More

    ಅತಿಥಿ ಉಪನ್ಯಾಸಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ

    ಹಾವೇರಿ: ಒಂದು ಕಡೆ ಅತಿಥಿ ಉಪನ್ಯಾಸಕರ ವೇತನವನ್ನು ಹೆಚ್ಚಿಸಿ ಸರ್ಕಾರ ಆದೇಶಿಸಿದ್ದು ಸಂತಸ ತಂದರೆ, ಮತ್ತೊಂದೆಡೆ ಅರ್ಧದಷ್ಟು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವಂತೆ ಮಾಡಿದೆ ಎಂದು ಸರ್ಕಾರಿ ಪದವಿ ಕಾಲೇಜ್​ಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಂಘದ ಜಿಲ್ಲಾ ಅಧ್ಯಕ್ಷ ಪ್ರಶಾಂತಕುಮಾರ ಬೆನ್ನೂರ ದೂರಿದರು.

    ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಸದ್ಯ ಇದ್ದ 14,500 ಉಪನ್ಯಾಸಕರಲ್ಲಿ ಅರ್ಧಕ್ಕಿಂತ ಹೆಚ್ಚಿನ ಉಪನ್ಯಾಸಕರು ಮರಳಿ ಕೆಲಸಕ್ಕೆ ಸೇರದಂತೆ ಗೊಂದಲದ ಆದೇಶ ಹೊರಡಿಸಿದೆ. ಅತಿಥಿ ಉಪನ್ಯಾಸಕರ ಕೆಲಸದ ಅವಧಿಯನ್ನು ವಾರಕ್ಕೆ 8 ತಾಸಿನ ಬದಲು 15 ತಾಸಿಗೆ ಏರಿಕೆ ಮಾಡಿದೆ. ಈ ಕಾರಣಕ್ಕೆ ಅರ್ಧದಷ್ಟು ಉಪನ್ಯಾಸಕರಿಗೆ ಕೆಲಸವಿಲ್ಲದಂತಾಗುತ್ತದೆ. ಹಿಂದೆ ಕೊಡುತ್ತಿದ್ದ 13 ಸಾವಿರ ವೇತನವನ್ನು ಇಬ್ಬರದು ಸೇರಿಸಿ ಒಬ್ಬರಿಗೆ ಕೊಡುತ್ತಿದೆ. ಇದರಿಂದ ವೇತನ ಹೆಚ್ಚಳವಾದ ಸಂತಸದ ಬದಲು ಕೆಲಸ ಕಳೆದುಕೊಳ್ಳುವ ಆತಂಕವೇ ಹೆಚ್ಚಿದೆ ಎಂದು ಹರಿಹಾಯ್ದರು.

    ಕಳೆದ 10 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರಿಗೆ ನೇಮಕಾತಿಯಲ್ಲಿ ಮೊದಲ ಆದ್ಯತೆ ನೀಡಬೇಕು ಎಂಬ ಆದೇಶವಿದ್ದರೂ ಅದು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ. ಒಂದು ವರ್ಷವೂ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸದೆ ಹೊಸದಾಗಿ ಬರುವವರಿಗೆ ಆದ್ಯತೆ ನೀಡಲಾಗುತ್ತಿದೆ. ಸರ್ಕಾರ ಕೂಡಲೆ ಗೊಂದಲದ ಆದೇಶವನ್ನು ಹಿಂಪಡೆದು ಈ ಹಿಂದೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರನ್ನು ನೇಮಕಾತಿಯಲ್ಲಿ ಮೊದಲ ಆದ್ಯತೆಯಾಗಿ ಪರಿಗಣಿಸಬೇಕು. ವಾರಕ್ಕೆ 15 ತಾಸಿನ ಅವಧಿಯನ್ನು ವಿಪ ಸದಸ್ಯರಾದ ಆಯನೂರ ಮಂಜುನಾಥ ಹಾಗೂ ಎಸ್.ವಿ. ಸಂಕನೂರ ಅವರ ಸಲಹೆಯಂತೆ 10ರಿಂದ 12 ತಾಸಿಗೆ ಇಳಿಕೆ ಮಾಡಬೇಕು. 40ರಿಂದ 45 ವಿದ್ಯಾರ್ಥಿಗಳಿಗೆ ವರ್ಗಗಳನ್ನು ಮಾಡಬೇಕು. ಇದರಿಂದ ಕರೊನಾ ಸಮಯದಲ್ಲಿ ಅಂತರ ಕಾಯ್ದುಕೊಳ್ಳುವುದು, ಪರಿಣಾಮಕಾರಿ ಬೋಧನೆಗೆ ಅನುಕೂಲವಾಗುತ್ತದೆ. ಎಲ್ಲ ಉಪನ್ಯಾಸಕರಿಗೂ ಕೆಲಸ ಸಿಗುತ್ತದೆ ಎಂದು ಆಗ್ರಹಿಸಿದರು.

    ಸರ್ಕಾರ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಬೇಕೆ ಹೊರತು ಉದ್ಯೋಗದಿಂದ ತೆಗೆಯುವ ಕೆಲಸ ಮಾಡಬಾರದು. ಈ ಕುರಿತು ಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವರಿಗೂ ಮನವಿ ಸಲ್ಲಿಸಲಾಗುವುದು ಎಂದರು.

    ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಸಿಕಂದರ್ ರಿತ್ತಿ, ಜಿಲ್ಲಾ ಸಂಚಾಲಕ ಪ್ರಶಾಂತ ಬಳ್ಳಾರಿಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts