More

    ಭೀತಿ ಹುಟ್ಟಿಸಿದ ಜಲ್ಲಿ ಕ್ರಷರ್; ಗ್ರಾಮಗಳಲ್ಲಿ ಆವರಿಸಿದ ಧೂಳು; ಬಿರುಕು ಬಿಟ್ಟ ಮನೆಗಳು

    ಪ್ರದೀಪ್ ಕುಮಾರ್ ಆರ್.ದೊಡ್ಡಬಳ್ಳಾಪುರ: ಸಕ್ಕರೆ ಗೊಲ್ಲಹಳ್ಳಿ ಪಂಚಾಯಿತಿಯ ಹಳೇಕೋಟೆ, ಸಂಕರಸನಹಳ್ಳಿ ಹಾಗೂ ಭಕ್ತರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಜಲ್ಲಿ ಕ್ರಷರ್ ಹಾವಳಿಗೆ ಜನರು ಸಂಕಷ್ಟ ಅನುಭವಿಸುವಂತಾಗಿದೆ.

    ಚೆನ್ನವೀರನಹಳ್ಳಿ, ಬೊಮ್ಮನಹಳ್ಳಿ, ಬ್ಯಾಡರಹಳ್ಳಿ ಸಮೀಪದಲ್ಲಿರುವ ಕ್ರಷರ್‌ನಿಂದಾಗಿ ಗ್ರಾಮ ಸಂಪೂರ್ಣ ಧೂಳುಮಯವಾಗಿವೆ. ಈ ಭಾಗದಲ್ಲಿ ಕಲ್ಲುಗಣಿಗಾರಿಕೆ ಆರಂಭದ ನಂತರ ಹಳೇಕೋಟೆ ಗ್ರಾಮದ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ಗ್ರಾಮದ ಸಾಕಷ್ಟು ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಹೊಸ ಮನೆಗಳ ಗೋಡೆಗಳೂ ಬಿರುಕಾಗುತ್ತಿವೆ.

    ಪ್ರತಿ ದಿನ ರಾತ್ರಿ ಬಂಡೆ ಒಡೆಯಲು ಸಿಡಿಮದ್ದು ಸಿಡಿಸುವ ಕಾರಣ ಭೂಮಿ ಕಂಪಿಸುತ್ತದೆ. ಇದರಿಂದ ಭಯದಿಂದ ನಿದ್ದೆ ಮಾಡಲಾಗದ ಸ್ಥಿತಿ ಉಂಟಾಗಿದೆ.

    ಸಂಪೂರ್ಣ ಪರಿಸರ ನಾಶ: ಕ್ರಷರ್‌ನಿಂದ ಗ್ರಾಮದ ರಸ್ತೆಗಳು ಧೂಳುಮಯವಾಗಿದ್ದು, ಸುತ್ತಮುತ್ತಲ ವಾತಾವರಣ ಸಂಪೂರ್ಣ ಕಲುಷಿತವಾಗಿದೆ. ಅಂತರ್ಜಲ ಕುಸಿದು ಜಾನುವಾರುಗಳಿಗೆ ಕುಡಿಯಲು ನೀರು, ಮೇವು ಸಿಗದಂತಾಗಿದೆ.

    ಅಧಿಕಾರಿಗಳ ನಿರ್ಲಕ್ಷ: ಈಗಾಗಲೇ ಅನೇಕ ಬಾರಿ ಶಾಸಕರು, ತಹಸೀಲ್ದಾರ್, ಪೊಲೀಸ್ ಇಲಾಖೆಗೆ ಮನವಿ ಮಾಡಿದರೂ ಕ್ರಮ ಜರುಗಿಸಿಲ್ಲ. ಎಲ್ಲರೂ ಬಂದು ಹೋಗುತ್ತಾರೆ. ಆದರೆ ಸಮಸ್ಯೆ ಮಾತ್ರ ಬಗೆಹರಿಸುತ್ತಿಲ್ಲ ಎಂದು ಜನ ದೂರುತ್ತಾರೆ.

    ಜಲ್ಲಿ ಕ್ರಷರ್ ನಮ್ಮ ವ್ಯಾಪ್ತಿಗೆ ಬರದ ಕಾರಣ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಮೇಲಧಿಕಾರಿಗೆ ದೂರು ನೀಡಲಾಗಿದೆ.
    ಸೌಮ್ಯ, ಪಿಡಿಒ ಸಕ್ಕರೆ ಗೊಲ್ಲಹಳ್ಳಿ ಗ್ರಾಪಂ

    ಸ್ಥಳ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಅಕ್ರಮ ಗಣಿಗಾರಿಕೆ ಕಂಡು ಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು.
    ಅರುಳ್ ಕುಮಾರ್, ಉಪವಿಭಾಗಾಧಿಕಾರಿ

    ಪ್ರತಿ ರಾತ್ರಿ ಬಂಡೆ ಸಿಡಿಸುವ ಕಾರಣ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಅಧಿಕಾರಿಗಳಿಗೆ ಮನವಿ ಮಾಡಿದರೂ ಸರ್ಕಾರದ ಅನುಮತಿ ಇದೆ ಎಂದು ಸುಮ್ಮನಾಗುತ್ತಾರೆ. ನಾವು ಅವರನ್ನು ಪ್ರಶ್ನೆ ಮಾಡುವಂತಿಲ್ಲ.
    ಭಾಗ್ಯಮ್ಮ, ಹಳೇಕೋಟೆ ಗ್ರಾಮನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts