More

    2 ದಶಕಗಳ ನಂತರ ಮನೆ ಸೇರಿದ ವೃದ್ಧ

    ಗದಗ: ಅವರಿಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ. 25 ವರ್ಷಗಳ ಹಿಂದೆ ಧಾರವಾಡ ಜಿಲ್ಲೆಯ ಕಲಘಟಗಿಯಿಂದ ಅದೇಗೋ ದೂರದ ಉತ್ತರಾಖಂಡ ತಲುಪಿದ್ದರು. ಅಲ್ಲಿ ಪಡಬಾರದ ಕಷ್ಟ ಪಟ್ಟಿದ್ರು. ವಾಪಸ್ ಮನೆಗೆ ಬರಬೇಕೆಂದರೆ ಭಾಷೆ ಸಮಸ್ಯೆ ಅಡ್ಡಿಯಾಗಿತ್ತು. ಇಷ್ಟು ವರ್ಷ ಉತ್ತರಾಖಂಡದ ಲೋಹಾಘಾಟ್ ಬಳಿಯ ಬಸ್ ನಿಲ್ದಾಣದಲ್ಲಿ ಕಾಲ ಕಳೆಯುತ್ತಿದ್ದ ಅವರನ್ನು ಗದಗ ನಗರದ ಐಟಿಬಿಪಿ (ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್) ಯೋಧರು ಕರೆತಂದು ಮರಳಿ ಮನೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

    ಹೀಗೆ, ದಶಕಗಳ ನಂತರ ಮನೆ ಸೇರಿರುವ ವ್ಯಕ್ತಿಯೇ ಕಲಘಟಗಿಯ ಕೆಂಚಪ್ಪ ವಡ್ಡರ. ಯಾವ ಕಾರಣಕ್ಕೆ ಊರು ಬಿಟ್ಟು ಹೋಗಿದ್ದರು ಎಂಬುದು ತಿಳಿದಿಲ್ಲ. ಆದರೆ, ಲೋಹಾಘಾಟ್ ಬಳಿ ಇರುವ ಡಾಬಾವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಹತ್ತಿರವಿದ್ದ ಬಸ್ ನಿಲ್ದಾಣದಲ್ಲಿ ಕೊರೆಯುವ ಚಳಿಯಲ್ಲಿ ಹೊದಿಕೆ ಇಲ್ಲದೆ ಮಲಗುತ್ತಿದ್ದರು. ದೂರದ ಊರಲ್ಲಿ ಯಾರೊಬ್ಬರೂ ಈತನ ಸಂಕಷ್ಟ ಕೇಳದಿದ್ದಾಗ ತವರಿಗೆ ಮರಳುವ ಆಸೆಯನ್ನೇ ಕೈಬಿಟ್ಟಿದ್ದರು. ವಯಸ್ಸು ಕಳೆದಂತೆಲ್ಲ ಹೋಟೆಲ್ ಕೆಲಸ ಮಾಡಲು ಆಗದೆ ಮಾಲೀಕರಿಂದ ಕಿರುಕುಳ ಅನುಭವಿಸುತ್ತ ಕಾಲ ಕಳೆಯುತ್ತಿದ್ದರು.

    ಲೋಹಾಘಾಟ್​ನಲ್ಲಿ ಕಾರ್ಯನಿರ್ವಹಿಸುವ ಯೋಧರಾದ ಗದಗ ನಗರದ ಶರಣಬಸವ ರಾಗಾಪೂರ ಮತ್ತು ರಿಯಾಜ್ ಅವರು ಕೆಂಚಪ್ಪ ಕೆಲಸ ಮಾಡುತ್ತಿರುವ ಡಾಬಾದಲ್ಲಿ ಟೀ ಕುಡಿಯಲು ಬಂದಿದ್ದರು. ಅವರು ಕನ್ನಡದಲ್ಲಿ ಮಾತನಾಡುತ್ತಿರುವುದನ್ನು ಕೇಳಿದ ಕೆಂಚಪ್ಪನಿಗೆ ಸ್ವರ್ಗವೇ ಸಿಕ್ಕಂತಾಗಿತ್ತು. ಯೋಧರ ಬಳಿ ತನ್ನ ಗೋಳು ತೋಡಿಕೊಂಡಿದ್ದನು. ಆಗ ಯೋಧರು, ‘ನಾವು ಊರಿಗೆ ಹೋಗುವಾಗ ನಮ್ಮೊಂದಿಗೆ ಬರುತ್ತಿಯಾ’ ಎಂದು ಕೇಳಿದ್ದರು. ಡಾಬಾ ಮಾಲೀಕ ಬಿಡುವುದಿಲ್ಲ ಎಂದು ಕೆಂಚಪ್ಪ ತನ್ನ ಅಸಹಾಯಕತೆ ವ್ಯಕ್ತಪಡಿಸಿದ್ದನು. ಆನಂತರ ಡಾಬಾ ಮಾಲೀಕನ ಜತೆಗೆ ಯೋಧರು ರ್ಚಚಿಸಿ ಕೆಂಚಪ್ಪನನ್ನು ವಾಪಸ್ ಕರೆತಂದಿದ್ದಾರೆ.

    ವಿಡಿಯೋ ಮೂಲಕ ಕುಟುಂಬಸ್ಥರ ಪತ್ತೆ

    ಫೆ. 6ರಂದು ಉತ್ತರಾಖಂಡದಿಂದ ಹೊರಟ ಯೋಧರು ದೆಹಲಿಯಲ್ಲಿ ಕೆಂಚಪ್ಪನಿಗೆ ಕ್ಷೌರ ಮಾಡಿಸಿ ಹೊಸ ಬಟ್ಟೆ ಕೊಟ್ಟರು. ಫೆ. 8ರಂದು ದೆಹಲಿಯಿಂದ ಹೊರಟು ಫೆ. 9ರ ರಾತ್ರಿ ಗದಗ ನಗರದ ಬೆಟಗೇರಿಯಲ್ಲಿರುವ ಯೋಧ ಶರಣಬಸವ ರಾಗಾಪೂರ ಅವರು ತಮ್ಮ ಮನೆಗೆ ಕರೆದೊಯ್ದರು. ಯೋಧರು ಉತ್ತರಾಖಂಡದಲ್ಲಿರುವಾಗಲೇ ಕೆಂಚಪ್ಪನ ವಿಷಯ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಷಯ ಕಲಘಟಗಿಯಲ್ಲಿರುವ ಕೆಂಚಪ್ಪನ ಸಂಬಂಧಿಕರಿಗೆ ತಿಳಿದ ಕೂಡಲೇ ಫೆ.10ರಂದು ಕೆಂಚಪ್ಪನ ಮಗ, ಮಗಳು ಮತ್ತು ಕುಟುಂಬಸ್ಥರು ಬೆಟಗೇರಿಗೆ ಬಂದು ಕೆಂಚಪ್ಪನನ್ನು ಕಂಡು ಕಣ್ಣೀರಾದರು. ತಂದೆ ಸಿಕ್ಕ ಖುಷಿಯಲ್ಲಿದ್ದ ಮ್ಕಕಳು ಹಾಗೂ ಸಂಬಂಧಿಕರು ಯೋಧರ ಕಾರ್ಯ ಶ್ಲಾಘಿಸಿ ಕೈಮಗಿದರು. ಹೂವಿನಹಾರ ಹಾಕಿ ಅಭಿಮಾನಪಟ್ಟರು. ಆಗ ಇಬ್ಬರು ಯೋಧರ ಮುಖದಲ್ಲಿ ಸಂತೃಪ್ತಿ ಭಾವ ಮೂಡಿತ್ತು.

    ಕೆಂಚಪ್ಪ ವಡ್ಡರ ಅವರು 25 ವರ್ಷಗಳ ಕಾಲ ಲೋಹಾಘಾಟ್ ಬಳಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ. ಆದರೂ ಇಷ್ಟು ದಿನ ಅಲ್ಲಿ ಹೇಗೆ ಜೀವನ ಮಾಡಿದರು ಎಂಬುದು ವಿಚಿತ್ರ. ಕೊರೆಯುವ ಚಳಿಯಲ್ಲಿ ಹಾಸಿಗೆ ಇಲ್ಲದೆ ಬಸ್ ನಿಲ್ದಾಣದಲ್ಲಿ ಮಲಗಿ ಜೀವನ ನಡೆಸಿದ್ದಾರೆ. ಅವರು ಕನ್ನಡಿಗರು ಎಂದು ತಿಳಿದ ಕೂಡಲೇ ಜೀವ ತಡೆದುಕೊಳ್ಳಲು ಆಗಲಿಲ್ಲ. ಅವರನ್ನು ಊರಿಗೆ ಕರೆದುಕೊಂಡು ಹೋಗಿ ಅವರ ಮನೆಗೆ ಸೇರಿಸಬೇಕು ಎಂಬ ಆಸೆ ಇತ್ತು. ಅದನ್ನು ಮಾಡಿದ ಖುಷಿ ಇದೆ.
    | ಶರಣಬಸವ ರಾಗಾಪೂರ ಐಟಿಬಿಪಿ ಯೋಧ ಗದಗ

    ನನ್ನನ್ನು ಮರಳಿ ಸ್ವಂತ ಊರಿಗೆ ಕರೆದುಕೊಂಡು ಬಂದಿರುವ ಇಬ್ಬರು ಯೋಧರಿಗೆ ಒಳ್ಳೆಯದಾಗಲಿ. ನನ್ನ ಪಾಲಿಗೆ ಅವರಿಬ್ಬರು ದೇವರು ಸಮಾನ.
    | ಕೆಂಚಪ್ಪ ವಡ್ಡರ ವೃದ್ಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts