More

    ತ್ಯಾಜ್ಯದಿಂದ ತುಂಬಿದೆ ಚರಂಡಿ!

    ಹಾನಗಲ್ಲ: ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿರುವ ಹೊಸ ಬಡಾವಣೆಗಳ ಚರಂಡಿಗಳಲ್ಲಿ ನೀರು ಹರಿಯಲು ಅಡೆತಡೆಗಳಿದ್ದರೂ ಸ್ವಚ್ಛತೆಯತ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಗಮನಹರಿಸುತ್ತಿಲ್ಲ. ಮಳೆಗಾಲ ಪೂರ್ವದ ಸಿದ್ಧತೆಗಳೂ ಕಂಡುಬರುತ್ತಿಲ್ಲ.
    ಮಳೆಗಾಲ ಪೂರ್ವದಲ್ಲಿ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಗಟಾರಗಳ ನೀರು ಸರಾಗವಾಗಿ ಹರಿದು ಹೋಗುವಂತೆ ಸ್ವಚ್ಛಗೊಳಿಸಿ ನೀರು ನಿಲ್ಲದಂತೆ ನಿಗಾ ವಹಿಸಬೇಕಿದ್ದ ಪುರಸಭೆ, ಅಂಥ ಸಿದ್ಧತೆಗೆ ಮುಂದಾಗುತ್ತಿಲ್ಲ. ಮಳೆಗಾಲ ಶುರುವಾಗಿದ್ದರೂ ಪಟ್ಟಣದ ಹಲವು ವಾರ್ಡ್‌ಗಳ ಚರಂಡಿಗಳು ಕಸ, ತಾಜ್ಯ, ಹೂಳಿನಿಂದ ತುಂಬಿ ತುಳುಕುತ್ತಿವೆ.
    ಬೆಳೆದು ನಿಂತ ಗಿಡಗಳು: ಗಂಗಾ ನಗರದ ರಸ್ತೆಗಳ ಗಟಾರಗಳನ್ನು ಸ್ವಚ್ಛಗೊಳಿಸಿ ಹಲವು ತಿಂಗಳುಗಳೇ ಗತಿಸಿದೆ. ರಸ್ತೆಯ ಇಕ್ಕೆಲಗಳಲ್ಲಿ ಗಟಾರಗಳು ಕಾಣದಂತೆ ಗಿಡಗಳು ಬೆಳೆದು ನಿಂತಿವೆ. ಇವುಗಳಲ್ಲಿ ವಿಷಜಂತುಗಳು ಓಡಾಡುತ್ತಿವೆ. ಈ ಬಡಾವಣೆಯ ನಿವಾಸಿಗಳು ಹತ್ತಾರು ಬಾರಿ ಪುರಸಭೆ ಗಮನಕ್ಕೆ ತಂದಿದ್ದರೂ, ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಗಟಾರದಲ್ಲಿ ನೀರು ನಿಂತು ದುರ್ವಾಸನೆ ಹರಡುತ್ತಿದೆ. ಬಡಾವಣೆಯ ಮನೆ ಬಳಕೆ, ಮಳೆ ನೀರು ಮುಂದೆ ಸಾಗಲು ಸಾಧ್ಯವಾಗದ ರೀತಿಯ ಅವೈಜ್ಞಾನಿಕವಾಗಿ ಗಟಾರಗಳನ್ನು ನಿರ್ಮಿಸಿರುವುದೂ ಈ ಸಮಸ್ಯೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
    ಕೆಶಿಪ್ ರಸ್ತೆಯಿಂದಾಗಿ ಸಮಸ್ಯೆ: ಕಳೆದ ನಾಲ್ಕು ವರ್ಷಗಳ ಹಿಂದೆ ತಡಸ-ಶಿವಮೊಗ್ಗ ರಸ್ತೆ ನಿರ್ಮಿಸಿದ್ದ ಲೋಕೋಪಯೋಗಿ ಇಲಾಖೆಯ ಕೆಶಿಪ್ ವಿಭಾಗ, ಬಡಾವಣೆಗಿಂತ ಎತ್ತರದಲ್ಲಿ ರಸ್ತೆ-ಗಟಾರಗಳನ್ನು ನಿರ್ಮಿಸಿದೆ. ಈ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಬಡಾವಣೆಯ ಗಟಾರಗಳ ನೀರನ್ನು ಕೆಶಿಪ್ ರಸ್ತೆಯ ಪಕ್ಕದಲ್ಲಿರುವ ಚರಂಡಿಗೆ ಹರಿಸಲು ಸಾಧ್ಯವಾಗುತ್ತಿಲ್ಲ.
    ಕುಮಾರೇಶ್ವರ ಬಡಾವಣೆಯ ಬವಣೆ: ಪಟ್ಟಣದ ಕುಮಾರೇಶ್ವರ ನಗರದ ನಿವಾಸಿಗಳಿಗೆ ಮಳೆಗಾಲ ಬಂತೆಂದರೆ ನೀರಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿ ಎದುರಾಗುತ್ತದೆ. ತಗ್ಗು ಪ್ರದೇಶದಲ್ಲಿ ನಿರ್ಮಾಣವಾದ ಕುಮಾರೇಶ್ವರ ಬಡಾವಣೆಗೆ ಇದರ ಮೇಲ್ಭಾಗದಲ್ಲಿರುವ ದರ್ಗಾ, ನವನಗರ, ಚಿದಂಬರನಗರ ಸೇರಿ ಹಲವು ಬಡಾವಣೆಗಳ ನೀರು ಹರಿದುಬರುತ್ತದೆ. ಅದೆಲ್ಲವೂ ಇಲ್ಲಿನ ಮನೆಗಳಿಗೆ ನುಗ್ಗಿ ಆತಂಕ ಸೃಷ್ಟಿಸುತ್ತದೆ. ಈ ನೀರನ್ನು ಹೊರಹಾಕಲು ರಾಜಕಾಲುವೆ ನಿರ್ಮಿಸಿದ್ದರೂ ನೀರು ಸರಾಗವಾಗಿ ಹರಿದು ಹೋಗದೆ ಮನೆಗಳು ಮತ್ತು ಕಾಂಪೌಂಡ್‌ನಲ್ಲಿ ಹರಡಿಕೊಳ್ಳುತ್ತದೆ. ಈ ಸಮಸ್ಯೆಯನ್ನು ಪ್ರತಿವರ್ಷವೂ ಇಲ್ಲಿನ ನಿವಾಸಿಗಳು ಎದುರಿಸುವುದು ಅನಿವಾರ್ಯವಾಗುತ್ತಿದೆ.
    ಸ್ಯಾನಿಟರಿ ಇನ್ಸ್‌ಪೆಕ್ಟರ್ ಹುದ್ದೆ ಖಾಲಿ: ಹಲವು ವರ್ಷಗಳಿಂದ ಪುರಸಭೆಯಲ್ಲಿ ಸ್ಯಾನಿಟರಿ ಇನ್ಸ್‌ಪೆಕ್ಟರ್ ಹುದ್ದೆ ಖಾಲಿ ಇದೆ. ಹೀಗಾಗಿ ಕಂದಾಯ ಅಧಿಕಾರಿ ಮತ್ತು ತೀರಾ ಕೆಳಹಂತದ ಸಿಬ್ಬಂದಿ ನೈರ್ಮಲ್ಯ ವಿಭಾಗ ನಿಭಾಯಿಸುತ್ತಿದ್ದಾರೆ. ಕಸ ನಿರ್ವಹಣೆ, ನೈರ್ಮಲ್ಯ ವಿಭಾಗದ ಮೇಲ್ವಿಚಾರಣೆಗೆ ಪ್ರತ್ಯೇಕ ಅಧಿಕಾರಿ ಇಲ್ಲದ್ದರಿಂದಾಗಿ ವ್ಯವಸ್ಥಿತವಾಗಿ ಕೆಲಸಗಳು ನಡೆಯದಂತಾಗಿವೆ. ನಿವಾಸಿಗಳ ಮನವಿ-ದೂರುಗಳನ್ನು ಪರಿಶೀಲಿಸಿ ಕಾಲಕಾಲಕ್ಕೆ ಕೆಲಸ ಮಾಡಲಾಗುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

    ಕಳೆದ ಆರು ತಿಂಗಳಿಂದ ನಮ್ಮ ಬಡಾವಣೆಯ ಗಟಾರಗಳನ್ನು ಸ್ವಚ್ಛಗೊಳಿಸುವಂತೆ ಹಾಗೂ ಗಿಡಗಳನ್ನು ಕತ್ತರಿಸುವಂತೆ ಕೇಳಿಕೊಂಡರೂ ಯಾರೊಬ್ಬರೂ ಗಮನ ನೀಡುತ್ತಿಲ್ಲ. ಇಲ್ಲಿನ ಜನರು ಮನೆಯಿಂದ ಹೊರಗೆ ಓಡಾಡುವುದೂ ಕಷ್ಟವಾಗುತ್ತಿದೆ. ಪುರಸಭೆ ಸದಸ್ಯರು ಇಲ್ಲಿಗೆ ಭೇಟಿ ನೀಡುತ್ತಿಲ್ಲ. ಸಮಸ್ಯೆ ಆಲಿಸುತ್ತಿಲ್ಲ.
    I ಸುರೇಶಗೌಡ ಪಾಟೀಲ, ಗಂಗಾ ನಗರ ನಿವಾಸಿ

    ಪುರಸಭೆ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಬಡಾವಣೆಗಳು ಹೆಚ್ಚುತ್ತಿವೆ. ಆದರೆ, ಅದಕ್ಕನುಗುಣವಾಗಿ ಪೌರ ಕಾರ್ಮಿಕ ಸಿಬ್ಬಂದಿಯಿಲ್ಲ. ಇರುವ ಸಿಬ್ಬಂದಿ ಬಳಸಿಕೊಂಡು ಪಟ್ಟಣದ ಎಲ್ಲ ಬಡಾವಣೆಗಳ ಸಮಸ್ಯೆಗಳನ್ನು ಗಮನಿಸಿ ಪರಿಹರಿಸುತ್ತೇವೆ. ಸಾರ್ವಜನಿಕರು ತಮ್ಮ ಮನೆಯ ಸುತ್ತಲಿನ ಸ್ವಚ್ಛತೆಗೆ ಸಹಕರಿಸಬೇಕು.
    I ಪಿ.ಕೆ. ಗುಡದಾರಿ, ಮುಖ್ಯಾಧಿಕಾರಿ ಹಾನಗಲ್ಲ ಪುರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts