More

    ಚಿನ್ನಸ್ವಾಮಿಯಲ್ಲಿ ಇಂದು ಭಾರತ- ಆಸೀಸ್ ಅಂತಿಮ ಟಿ20 ಫೈಟ್: ತಂಡದಲ್ಲಿ ಪ್ರಮುಖ ಬದಲಾವಣೆ ಸಾಧ್ಯತೆ?

    ಬೆಂಗಳೂರು: ಟಿ20 ಸರಣಿ ಗೆಲುವಿನೊಂದಿಗೆ ಏಕದಿನ ವಿಶ್ವಕಪ್ ೈನಲ್ ಸೋಲಿನ ನೋವನ್ನು ಸ್ವಲ್ಪಮಟ್ಟಿಗೆ ತಗ್ಗಿಸಿಕೊಂಡಿರುವ ಭಾರತ ತಂಡ, ಗೆಲುವಿನ ಓಟ ಮುಂದುವರಿಸುವ ಮೂಲಕ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ತವಕದಲ್ಲಿದೆ. ಸೂರ್ಯಕುಮಾರ್ ಯಾದವ್ ಸಾರಥ್ಯದ ಯುವ ಭಾರತ ತಂಡ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ 5ನೇ ಹಾಗೂ ಅಂತಿಮ ಪಂದ್ಯವನ್ನು ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದ್ದು, ಸರಣಿ ಗೆಲುವಿನ ಅಂತರ ವಿಸ್ತರಿಸುವ ತವಕದಲ್ಲಿದೆ. ಜತೆಗೆ, ಟೀಮ್ ಇಂಡಿಯಾ ತವರಿನಲ್ಲಿ 2023ರ ಕೊನೇ ಪಂದ್ಯವನ್ನು ಗೆಲುವಿನೊಂದಿಗೆ ಸಂಭ್ರಮಿಸುವ ಹಂಬಲದಲ್ಲಿದೆ.

    ಸರಣಿಯಲ್ಲಿ ಸೋಲಿನ ಕಹಿಗಿಂತ ಗೆಲುವಿನ ಸಿಹಿ ಹೆಚ್ಚು ಕಂಡಿರುವ ಯುವ ಭಾರತಕ್ಕೆ ಬೆಂಚ್ ಸಾಮರ್ಥ್ಯದ ಪರೀಕ್ಷೆಗೆ ಈ ಪಂದ್ಯ ಸಹಕಾರಿ ಎನಿಸಿದೆ. ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ಹಾಗೂ ಏಕದಿನ ಸರಣಿಯಲ್ಲಿ ಇದೇ ತಂಡದ ಬಹುತೇಕ ಆಟಗಾರರು ಆಡಲಿದ್ದು, ತಂಡದ ಸಮತೋಲನ ಕಂಡುಕೊಳ್ಳುವ ನಿರೀಕ್ಷೆ ಇದೆ. 2024ರ ಟಿ20 ವಿಶ್ವಕಪ್‌ಗೆ ಮುನ್ನ ಬಾಕಿಯಿರುವ 6 ಪಂದ್ಯಗಳಲ್ಲಿ ಸಾಮರ್ಥ್ಯ ಪ್ರದರ್ಶಿಸುವ ಅವಕಾಶ ಇತರ ಆಟಗಾರರಿಗೂ ಲಭಿಸುವ ನಿರೀಕ್ಷೆ ಇದೆ.

    ಅನನುಭವಿ ಅಗ್ರ ಕ್ರಮಾಂಕದ ನಡುವೆಯೂ ಸರಣಿಯಲ್ಲಿ ರನ್‌ಮಳೆ ಹರಿಸಿರುವ ಟೀಮ್ ಇಂಡಿಯಾ, ಬ್ಯಾಟರ್‌ಗಳ ಸ್ವರ್ಗ ಎನಿಸಿರುವ ಚಿನ್ನಸ್ವಾಮಿಯಲ್ಲಿ ಮತ್ತೆ ರನ್‌ಪ್ರವಾಹ ಹರಿಸುವ ನಿರೀಕ್ಷೆ ಇದೆ. ಮೊದಲ ಮೂರು ಪಂದ್ಯಗಳಲ್ಲಿ ಬ್ಯಾಟರ್‌ಗಳು ಪ್ರಾಬಲ್ಯ ಸಾಧಿಸಿದ ಬಳಿಕ ರಾಯ್‌ಪುರ ಪಂದ್ಯದಲ್ಲಿ ಯುವ ವೇಗದ ಬೌಲಿಂಗ್ ವಿಭಾಗ ಲಯಕ್ಕೆ ಮರಳಿದೆ. ಸೂರ್ಯಕುಮಾರ್ ಸಮರ್ಥವಾಗಿ ತಂಡವನ್ನು ಮುನ್ನಡೆಸಿ ನಾಯಕರಾಗಿ ಮೊದಲ ಪರೀಕ್ಷೆಯಲ್ಲಿ ಯಶಸ್ಸು ಕಂಡಿದ್ದಾರೆ.

    ಗಾಯದಿಂದ ಚೇತರಿಸಿಕೊಂಡು ಕಣಕ್ಕಿಳಿದಿರುವ ಅಕ್ಷರ್ ಪಟೇಲ್ ಹಾಗೂ ರವಿ ಬಿಷ್ಣೋಯಿ ಸರಣಿಯಲ್ಲಿ ಸ್ಪಿನ್ ವಿಭಾಗದ ಅನುಭವದ ಕೊರತೆಯನ್ನು ನೀಗಿಸಿದ್ದಾರೆ. ಹಿಂದಿನ ಪಂದ್ಯದಲ್ಲಿ ಸ್ಪಿನ್ನರ್‌ಗಳು 8 ಓವರ್‌ಗಳಲ್ಲಿ 33 ರನ್ ಮಾತ್ರ ಬಿಟ್ಟುಕೊಟ್ಟಿದ್ದಾರೆ. ಇಶಾನ್ ಕಿಶನ್ ಬದಲಿಗೆ ಸ್ಥಾನ ಪಡೆದ ಜಿತೇಶ್ ಶರ್ಮ ಒತ್ತಡದಲ್ಲಿಯೂ ತಂಡಕ್ಕೆ ಉತ್ತಮ ಕೊಡುಗೆ ನೀಡಿ ಗಮನ ಸೆಳೆದಿದ್ದಾರೆ. ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಋತುರಾಜ್ ಗಾಯಕ್ವಾಡ್ ಬಿರುಸಿನ ಆರಂಭ ತಂಡದ ಯಶಸ್ಸಿನಲ್ಲಿ ಪೂರಕ ಎನಿಸಿದೆ. ದೀಪಕ್ ಚಹರ್ ವಾಪಸಾತಿ ಬೌಲಿಂಗ್ ವಿಭಾಗಕ್ಕೆ ಬಲ ನೀಡಿದೆ.
    ಏಕದಿನ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಅನನುಭವಿ ಬ್ಯಾಟರ್‌ಗಳು ಭಾರತ ಸ್ಪಿನ್ ದಾಳಿಯನ್ನು ಗುರುತಿಸುವಲ್ಲಿ ಎಡವಿದ್ದಾರೆ. ರವಿ ಬಿಷ್ಣೋಯಿ ಸರಣಿಯ 4 ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿದ್ದಾರೆ. ಕಳೆದ ಪಂದ್ಯದಲ್ಲಿ ಸುಧಾರಿತ ಬೌಲಿಂಗ್ ಪ್ರದರ್ಶನ ನಡುವೆಯೂ ಬ್ಯಾಟಿಂಗ್ ವೈಲ್ಯ ತಂಡಕ್ಕೆ ಹಿನ್ನಡೆ ತಂದಿತ್ತು. ಐಪಿಎಲ್ ಹರಾಜಿಗೂ ಮುನ್ನ ಆಸೀಸ್ ಆಟಗಾರರು ್ರಾಂಚೈಸಿಗಳ ಗಮನ ಸೆಳೆಯುವತ್ತ ದೃಷ್ಟಿ ಹರಿಸಿದ್ದಾರೆ.

    ವಾಷಿಂಗ್ಟನ್, ದುಬೆಗೆ ಅವಕಾಶ? ಹಿಂದಿನ ಪಂದ್ಯದಲ್ಲಿ 4 ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದ ಭಾರತ ಅಂತಿಮ ಪಂದ್ಯದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಆಲ್ರೌಂಡರ್‌ಗಳಾದ ವಾಷಿಂಗ್ಟನ್ ಸುಂದರ್, ಶಿವಂ ದುಬೆ ಹೊರತುಪಡಿಸಿ ಎಲ್ಲ ಆಟಗಾರರು ಕನಿಷ್ಠ ಒಂದು ಪಂದ್ಯವನ್ನಾಡಿದ್ದಾರೆ. ಟೀಮ್ ಇಂಡಿಯಾ ಪಾಲಿಗೆ ಔಪಚಾರಿಕ ಈ ಪಂದ್ಯ ಔಪಚಾರಿಕ ಎನಿಸಿರುವುದರಿಂದ ಇಬ್ಬರು ಆಟಗಾರರು ಅವಕಾಶ ಪಡೆಯಲಿದ್ದಾರೆ. ಏಷ್ಯನ್ ಗೇಮ್ಸ್ ಚಿನ್ನ ಗೆದ್ದ ತಂಡದ ಭಾಗವಾಗಿದ್ದ ದುಬೆ, ಸುಂದರ್ ಬಳಿಕ ಟೀಮ್ ಇಂಡಿಯಾ ಪರ ಕಣಕ್ಕಿಳಿದಿಲ್ಲ.

    ಟೀಮ್ ನ್ಯೂಸ್
    ಭಾರತ: ಆರಂಭಿಕರಾದ ಗಾಯಕ್ವಾಡ್ ಅಥವಾ ಜೈಸ್ವಾಲ್‌ಗೆ ವಿಶ್ರಾಂತಿ ನೀಡಿದರೆ ತಿಲಕ್ ವರ್ಮ ಆಡುವ ನಿರೀಕ್ಷೆ ಇದೆ. ಏಕದಿನ ವಿಶ್ವಕಪ್‌ನಿಂದ ಸತತವಾಗಿ ಆಡುತ್ತಿರುವ ನಾಯಕ ಸೂರ್ಯಕುಮಾರ್ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಬ್ರೇಕ್ ಪಡೆದರೂ ಅಚ್ಚರಿಯಿಲ್ಲ. ಸೂರ್ಯ ಹೊರಗುಳಿದರೆ ಉಪನಾಯಕ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸಲಿದ್ದಾರೆ. ಅಕ್ಷರ್ ಪಟೇಲ್ ಹಾಗೂ ರವಿ ಬಿಷ್ಣೋಯಿ ಬದಲಿಗೆ ವಾಷಿಂಗ್ಟನ್ ಸುಂದರ್, ಶಿವಂ ದುಬೆ ಸ್ಥಾನ ಪಡೆಯುವ ನಿರೀಕ್ಷೆ ಇದೆ.
    ಆಸ್ಟ್ರೇಲಿಯಾ: ಈಗಾಗಲೆ 4 ಪಂದ್ಯಗಳಲ್ಲಿ 19 ಆಟಗಾರರನ್ನು ಕಣಕ್ಕಿಳಿಸಿರುವ ಆಸೀಸ್ ಹಿಂದಿನ ಪಂದ್ಯದಲ್ಲಿ 5 ಬದಲಾವಣೆಯೊಂದಿಗೆ ಆಡಿತ್ತು. ವಿಶ್ವಕಪ್ ವಿಜೇತ ತಂಡದ ಸದಸ್ಯರು ತವರಿಗೆ ವಾಪಸ್ ಆಗಿರುವುದರಿಂದ ತಂಡದಲ್ಲಿ 13 ಆಟಗಾರರು ಮಾತ್ರ ಉಳಿದಿದ್ದು, ಸ್ಪಿನ್ನರ್ ತನ್ವೀರ್ ಸಂಘ ಬದಲಿಗೆ ಕೇನ್ ರಿಚರ್ಡ್‌ಸನ್ ಆಡುವ ಸಾಧ್ಯತೆ ಇದೆ.

    ಪಿಚ್ ರಿಪೋರ್ಟ್
    ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರನ್‌ಮಳೆಗೆ ಸಾಕ್ಷಿಯಾಗಿದ್ದ ಬೆಂಗಳೂರಿನ ಚಿನ್ನಸ್ವಾಮಿ ಅಂಗಣ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡಲಿದ್ದು, ಹೆಚ್ಚಿನ ರನ್ ನಿರೀಕ್ಷಿಸಬಹುದು. ಯಾವುದೇ ಮೊತ್ತ ರಕ್ಷಿಸಿಕೊಳ್ಳುವುದು ಬೌಲರ್‌ಗಳಿಗೆ ಸವಾಲೆನಿಸಲಿದೆ. ಜತೆಗೆ ಇಬ್ಬನಿಯ ಸಮಸ್ಯೆಯೂ ಕಾಡಲಿದೆ.

    ಮಳೆ ಭೀತಿ?
    ಕಳೆದ ಎರಡು ದಿನಗಳಿಂದ ಉದ್ಯಾನನಗರಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಪಂದ್ಯಕ್ಕೆ ಮಳೆ ಅಡಚಣೆ ತರುವ ಸಾಧ್ಯತೆಯೂ ಇದೆ. ಮಳೆ ಅಡ್ಡಿಯಾದರೂ ಪಂದ್ಯ ರದ್ದಾಗುವ ಸಾಧ್ಯತೆ ವಿರಳ.

    ಪಂದ್ಯ ಆರಂಭ: ರಾತ್ರಿ 7
    ನೇರಪ್ರಸಾರ: ಸ್ಪೋಟ್ಸ್ 18, ಜಿಯೋ ಸಿನಿಮಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts