More

    ಒಂದೇ ದಿನದಲ್ಲಿ ಶೇಕಡಾ 8ರಷ್ಟು ಏರಿಕೆ: ಬ್ಯಾಂಕ್​ ಷೇರುಗಳಿಗೆ ಬೇಡಿಕೆ ಕುದುರಿದ್ದೇಕೆ?

    ಬೆಂಗಳೂರು: ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್​ನ ಷೇರುಗಳು ಮಂಗಳವಾರ ಒಂದೇ ದಿನದಲ್ಲಿ ಶೇ. 8ರಷ್ಟು ಏರಿಕೆ ಕಂಡು ಇದು 52 ವಾರಗಳ ಗರಿಷ್ಠ ಮಟ್ಟ ತಲುಪಿದವು.

    ಡಿಸೆಂಬರ್ ತ್ರೈಮಾಸಿಕ (2023 ಅಕ್ಟೋಬರ್​ನಿಂದ ಡಿಸೆಂಬರ್ವರೆಗೆ- Q3) ಫಲಿತಾಂಶಗಳ ಹಿನ್ನೆಲೆಯಲ್ಲಿ ಈ ಬ್ಯಾಂಕ್​ನ ​ಷೇರುಗಳಲ್ಲಿ ಏರಿಕೆ ಕಂಡುಬಂದಿದೆ.

    ಖಾಸಗಿ ವಲಯದ ಕರೂರ್ ವೈಶ್ಯ ಬ್ಯಾಂಕ್‌ನ ನಿವ್ವಳ ಲಾಭವು ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ 42.56 ರಷ್ಟು ಏರಿಕೆಯಾಗಿ 412 ಕೋಟಿ ರೂಪಾಯಿ ತಲುಪಿದೆ ಎಂದು ಬ್ಯಾಂಕ್​ ಪ್ರಕಟಣೆಯಲ್ಲಿ ತಿಳಿಸಿದೆ. ತಮಿಳುನಾಡು ಮೂಲದ ಬ್ಯಾಂಕ್​ ಇದಾಗಿದ್ದು, ಕಳೆದ ವರ್ಷದ ಇದೇ ತ್ರೈಮಾಸಿಕ ಅವಧಿಯಲ್ಲಿ 289 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಗಳಿಸಿತ್ತು.

    ಡಿಸೆಂಬರ್ 31, 2023ಕ್ಕೆ ಕೊನೆಗೊಂಡ ಒಂಬತ್ತು ತಿಂಗಳುಗಳಲ್ಲಿ ಬ್ಯಾಂಕಿನ ನಿವ್ವಳ ಲಾಭವು ಕಳೆದ ವರ್ಷದ ಇದೇ ಮೊತ್ತಕ್ಕೆ ಹೋಲಿಸಿದರೆ ಶೇಕಡಾ 49.61 ರಷ್ಟು ಏರಿಕೆಯಾಗಿ 1,149 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 768 ಕೋಟಿ ರೂ. ಲಾಭ ಮಾಡಲಾಗಿತ್ತು.

    ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಬ್ಯಾಂಕ್​ ಆದಾಯವು 2,497.17 ಕೋಟಿ ರೂಪಾಯಿಗೆ ಹೆಚ್ಚಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 2,012.71 ಕೋಟಿ ರೂ. ಆದಾಯ ಇತ್ತು. ಡಿಸೆಂಬರ್ 31, 2023 ರ ವೇಳೆಗೆ ಒಟ್ಟು ಅನುತ್ಪಾದಕ ಆಸ್ತಿಗಳಲ್ಲಿ (ಜಿಎನ್‌ಪಿಎ) ಶೇಕಡಾ 1.12 ಕ್ಕೆ ಸುಧಾರಣೆಯಾಗಿದೆ ಎಂದು ಬ್ಯಾಂಕ್ ಹೇಳಿದೆ.

    ಕರೂರ್ ವೈಶ್ಯ ಬ್ಯಾಂಕ್ ಷೇರುಗಳು ಪ್ರಸ್ತುತ 183 ರೂಪಾಯಿಗೆ ತಲುಪಿವೆ. ಮಂಗಳವಾರ ಒಂದೇ ದಿನದಲ್ಲಿ ಶೇಕಡಾ 8ರಷ್ಟು ಏರಿಕೆ ಕಂಡಿವೆ. ಈ ಷೇರುಗಳು ಒಂದು ತಿಂಗಳಲ್ಲಿ 11% ಏರಿಕೆಯಾಗಿವೆ. ಆರು ತಿಂಗಳಲ್ಲಿ 43.80% ಹಾಗೂ ಒಂದು ವರ್ಷದಲ್ಲಿ ಶೇ. 71.ರಷ್ಟು ಏರಿಕೆ ಕಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts