭವಿಷ್ಯದಲ್ಲಿ ಹೊಸ ಯೋಜನೆಯಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.

    ನವೀಕರಿಸಬಹುದಾದ ಇಂಧನ ಮತ್ತು ಜಲವಿದ್ಯುತ್ ವ್ಯವಹಾರದಲ್ಲಿ ತೊಡಗಿರುವ ಇತರ ಕಂಪನಿಗಳ ಷೇರುಗಳು ಕಳೆದ 1 ವರ್ಷದಲ್ಲಿ ಭಾರಿ ಪ್ರಮಾಣದಲ್ಲಿ ಏರಿರುವುದನ್ನು ಗಮನಿಸಬಹುದು. ಸುಜ್ಲಾನ್, SJVN, JSW ಎನರ್ಜಿ ಮತ್ತು ಓರಿಯಂಟ್ ಗ್ರೀನ್ ಪವರ್ ಮುಂತಾದ ಕಂಪನಿಗಳ ಷೇರುಗಳು ಹೂಡಿಕೆದಾರರಿಗೆ ಬಂಪರ್ ಆದಾಯವನ್ನು ನೀಡಿವೆ.

    ಟಾಟಾ ಪವರ್, ಬೊರೊಸಿಲ್ ರಿನ್ಯೂವಬಲ್ಸ್, ಐಆರ್‌ಇಡಿಎ, ವಾರೀ, ಸ್ಟರ್ಲಿಂಗ್ ಆ್ಯಂಡ್ ವಿಲ್ಸನ್‌ನಂತಹ ವಿದ್ಯುತ್ ಕಂಪನಿಗಳ ಷೇರುಗಳು ಮಂಗಳವಾರ ಸಾಕಷ್ಟು ಲಾಭವನ್ನು ಪಡೆದವು. ಜನವರಿ 23ರಂದು ಬೊರೊಸಿಲ್ ರಿನ್ಯೂವಬಲ್ಸ್ ಕಂಪನಿಯ ಷೇರುಗಳು 14% ಹೆಚ್ಚಳ ಕಂಡವು, ಟಾಟಾ ಪವರ್ 3% ಏರಿತು. IREDA, Waaree, ಮತ್ತು Sterling & Wilson 5% ಏರಿಕೆ ದಾಖಲಿಸಿದವು. ಬೊರೊಸಿಲ್ ಹೊಸ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿತು,

    ಸಬ್ಸಿಡಿ ಹೆಚ್ಚಳ:

    ಮೇಲ್ಛಾವಣಿಯ ಸೌರ ಕಾರ್ಯಕ್ರಮದ (ರೂಫ್​ಟಾಪ್​ ಸೋಲಾರ್​ ಪ್ರೊಗ್ರಾಂ) ಅಡಿಯಲ್ಲಿ ವಸತಿ ವಲಯಕ್ಕೆ ಕೇಂದ್ರ ಸರ್ಕಾರವು ಹಣಕಾಸು ನೆರವನ್ನು ಹೆಚ್ಚಿಸಿದೆ.

    3 ಕಿಲೋ ವ್ಯಾಟ್ ​ಸಾಮರ್ಥ್ಯದವರೆಗೆ ವಿದ್ಯುತ್​ ಉತ್ಪಾದಿಸುವುದಕ್ಕೆ ಸಬ್ಸಿಡಿಯನ್ನು ಪ್ರತಿ ಕಿಲೋ ವ್ಯಾಟ್​ಗೆ ರೂ 18,000ಕ್ಕೆ ಏರಿಸಲಾಗಿದೆ. ಹಿಂದಿನ ಸಬ್ಸಿಡಿಗೆ ಹೋಲಿಸಿದರೆ, ಇದು ಶೇಕಡಾ 23.4ರಷ್ಟು ಹೆಚ್ಚಳವಾಗುತ್ತದೆ. ಇದುವರೆಗೆ ಈ ಸಬ್ಸಿಡಿ ಮೊತ್ತು 14,588 ರೂಪಾಯಿ ಇತ್ತು.

    3 ಕಿಲೋ ವ್ಯಾಟ್​ಗಿಂತ ಹೆಚ್ಚಿನ ಮತ್ತು 10 ಕಿಲೋ ವ್ಯಾಟ್​ ಒಳಗಿನ ವಿದ್ಯುತ್​ ಉತ್ಪಾದನೆ ಸಾಮರ್ಥ್ಯಕ್ಕೆ ಈ ನೆರವನ್ನು ಪ್ರತಿ ಕಿಲೋ ವ್ಯಾಟ್​ಗೆ 7,294 ರಿಂದ 9,000 ರೂಪಾಯಿಗೆ ಹೆಚ್ಚಿಸಲಾಗಿದೆ.

    ಒಂದು ವರ್ಷದ ಹಿಂದೆ ಕೇಂದ್ರ ಸರ್ಕಾರವು ಮೇಲ್ಛಾವಣಿ ಯೋಜನೆಗಳಿಗೆ ಪರಿಷ್ಕರಣೆಯನ್ನು ಮಾಡಿತ್ತು.
    ಹೊಸ ದರಗಳು ಜನವರಿ 20 ರ ನಂತರದ ಎಲ್ಲಾ ಭವಿಷ್ಯದ ಬಿಡ್‌ಗಳಿಗೆ ಮತ್ತು ಜನವರಿ 5 ರ ನಂತರ ಸಲ್ಲಿಸಲಾಗುವ ಕ್ಲೈಮ್‌ಗಳಿಗೆ ಅನ್ವಯಿಸುತ್ತವೆ.

    Q3 ಲಾಭ 376% ಹೆಚ್ಚಳ; 1971% ಬಂಪರ್ ರಿಟರ್ನ್: ರಾಕೆಟ್​ನಂತೆ ಚಿಮ್ಮಿದ ರಿಯಲ್ ಎಸ್ಟೇಟ್​ ಕಂಪನಿ ಷೇರು ಬೆಲೆ

    ಒಂದೇ ದಿನದಲ್ಲಿ ಶೇಕಡಾ 8ರಷ್ಟು ಏರಿಕೆ: ಬ್ಯಾಂಕ್​ ಷೇರುಗಳಿಗೆ ಬೇಡಿಕೆ ಕುದುರಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts