More

    ಕಟ್ಟಿದ ಗೂಡು ತೊರೆದು ಹೋದ ಬೆಳ್ಳಕ್ಕಿಗಳು

    ಕಾರವಾರ:ಶಿರಸಿ ತಾಲೂಕಿನ ಮುಂಡಿಗೆಕೆರೆಗೆ ಸಂತಾನೋತ್ಪತ್ತಿಗೆ ಬಂದ ಬೆಳ್ಳಕ್ಕಿಗಳು ಈ ವರ್ಷ ಅವಧಿಗೂ ಮುಂಚೆ ವಾಪಸಾಗಿವೆ. ಇವುಗಳು ಕಟ್ಟಿದ ಗೂಡುಗಳನ್ನು ತೊರೆದು ಹೋಗಿದ್ದು, ಇದು ಹವಾಮಾನ ವೈಪರೀತ್ಯದ ಪರಿಣಾಮ ಎಂದು ಅಂದಾಜಿಸಲಾಗಿದೆ. ಭರದ ಮುನ್ಸೂಚನೆಯೇ ಎಂಬ ಆತಂಕ ಮೂಡಿದೆ.
    ಸೋಂದಾ ಗ್ರಾಪಂ ವ್ಯಾಪ್ತಿಯ ಬಾಡಲಕೊಪ್ಪ ಮಜರೆಯ ಸರ್ವೇ ನಂಬರ್ 141 ರಲ್ಲಿ ಸುಮಾರು 4.12 ಎಕರೆ ವಿಸ್ತೀರ್ಣದಲ್ಲಿರುವ ಮುಂಡಿಗೆ ಕೆರೆ ಸಾವಿರಾರು ಬೆಳ್ಳಕ್ಕಿಗಳ ಹೆರಿಗೆ ಮನೆ.

    ಪ್ರತಿ ವರ್ಷ ದೇಶದ ವಿವಿಧ ಭಾಗಗಳಿಂದ ಬೆಳ್ಳಕ್ಕಿಗಳು ಮಳೆಗಾಲ ಪ್ರಾರಂಭಕ್ಕೂ ಪೂರ್ವ ಇಲ್ಲಿಗೆ ಬಂದು, ಕಸ, ಕಡ್ಡಿಗಳಿಂದ ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿ ಮಾಡಿ, ಅವುಗಳಿಗೆ ಹಾರಲು ಕಲಿಸಿಕೊಂಡು ಸುಮಾರು ಅಕ್ಟೋಬರ್ ಅಂತ್ಯಕ್ಕೆ ಮರಿಗಳೊಟ್ಟಿಗೆ ವಾಪಸಾಗುತ್ತವೆ.
    ಪ್ರತಿ ವರ್ಷ ಸಾವಿರಾರು ಪಕ್ಷಿಗಳು ಇಲ್ಲಿನ ಮುಂಡಿಗೆ ಗಿಡಗಳ ಮೇಲೆ ಸಂಸಾರ ಹೂಡುತ್ತವೆ. ಅದೆಷ್ಟೋ ವರ್ಷಗಳಿಂದ ಇಲ್ಲಿನ ಜನ ಬೆಳ್ಳಕ್ಕಿಗಳ ಕುಟುಂಬ ವಿಸ್ತರಣೆಯ ಈ ಪ್ರಕ್ರಿಯೆಯನ್ನು ನೋಡಿಕೊಂಡು ಬಂದಿದ್ದಾರೆ.

    ಇದನ್ನೂ ಓದಿ:ಭಗವಂತನ ಮಹಿಮೆ ಅರಿತರೆ ದೈವ ಸಾಕ್ಷಾತ್ಕಾರ

    1980 ರ ಹೊತ್ತಿಗೆ ಪಕ್ಷಿ ತಜ್ಞ ಪಿ.ಡಿ.ಸುದರ್ಶನ್ ಅವರು ಈ ತಾಣವನ್ನು ಗುರುತಿಸಿದರು. 1995 ರಿಂದ ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಸೂಚನೆಯಂತೆ ಜಾಗೃತ ವೇದಿಕೆ ಈ ತಾಣವನ್ನು ಸಂರಕ್ಷಿಸಿಕೊಂಡು ಬಂದಿದೆ.

    ಇದೇ ವರ್ಷ ಜನವರಿಯಲ್ಲಿ ಇದನ್ನು ಪಕ್ಷಿ ಸಂರಕ್ಷಿತ ಪ್ರದೇಶ ಎಂದು ಅರಣ್ಯ ಇಲಾಖೆ ಘೋಷಿಸಿ, ಫಲಕ ಅನಾವರಣ ಮಾಡಿದೆ.
    ಗೂಡು ಬಿಟ್ಟು ಹಾರಿದವು:
    ವರ್ಷದಂತೆ ಈ ಬಾರಿಯೂ ಜೂನ್ 18 ರ ಹೊತ್ತಿಗೆ ಬೆಳ್ಳಕ್ಕಿಗಳು ಮುಂಡಿಗೆ ಕೆರೆಗೆ ಬಂದು, 22 ರ ಹೊತ್ತಿಗೆ ಗೂಡು ಕಟ್ಟಿದ್ದವು. ಆದರೆ, ಅದೇನಾಯಿತೋ ತಿಳಿಯದು. ಆಗಸ್ಟ್ 2 ರಿಂದ ಭಾಗಶಃ ಪಕ್ಷಿಗಳು ಇಲ್ಲಿಂದ ಜಾಗ ಖಾಲಿ ಮಾಡಲು ಆರಂಭಿಸಿದವು. ಸದ್ಯ ಈಗ 15, ರಿಂದ 16 ಪಕ್ಷಿಗಳು ಮಾತ್ರ ಉಳಿದುಕೊಂಡಿವೆ.

    ಆರಂಭದಲ್ಲೇ ಗೂಡು ಕಟ್ಟಿ ಇಟ್ಟ ಮೊಟ್ಟೆಗಳು ಈಗ ಮರಿಯಾಗಿವೆ. ಅಂಥ ಪಕ್ಷಿಗಳು ಮಾತ್ರ ಉಳಿದುಕೊಂಡಿದ್ದು, ತಾಯಿ ಬೆಳ್ಳಕ್ಕಿಗಳು ಅವುಗಳ ಆರೈಕೆ ಪ್ರಾರಂಭಿಸಿವೆ.
    ಮಾಹಿತಿ:
    ಜಾಗೃತ ವೇದಿಕೆಯ ರತ್ನಾಕರ ಹೆಗಡೆ ಅವರು ಮುಂಡಿಗೆಕೆರೆಯ ಪಕ್ಷಿಗಳ ಚಲನವಲನಗಳನ್ನು ಕಳೆದ ಸುಮಾರು 2 ದಶಕಗಳಿಂದ ಗಮನಿಸಿ, ದಾಖಲು ಮಾಡುತ್ತಿದ್ದಾರೆ. ಮಾತ್ರವಲ್ಲ ಇಲ್ಲಿ ಮಳೆಯ ಮಾಹಿತಿಯನ್ನೂ ಅವರು ಲೆಕ್ಕ ಇಡುತ್ತಿದ್ದಾರೆ.

    2005 ರಲ್ಲಿ ಒಮ್ಮೆ ಮೇ ಅಂತ್ಯಕ್ಕೆ ಬಂದು, ಕೆಲವೇ ದಿನಗಳಲ್ಲಿ ವಾಪಸಾಗಿದ್ದವು. ಮತ್ತೆ ಕೆಲ ದಿನಗಳಲ್ಲಿ ವಾಪಾಸ್‌ ಬಂದು ಗೂಡು ಕಟ್ಟಿದ್ದವು. ಈ ಭಾಗದಲ್ಲಿ 2015 ರಲ್ಲಿ ಅತಿ ಕಡಿಮೆ ಎಂದರೆ 1198.3 ಮಿಮೀ ಮಳೆಯಾಗಿತ್ತು. ಆಗಲೂ ಪಕ್ಷಿಗಳು ವಂಶಾಭಿವೃದ್ಧಿ ಮಾಡಿದ್ದವು.

    ಈಗಾಗಲೇ ಈ ಭಾಗದಲ್ಲಿ ಆಗಸ್ಟ್‌ 24 ರವರೆಗೆ 1488 ಮಿಮೀ ಮಳೆಯಾಗಿದೆ. ಆದರೂ ಅವು ಹಾರಿವೆ ಅತಿಯಾದ ಬಿಸಿಲಿಗೆ ಅವು ಹಾರಿವೆಯೋ ಎಂಬ ಅನುಮಾನ ಮೂಡಿದೆ ಎನ್ನುತ್ತಾರೆ ರತ್ನಾಕರ ಹೆಗಡೆ.





    ಹಕ್ಕಿಗಳಿಗೆ ಪರಿಸರದ ಸೂಕ್ಷ್ಮಗಳ ಅರಿವಿರುತ್ತವೆ. ಮುಂಡಿಗೆಕೆರೆಗೆ ಬೆಳ್ಳಕ್ಕಿಗಳ ಆಗಮನವಾದ ಐದಾರು ದಿನದಲ್ಲಿ ಮುಂಗಾರು ಮಳೆ ಪ್ರಾರಂಭವಾಗುವುದನ್ನು ನಾನು ದಾಖಲಿಸಿದ್ದೇನೆ. ಆದರೆ, ಈ ಬಾರಿ ಏನಾಯಿತೋ ತಿಳಿಯದು, ಅವುಗಳು ಆಗಸ್ಟ್ ಮೊದಲ ವಾರದಿಂದಲೇ ಹಾರಿ ಹೋಗಲು ಪ್ರಾರಂಭಿಸಿದವು. ಈಗ ಕೆಲವೇ ಪಕ್ಷಿಗಳು ಉಳಿದುಕೊಂಡಿವೆ.
    ರತ್ನಾಕರ ಹೆಗಡೆ
    ಬಾಡಲಕೊಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts